ಯುವಕರ ಹತ್ಯೆ: ಪ್ರಮುಖ ಆರೋಪಿ ಬಂಧನ

7

ಯುವಕರ ಹತ್ಯೆ: ಪ್ರಮುಖ ಆರೋಪಿ ಬಂಧನ

Published:
Updated:

ಗುವಾಹಟಿ: ಮಕ್ಕಳ ಕಳ್ಳರು ಎಂದು ಶಂಕಿಸಿ ಇಬ್ಬರು ಯುವಕರನ್ನು ಗ್ರಾಮಸ್ಥರು ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಕರ್ಬಿ ಅಂಗ್ಲಾಂಗ್‌ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಬಂಧಿಸಲಾಗಿದೆ.

ಈ ಹತ್ಯೆ ಪ್ರಕರಣ ಹಾಗೂ ಮಕ್ಕಳ ಅಪಹರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹಬ್ಬಿಸಿದ್ದಕ್ಕೆ ಸಂಬಂಧಿಸಿದಂತೆ ಒಟ್ಟು 64 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಪಿ.ಗಂಜಾಲ ತಿಳಿಸಿದ್ದಾರೆ.

ಬಂಧಿತ ಆರೋಪಿ ಜೋಗ್‌ ತಿಮಂಗ್‌ ಅಲಿಯಾಸ್‌ ಅಲ್ಫಾ ಗ್ರಾಮಸ್ಥರಿಗೆ ಕರೆ ಮಾಡಿ, ವಾಹನದಲ್ಲಿ ಬರುತ್ತಿದ್ದ ಇಬ್ಬರನ್ನೂ ತಡೆಯುವಂತೆ ಹೇಳಿದ್ದ. ಅಲ್ಲದೆ, ಮಕ್ಕಳ ಕಳ್ಳರು ಅಸ್ಸಾಂ ಪ್ರವೇಶಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ವದಂತಿ ಹರಡಿದ್ದ ಎಂದು ಮಾಹಿತಿ ನೀಡಿದ್ದಾರೆ.

ದಿ ಕರ್ಬಿ ಅಂಗ್ಲಾಂಗ್‌ ಸ್ವಾಯತ್ತ ಮಂಡಳಿ (ಕೆಎಎಸಿ) ಹತ್ಯೆಯನ್ನು ಖಂಡಿಸಿದೆ. ಯುವಕರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲು ಮತ್ತು ಹತ್ಯೆ ಸ್ಥಳದಲ್ಲಿ ಯುವಕರ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿದೆ.

ಸ್ನೇಹಿತರಾಗಿದ್ದ ಸೌಂಡ್‌ ಎಂಜಿನಿಯರ್‌ ನಿಲೋತ್ಪಲ್‌ ದಾಸ್‌ (29) ಹಾಗೂ ಉದ್ಯಮಿ ಅಭಿಜಿತ್‌ ನಾಥ್‌ (30) ಕಾರಿನಲ್ಲಿ ಪ್ರವಾಸಿ ತಾಣಕ್ಕೆ ತೆರಳಿ ಹಿಂದಿರುಗುವಾಗ ಈ ದುರ್ಘಟನೆ ನಡೆದಿತ್ತು.

‘ನನ್ನ ಮಗ ಎಷ್ಟೋ ಸ್ಥಳಗಳಿಗೆ ಪ್ರವಾಸ ಹೋಗಿ ಬಂದಿದ್ದ. ಆದರೆ ತಾಯ್ನಾಡಿನಲ್ಲೇ ಆತ ಇಂತಹ ಕ್ರೌರ್ಯಕ್ಕೆ ಒಳಗಾಗಿದ್ದು ಅತ್ಯಂತ ದುರದೃಷ್ಟಕರ’ ಎಂದು ನಿಲೋತ್ಪಲ್‌ ಅವರ ತಂದೆ ಗೋಪಾಲ್‌ಚಂದ್ರ ದಾಸ್‌ ದುಃಖಿಸಿದ್ದಾರೆ.

‘ಅಸ್ಸಾಂ ರಾಜ್ಯದಾದ್ಯಂತ ಹಾಸುಹೊಕ್ಕಾಗಿರುವ ಮೂಢನಂಬಿಕೆ, ಅನಕ್ಷರತೆ ಹಾಗೂ ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳುವ ಮೂಲಕ, ನಾವು ಅನುಭವಿಸುತ್ತಿರುವ ಸಂಕಟ ಬೇರ‍್ಯಾವ ತಂದೆ ತಾಯಿಗೂ ಬಾರದಂತೆ ನೋಡಿಕೊಳ್ಳಬೇಕು’ ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದಲ್ಲೂ ಮಾರಣಾಂತಿಕ ಹಲ್ಲೆ

ಔರಂಗಾಬಾದ್ (ಪಿಟಿಐ): ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ವದಂತಿಯಿಂದ ಕಳ್ಳರೆಂದು ಭಾವಿಸಿ ಇಬ್ಬರನ್ನು ಹತ್ಯೆ ಮಾಡಿರುವ ಪ್ರಕರಣ ಮಹಾರಾಷ್ಟ್ರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಔರಂಗಾಬಾದ್ ಜಿಲ್ಲೆಯ ವೈಜಪುರ ತಾಲ್ಲೂಕಿನ ಚಂದಗಾವ್‌ ಗ್ರಾಮದಲ್ಲಿ ಇದೇ 8ರಂದು ಈ ಘಟನೆ ನಡೆದಿದ್ದು, ಇನ್ನೂ ಏಳು ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳರ ಗುಂಪು ಬಂದಿದೆ ಎಂಬ ವದಂತಿ ವಾಟ್ಸ್ಆ್ಯಪ್‌ಗಳಲ್ಲಿ ಹರಿದಾಡಿತ್ತು. ಇದರಿಂದ ಗ್ರಾಮಸ್ಥರೇ ರಾತ್ರಿ ಗಸ್ತು ವ್ಯವಸ್ಥೆ ಮಾಡಿಕೊಂಡಿದ್ದರು. ಇದೇ ವೇಳೆ ತೋಟವೊಂದರಲ್ಲಿ ಕಾಣಿಸಿಕೊಂಡ ಒಂಬತ್ತು ಜನರ ಗುಂಪನ್ನು ಕಳ್ಳರೆಂದು ಭಾವಿಸಿ 1,500ಕ್ಕೂ ಹೆಚ್ಚು ಗ್ರಾಮಸ್ಥರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರು.

ಘಟನೆ ಸಂಬಂಧ 400 ಜನರ ವಿರುದ್ಧ ಕೊಲೆ ಮತ್ತು ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತರ ಪೂರ್ವಾಪರ ಮತ್ತು ಅವರು ಅಲ್ಲಿಗೆ ಬಂದಿದ್ದುದೇಕೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry