ಬಾಲಕಾರ್ಮಿಕ ಪದ್ಧತಿ ಜೀವಂತ ದೇಶದ ದುರಂತ

7
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಪ್ರಧಾನ ಜಿಲ್ಲಾ ನ್ಯಾಯಾಧೀಶ ಹೊಸಗೌಡರ್‌ ಸಲಹೆ

ಬಾಲಕಾರ್ಮಿಕ ಪದ್ಧತಿ ಜೀವಂತ ದೇಶದ ದುರಂತ

Published:
Updated:
ಬಾಲಕಾರ್ಮಿಕ ಪದ್ಧತಿ ಜೀವಂತ ದೇಶದ ದುರಂತ

ದಾವಣಗೆರೆ: ಕಾನೂನು ಸಮರ್ಪಕವಾಗಿ ಜಾರಿಗೊಳ್ಳದೇ ಇರುವುದರಿಂದ ಇಂದಿಗೂ ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ಜೀವಂತ ಇರುವುದು ದುರಂತ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌. ಹೊಸಗೌಡರ್‌ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ, ವಕೀಲರ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬದಲ್ಲಿನ ಬಡತನ, ಸಾಲದ ಹೊರೆ ಕಾರಣಕ್ಕೆ ಶಾಲೆ–ಕಾಲೇಜಿಗೆ ಹೋಗದೆ ಮಕ್ಕಳು ಹೋಟೆಲ್‌, ಗ್ಯಾರೆಜ್‌ಗೆ ತೆರಳಿ ಬಾಲಕಾರ್ಮಿಕರಾಗುತ್ತಿದ್ದಾರೆ. ಹಲವು ಕಾನೂನು ಇದ್ದರೂ ಈ ಪದ್ಧತಿ ಮುಂದುವರಿದಿದೆ. ಮಕ್ಕಳು ರಾಷ್ಟ್ರದ ಸಂಪತ್ತು. ಅವರಿಗೆ ಒಳ್ಳೆಯ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಸಮಾಜದ ಹಾಗೂ ಸರ್ಕಾರದ ಕರ್ತವ್ಯ ಎಂದು ಹೇಳಿದರು.

ಸಂವಿಧಾನದ ಕಲಂ 24ರಲ್ಲೂ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದಿದೆ. ಅಲ್ಲದೇ ಕಲಂ 21 ‘ಎ’ ಹಾಗೂ 45ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಹೇಳಲಾಗಿದೆ. 1986ರಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ಬಂತು. ಅದರಲ್ಲಿ ಕೇವಲ ಆರು ತಿಂಗಳ ಶಿಕ್ಷೆ ವಿಧಿಸಲು ಅವಕಾಶ ಇತ್ತು. 2016ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, 2 ವರ್ಷ ಶಿಕ್ಷೆ ಹಾಗೂ ₹ 25 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿ ದಾವಣಗೆರೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡೋಣ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮಾನಾಯ್ಕ, ‘ನಮ್ಮ ಮಕ್ಕಳು ಚೆನ್ನಾಗಿರಬೇಕಾದರೆ, ಪಕ್ಕದ ಮನೆಯ ಮಕ್ಕಳೂ ಶಾಲೆಗೆ ಹೋಗಿ ಶಿಕ್ಷಣ ಪಡೆಯಬೇಕು. ಇಲ್ಲದಿದ್ದರೆ ಅವರೊಂದಿಗೆ ಸೇರಿ ನಿಮ್ಮ ಮನೆಯ ಮಕ್ಕಳೂ ಹಾಳಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು

ತಹಶೀಲ್ದಾರ ಯರ‍್ರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತ್ರಿಪುಲಾಂಬ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣಕುಮಾರ್‌, ಡಿಡಿಪಿಐ ಕೋದಂಡರಾಮ, ಜಿಲ್ಲಾ ಮಕ್ಕಳ ಸಹಾಯವಾಣಿ ನಿರ್ದೇಶಕ ಎನ್‌.ಬಿ. ಮಂಜಪ್ಪ, ಪಾಲಿಕೆಯ ಅಧಿಕಾರಿ ಚಂದ್ರಶೇಖರ್‌ ಹಾಜರಿದ್ದರು.

ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ ಸ್ವಾಗತಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಕಾರ್ತಿಕ್‌ (ಪ್ರಥಮ), ಸಹನಾ (ದ್ವಿತೀಯ) ಹಾಗೂ ಸ್ಪಂದನಾ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮೊದಲು ಬೆಳಿಗ್ಗೆ ಮುದ್ದೆಗೌಡರ ಮಲ್ಲಮ್ಮ ಮುರುಗೆಪ್ಪ ಬಾಲಿಕಾ ಪ್ರೌಢಶಾಲೆಯಿಂದ ಮಂಡಕ್ಕಿ ಬಟ್ಟಿವರೆಗೆ ಶಾಲಾ ಮಕ್ಕಳಿಂದ ಜಾಥಾ ನಡೆಯಿತು.

‘ಮನೆ ಉದ್ಧಾರ ಆಗಲ್ಲ’

‘ಯಾರ ಮನೆಯಲ್ಲಿ ಮಕ್ಕಳು ದುಡಿಯುತ್ತಾರೋ ಆ ಮನೆ, ರಾಜ್ಯ, ದೇಶ ಉದ್ಧಾರ ಆಗುವುದಿಲ್ಲ. ಕೇವಲ ಮೂರ್ನಾಲ್ಕು ಸಾವಿರ ರೂಪಾಯಿ ಆದಾಯದಿಂದ ಅವರ ಬದುಕು ಸುಂದರಗೊಳ್ಳಲು ಸಾಧ್ಯವಿಲ್ಲ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಬಿ. ರೂಪನಾಯ್ಕ ಅಭಿಪ್ರಾಯಪಟ್ಟರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಸರ್ಕಾರದ ಎಲ್ಲ ಇಲಾಖೆಗಳೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಕರೆ ತಂದು ಶಿಕ್ಷಣ ಕೊಡಿಸಬೇಕು. ಜಿಲ್ಲೆಗೆ ಎರಡರಿಂದ ಮೂರು ಬಾಲಕಾರ್ಮಿಕ ಶಾಲೆಯನ್ನು ತೆರೆಯಬೇಕು ಎಂದು ಅವರು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry