ಪ್ರಕೃತಿ ವಿಕೋಪ; ಪರಿಹಾರ ಕೈಗೊಳ್ಳಿ

7
ತುರ್ತು ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರವೀಂದ್ರ ಸೂಚನೆ

ಪ್ರಕೃತಿ ವಿಕೋಪ; ಪರಿಹಾರ ಕೈಗೊಳ್ಳಿ

Published:
Updated:

ಚಿತ್ರದುರ್ಗ: ಜಿಲ್ಲೆಯಲ್ಲಿ ಮುಂಗಾರು ಮಳೆ, ಬಿರುಗಾಳಿ, ಪ್ರಕೃತಿ ವಿಕೋಪ ದಿಂದ ನಾಲ್ಕು ಜೀವ ಹಾನಿಯಾಗಿದ್ದು, ಅವರಿಗೆ ₹ 13 ಲಕ್ಷ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿಗಳ ಕುರಿತು ಸೋಮವಾರ ಹಮ್ಮಿಕೊಂಡಿದ್ದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಾನಿಗೆ ಸಂಬಂಧಿಸಿದಂತೆ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಸಮರೋಪಾ ದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಮುಂದಾಗಬೇಕು’ ಎಂದು ಸೂಚಿಸಿದರು. 

‘ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ 9 ಜಾನುವಾರು, 15 ಕುರಿ, ಮೇಕೆ ಮೃತಪಟ್ಟಿದ್ದು ಪರಿಹಾರವಾಗಿ ₹ 3.32 ಲಕ್ಷ ನೀಡಲಾಗಿದೆ. 105 ಮನೆಗಳು ಭಾಗಶ: ಹಾನಿಯಾಗಿದ್ದು, ಒಂದು ಮನೆ ಪೂರ್ಣ ಹಾನಿಗೊಳಗಾಗಿದೆ.  ₹ 9.75 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜೂ 11 ರವರೆಗೆ ವಾಡಿಕೆ 122 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 232 ಮಿ.ಮೀ. ಮಳೆಯಾಗಿದೆ. ಈವರೆಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಮುಂಗಾರು ಮಳೆಯಾಗಿದ್ದು, ಬಿತ್ತನೆ ಕಾರ್ಯ ನಡೆಯುತ್ತಿದೆ’ ಎಂದರು.

‘ಕುಡಿಯುವ ನೀರು ಸರಬರಾಜು ಮಾಡಿರುವ ಟ್ಯಾಂಕರ್‌ಗಳ ಮಾಲೀಕರಿಗೆ ಬಾಕಿ ಇರುವ ಹಣ ಸಂದಾಯ ಮಾಡಬೇಕು. ಮಳೆಗಾಲ ಆರಂಭಗೊಂಡಿದ್ದು, ಎಲ್ಲ ಗ್ರಾಮ, ಪಟ್ಟಣ, ನಗರಗಳ ಕುಡಿಯುವ ನೀರು ಸಂಗ್ರಹಾಗಾರ ಸ್ವಚ್ಛಗೊಳಿಸಬೇಕು. ಅಲ್ಲದೆ, ಚರಂಡಿಗಳ ಸ್ವಚ್ಛಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಷಿ ಮಾತನಾಡಿ, ‘ಪ್ರಕೃತಿ ವಿಕೋಪಕ್ಕೆ ಸ್ಪಂದಿಸಲು ಎಲ್ಲ ತಾಲ್ಲೂಕುಗಳಲ್ಲಿ, ಜಿಲ್ಲಾ ಕೇಂದ್ರದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಸಾರ್ವಜನಿಕರು ಕರೆ ಮಾಡಬಹುದು’ ಎಂದು ಮನವಿ ಮಾಡಿದರು.

‘ದಿನದ 24 ಗಂಟೆಗಳಲ್ಲೂ ಕಂಟ್ರೋಲ್ ರೂಂನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ವಿಜಯ ಕುಮಾರ್, ಕೃಷಿ, ತೋಟ ಗಾರಿಕೆ, ಪಶುಪಾಲನಾ ಇಲಾಖೆಗಳ ಅಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಇದ್ದರು.

‘ಪ್ರಕೃತಿ ವಿಕೋಪದಿಂದ ಜನರ ಜೀವ, ಜಾನುವಾರು, ಮನೆ ಮತ್ತು ಬೆಳೆಗಳಿಗೆ ಹಾನಿಯಾದರೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಂಕಷ್ಟಕ್ಕೆ ಸ್ಪಂದಿಸಬೇಕು

- ಪಿ.ಎನ್. ರವೀಂದ್ರ, ಸಿಇಒ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry