ಬಾಲಕಾರ್ಮಿಕರ ಪತ್ತೆ ಹಚ್ಚಿ ಶಾಲೆಗೆ ಸೇರಿಸಿ

7
‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮ; ಜಿಲ್ಲಾ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಕರೆ

ಬಾಲಕಾರ್ಮಿಕರ ಪತ್ತೆ ಹಚ್ಚಿ ಶಾಲೆಗೆ ಸೇರಿಸಿ

Published:
Updated:

ಹಾಸನ : ‘ಶಾಲೆಯಿಂದ ಹೊರಗುಳಿದು ದುಡಿಯುವ ಮಕ್ಕಳನ್ನು ಪತ್ತೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಜಿಲ್ಲಾ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಕರೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿನ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

14 ವರ್ಷದೊಳಗಿನ ಪ್ರತಿ ಮಗುವು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಇದನ್ನು ತಡೆಯುವ ನಿಟ್ಟಿನಲ್ಲಿ 1986 ರಲ್ಲಿ ಜಾರಿಗೆ ತರಲಾಗಿದ್ದ ಬಾಲ ಕಾರ್ಮಿಕ ತಡೆ ಮತ್ತು ನಿಯಂತ್ರಣ ಕಾಯ್ದೆಗೆ 2016ರಲ್ಲಿ ತಿದ್ದುಪಡಿ ತಂದಿದ್ದು, ಮಾಲೀಕರಿಗೆ ಶಿಕ್ಷೆ ಪ್ರಮಾಣವನ್ನು 6 ತಿಂಗಳಿನಿಂದ 2 ವರ್ಷದವರೆಗೆ ಹಾಗೂ ದಂಡದ ಪ್ರಮಾಣವನ್ನು ₹ 20,000 ದಿಂದ ₹ 50,000 ಕ್ಕೆ ಏರಿಸಲಾಯಿತು ಎಂದು ತಿಳಿಸಿದರು.

ಒಟ್ಟು ಕಾರ್ಮಿಕರಲ್ಲಿ ಶೇಕಡಾ 15 ರಷ್ಟು ಕಾರ್ಮಿಕರು 15 ರಿಂದ 24 ವರ್ಷದವರಾಗಿದ್ದು, ದೇಶದ ಅಭಿವೃದ್ಧಿಗೆ ಅವರ ಪರಿಶ್ರಮ ಬಹಳಷ್ಟಿದೆ. ಇವರ ಸಂರಕ್ಷಣೆ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕಾಗಿದೆ ಎಂದರು.

ಉಪ ಕಾರ್ಮಿಕ ಆಯುಕ್ತ ಎ.ಎಚ್. ಉಮೇಶ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ತೊಡೆದು ಹಾಕಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಬಾಲ ಕಾರ್ಮಿಕರು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಬಾಲ ಕಾರ್ಮಿಕತೆಯಿಂದ ಮುಕ್ತಿ ಹೊಂದಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿ ಆಂಗ್ಲ ಮಾಧ್ಯಮ 8ನೇ ತರಗತಿಯಲ್ಲಿ ಶೇಕಡಾ 80ರಷ್ಟು ಅಂಕಗಳಿಸಿರುವ ವಿದ್ಯಾರ್ಥಿ ಭಾವನ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಮರಾಜ್, ಮೈಸೂರು ಪೀಪಲ್ಸ್ ಫೋರಂ ನಿರ್ದೇಶಕ ಪಿ.ಪಿ. ಬಾಬುರಾಜ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಚ್‌.ಟಿ. ಕೋಮಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಡಿ. ವೆಂಕಟೇಶ್, ಚೈಲ್ಡ್‌ಲೈನ್‌ ಪ್ರಚೋದನ ಸಂಸ್ಥೆ ನಿರ್ದೇಶಕ ಸಿ.ಸಿ. ಪೌಲೋಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶ ಎಚ್‌. ಮಂಜುನಾಥ್, ಜಿಲ್ಲಾ ಉದ್ಯೋಗಾಧಿಕಾರಿ ಜೆ.ಬಿ.ವಿಜಯಲಕ್ಷ್ಮಿ, ಕಾರ್ಮಿಕ ಅಧಿಕಾರಿ ಎಚ್.ಎನ್.ರಮೇಶ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಸ್.ಜಿ.ಶಿವಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry