ಕಾಡಾನೆಗಳ ದಾಳಿಗೆ ಸಜ್ಜೆ ಬೆಳೆ ನಾಶ

7
ಹನೂರು ಕಾಡಂಚಿನ ಗ್ರಾಮಗಳಲ್ಲಿ ತಪ್ಪದ ವನ್ಯಪ್ರಾಣಿಗಳ ಹಾವಳಿ

ಕಾಡಾನೆಗಳ ದಾಳಿಗೆ ಸಜ್ಜೆ ಬೆಳೆ ನಾಶ

Published:
Updated:
ಕಾಡಾನೆಗಳ ದಾಳಿಗೆ ಸಜ್ಜೆ ಬೆಳೆ ನಾಶ

ಹನೂರು: ತಾಲ್ಲೂಕಿನ ಬಫರ್ ಅರಣ್ಯ ವಲಯದ ಕಾಡಂಚಿನ ಜಮೀನುಗಳಿಗೆ ಸೋಮವಾರ ರಾತ್ರಿ ನುಗ್ಗಿದ ಕಾಡಾನೆಗಳು ಫಸಲನ್ನು ಹಾಳು ಮಾಡಿದ್ದಲ್ಲದೇ ಹನಿ ನೀರಾವರಿಗೆ ಅಳವಡಿಸಿದ್ದ ಪಂಪ್‍ಸೆಟ್ ಪರಿಕರಗಳನ್ನು ಧ್ವಂಸಗೊಳಿಸಿವೆ.

ಪಟ್ಟಣದ ರೈತ ನಾಗರಾಜುನಾಯ್ಡು ಅವರ ಎರಡೂವರೆ ಎಕರೆ ಜಮೀನಿನಲ್ಲಿ ಕಂಬು (ಸಜ್ಜೆ) ಫಸಲು ಬೆಳೆದಿದ್ದರು. ಆದರೆ ಸೋಮವಾರ ರಾತ್ರಿ ಜಮೀನಿಗೆ ನುಗ್ಗಿದ ಕಾಡಾನೆಗಳ ಹಿಂಡು ಫಸಲನ್ನು ತುಳಿದು ನಾಶಗೊಳಿಸಿವೆ. ಜತೆಗೆ ಬೋರೆಮಾಳ ರೈತರ ಜಮೀನುಗಳಿಗೆ ರಾತ್ರಿ ವೇಳೆ ನುಗ್ಗುತ್ತಿರುವ ವನ್ಯಪ್ರಾಣಿಗಳು ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ.

ಜಮೀನಿನಲ್ಲಿ ಬರುವ ಸಲ್ಪ ನೀರಿನಲ್ಲೇ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದೆವು, ಆದರೆ ಮೇಲಿಂದ ಮೇಲೆ ವನ್ಯಪ್ರಾಣಿಗಳು ಜಮೀನುಗಳಿಗೆ ನುಗ್ಗಿ ಫಸಲನ್ನು ತಿಂದು ಹಾಳುಗೆಡುವುದರ ಜತೆಗೆ ಪರಿಕರಗಳನ್ನು ತುಳಿದು ನಾಶಗೊಳಿಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಒಂದೆರಡು ಸಾರಿ ಬಂದು ಹೋಗುತ್ತಾರೆ. ಆದರೆ ವನ್ಯಪ್ರಾಣಿಗಳ ಹಾವಳಿ ಮಾತ್ರ ತಪ್ಪಿಲ್ಲ

ಎಂಬುದು ಇಲ್ಲಿನ ರೈತರ ಆರೋಪ.

ಸಾಲ ಮಾಡಿ ಜಮೀನಿನಲ್ಲಿ ಬೆಳೆದಿದ್ದ ಫಸಲು ಕಾಡುಪ್ರಾಣಿಗಳ ತುತ್ತಾಗಿವೆ. ಕೂಡಲೇ ಹಿರಿಯ ಅರಣ್ಯಾಧಿಕಾರಿಗಳು ಪ್ರಾಣಿಗಳ ಹಾವಳಿ ತಪ್ಪಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ನಾಗರಾಜುನಾಯ್ಡು ಒತ್ತಾಯಿಸಿದ್ದಾರೆ.

ಕಿತ್ತು ಬಂದ ಸೋಲಾರ್ ಬೇಲಿ: ಮಲೆಮಹದೇಶ್ವರ ವನ್ಯಧಾಮದಲ್ಲಿರುವ ಹನೂರು ಬಫರ್ ವಲಯದ ಕಾಡಂಚಿನ ಸುತ್ತಲೂ ಅಳವಡಿಸಿರುವ ಸೋಲಾರ್ ಬೇಲಿ ಕಿತ್ತು ಬಂದಿರುವುದು ಹಾಗೂ ಆನೆ ಕಂದಕ ಮುಚ್ಚಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎಂಬುದು ಈ ಭಾಗದ ರೈತರ ಆರೋಪ.

ಕಿತ್ತು ಬಂದಿರುವ ಸೋಲಾರ್ ಬೇಲಿಯನ್ನು ದುರಸ್ತಿಪಡಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಇಲ್ಲಿನ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮ ನಾವು ನಮ್ಮ ಫಸಲನ್ನು ಕಳೆದುಕೊಳ್ಳುವಂತಾಗಿದೆ. ಕೂಡಲೇ ಅರಣ್ಯದ ಸುತ್ತಲೂ ಸೋಲಾರ್ ಬೇಲಿ ಹಾಗೂ ಆನೆ ಕಂದಕವನ್ನು ನಿರ್ಮಿಸುವ ಮೂಲಕ ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮಳೆಯಿಲ್ಲದೇ ಕಂಗಲಾಗಿದ್ದ ರೈತರಿಗೆ ಈ ಬಾರಿ ಬಿದ್ದ ಮಳೆಯಿಂದಾಗಿ ಅಲ್ಪಸ್ವಲ್ಪ ಫಸಲು ಬೆಳೆಯುವಂತಾಗಿದೆ. ಆದರೆ ಬೆಳೆದ ಫಸಲು ಸಹ ವನ್ಯಪ್ರಾಣಿಗಳ ತುತ್ತಾಗುತ್ತಿದೆ. ಹಿರಿಯ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry