ಹಬ್ಬಕ್ಕೆ ಉಡುಗೆ ಹೀಗಿರಲಿ

7

ಹಬ್ಬಕ್ಕೆ ಉಡುಗೆ ಹೀಗಿರಲಿ

Published:
Updated:
ಹಬ್ಬಕ್ಕೆ ಉಡುಗೆ ಹೀಗಿರಲಿ

ಹಬ್ಬಗಳು ಯಾವುದೇ ಇರಲಿ ಫ್ಯಾಷನ್ ಜಗತ್ತು ರಂಗೇರುತ್ತದೆ. ರಂಗುರಂಗಿನ ಉಡುಗೆಗಳ ಧರಿಸಲು, ಧರಿಸಿ ಬೀಗಲು ಹಬ್ಬಗಳು ನೆಪವಷ್ಟೆ. ಈಗ ರಂಜಾನ್ ಮಾಸ, ರಂಜಾನ್ ಹಬ್ಬದ ನೆಪದಲ್ಲಿ ಮುಸ್ಲಿಂ ಬಾಂದವರ ಅಭಿರುಚಿಗೆ ತಕ್ಕಂತಹ ತರಹೇವಾರಿ ಉಡುಗೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಮಹಿಳೆಯರ ಉಡುಗೆಗಳಿಗೆ ಸೆಡ್ಡು ಹೊಡೆಯುವಂತೆ ಪುರುಷರಿಗೂ ಭಿನ್ನ ಭಿನ್ನ ಆಯ್ಕೆಗಳು ಲಭ್ಯವಿವೆ. ಗಮನಿಸಿ ಆಯ್ದುಕೊಳ್ಳುವ ತಾಳ್ಮೆ ಇರಬೇಕಷ್ಟೆ.

ರಂಜಾನ್‌ನಲ್ಲಿ ಪುರುಷರಿಗೆ ಸಂಪ್ರದಾಯ ಉಡುಗೆ ಕುರ್ತಾ ಉದ್ದನೆಯ ಪೈಜಾಮ ಈಗ ಸಾಕಷ್ಟು ಹೊಸ ಪ್ರಯೋಗಗಳು ನಡೆದಿವೆ. ಅರಬ್ ಸ್ಟೈಲ್, ಥೋಬ್, ಎಂಬ್ರಾಯ್ಡರಿ ಕುರ್ತಾ. ಆಂಕಲ್ ಪೈಜಾಮಾ, ಸ್ಲಿಮ್ ಫಿಟ್ ಪೈಜಾಮಾ ಹೀಗೆ ಹಲವು ಮಾದರಿಯ ಕುರ್ತಾ ಪೈಜಾಮಾಗಳು ಆಯ್ಕೆಗೆ ಲಭ್ಯವಿವೆ.

ತೋಬ್ ಅಥವಾ ತವಾಬ್ ಈಗಿನ ಟ್ರೆಂಡ್ ಅರಬ್ ಶೈಲಿಯ ಕುರ್ತಾ ತುಸು ಹೆಚ್ಚು ಉದ್ದವಾಗಿರುತ್ತದೆ. ಮೊಳಕಾಲು ದಾಟುತ್ತದೆ ಇದರ ನಿಲುವು. ಹೆಚ್ಚೇನು ಎಂಬ್ರಾಯ್ಡರಿ ವರ್ಕ್ ಇಲ್ಲದ ಸರಳವಾಗಿ ಕಾಣುವ ತೋಬ್‌ಗೆ ಒಪ್ಪುವ ಪೈಜಾಮಾ ಧರಿಸಿದರೆ ರಂಜಾನ್ ರಂಗೇರುತ್ತದೆ. ಮುಖ್ಯವಾಗಿ ಇದಕ್ಕೆ ಒಪ್ಪುವ ಶೂ ಅಥವಾ ಚಪ್ಪಲಿ ಧರಿಸಬೇಕು. ಚಡಾವ್‌, ಪಟಿಯಾಲಿ, ಕೋಲ್ಹಾಪುರಿ ಶೈಲಿಯ ಚಪ್ಪಲಿ ಇವಕ್ಕೆ ಹೊಂದುತ್ತವೆ.

ಎಂಬ್ರಾಯ್ಡರಿ ಕುರ್ತಾಗಳು ತೋಬ್ ನಷ್ಟು ಉದ್ದವಿಲ್ಲ. ಆದರೆ ಅದರ ಮೇಲಿನ ಅಲಂಕಾರದಿಂದ ಗಮನ ಸೆಳೆಯುತ್ತದೆ. ಅತಿಯಾದ ಎಂಬ್ರಾಯ್ಡರಿ ವರ್ಕ್ ಇರುವ ಕುರ್ತಾದ ಆಯ್ಕೆ ಬೇಡ. ಸರಳವಾಗಿ, ಆಕರ್ಷಕವಾಗಿ ಕಾಣುವ ಕುಸುರಿ ಕೆಲಸ ಹೊಂದಿದ ಕುರ್ತಾ ನಿಮ್ಮ ಆಯ್ಕೆ ಆಗಿರಲಿ. ಹೈದರಾಬಾದ್ ಕುರ್ತಾ ನವಾಬಿ ಲುಕ್ ನೀಡುತ್ತದೆ. ರೇಷ್ಮೆಯಂತೆ ಕಾಣುವ ಬಟ್ಟೆಯಿಂದ ಮಾಡಿದ ಈ ಮಾದರಿಯ ಕುರ್ತಾ ಐಶಾರಾಮಿ ಲುಕ್ ನೀಡುತ್ತದೆ. ಕತ್ತಿನ ಬಳಿ ಹಾಗೂ ಮಣಿಕಟ್ಟಿನ (ಕಫ್) ಬಳಿ ಮಾಡಿರುವ ಸಣ್ಣ ಪ್ರಮಾಣದ ಎಂಬ್ರಾಯ್ಡರಿ ವರ್ಕ್ ಕುರ್ತಾಕ್ಕೆ ಹೆಚ್ಚಿನ ಲುಕ್ ನೀಡುತ್ತದೆ.

ಸರಳವಾದ ಕುರ್ತಾಗಳನ್ನು ಧರಿಸಲು ಇಷ್ಟಪಡುವವರಿಗೆ ಪಂಜಾಬಿ ಕುರ್ತಾ ಹಾಗೂ ಲಖನೌವೀ ಕುರ್ತಾಗಳು ಹೇಳಿಮಾಡಿಸಿದವು. ಏಕ ರಂಗಿನ ಈ ಕುರ್ತಾಗಳಲ್ಲಿ ಯಾವುದೇ ಕುಸುರಿ ಕೆಲಸ ಇರುವುದಿಲ್ಲ. ಕುರ್ತಾ ಹಾಗೂ ಪೈಜಾಮಾ ಎರಡೂ ಒಂದೇ ಬಣ್ಣದ್ದಾಗಿರುತ್ತವೆ. ನೋಡಲು ಸರಳವಾಗಿ ಹಾಗೂ ಸುಂದರವಾಗಿ ಕಾಣುತ್ತವೆ. ಬಿಳಿ ತೊಗಲಿನವರಿಗೆ ಈ ಕುರ್ತಾಗಳು ಹೆಚ್ಚು ಸೂಟ್ ಆಗುತ್ತವೆ.

‘ಅರವಿಂದ್‌’ನಲ್ಲಿ ರಂಜಾನ್ ವಿಶೇಷ ಉಡುಗೆ ಬಹುತೇಕ ಪುರುಷರು ಈ ಹಬ್ಬಕ್ಕೆಂದು ಸಾಮಾನ್ಯ ಕುರ್ತಾ ಪೈಜಾಮ ಧರಿಸಿ ಅದರ ಮೇಲೊಂದು ನೆಹರೂ ಜಾಕೆಟ್ ಧರಿಸುತ್ತಾರೆ. ಕಡಿಮೆ ಬೆಲೆಯಾದರೂ ಒಳ್ಳೆಯ ಲುಕ್ ಅನ್ನು ಅವು ನೀಡುತ್ತೇವೆ. ಎಲ್ಲರ ಆಕರ್ಷಣೆ ಅವರತ್ತ ವಾಲುತ್ತದೆ ಎಂಬ ಭಾವನೆ ಈ ಉಡುಗೆ ತೊಡುಗೆಯ ಹಿಂದಿನ ಸಾರ. ಧೋತಿಯೊಂದಿಗೆ ಕುರ್ತಾ ಧರಿಸುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಇನ್ನು ಸ್ಟೈಲಿಷ್ ಆಗಿರುವ ಕುರ್ತಾವನ್ನು ನೆವಿ ಬ್ಲೂ ಜೀನ್ಸ್‌ನೊಂದಿಗೆ ಧರಿಸಿದರೆ ಅಂದ ವರ್ಧನೆಯಾಗುತ್ತದೆ. ಅಭಯ ಸೂಟ್‍ಗಳು ಹೆಚ್ಚು ಜನಪ್ರಿಯ ಉಡುಪುಗಳಾಗಿವೆ ಎನ್ನುತ್ತಾರೆ ಅರವಿಂದ್ ಕಂಪನಿಯ ಲೈಫ್‌ಸ್ಟೈಲ್ ಫ್ಯಾಬ್ರಿಕ್ಸ್‌ ವಿಭಾಗದ ಸಿಇಒ ಸುಶೀಲ್ ಕೌಲ್.

‘ಪುರುಷರು ಪಠಾನೀಸ್, ಕುರ್ತಾಬಂದಿ, ಶಾರ್ಟ್ ಕುರ್ತಾ, ಎಥ್ನಿಕ್ ಜಾಕೆಟ್ ಮತ್ತು ಇಂಡೋ-ವೆಸ್ಟರ್ನ್ ಉಡುಗೆಗಳನ್ನೂ ಧರಿಸುತ್ತಾರೆ. ಇವು ಈ ಬಾರಿಯ ಟ್ರೆಂಡ್ ಆಗಿವೆ. ಹಸಿರು, ನೀಲಿ, ನೇರಳೆ ಮತ್ತು ಬಿಳಿ ಶೇಡ್‌ಗಳಲ್ಲಿ ಲಭ್ಯವಿರುವ ಈ ಉಡುಪುಗಳು ರಂಜಾನ್‌ಗೆ ಹೇಳಿ ಮಾಡಿಸಿದಂತಿವೆ. ಇವುಗಳಿಂದ ಸ್ಟೈಲೀಷ್ ಲುಕ್ ಸಿಗಲಿದೆ. ಅರವಿಂದ್ ಬಟ್ಟೆ ಕಂಪನಿಯು ರಂಜಾನ್‌ ಸಲುವಾಗಿ ಲೆನಿನ್‌ನ ವಿಶೇಷ ಉಡುಪುಗಳನ್ನು ವಿನ್ಯಾಸಗೊಳಿಸಿದ್ದು, ಅವುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನನ್ನ ಪ್ರಕಾರ ಕಾಟನ್ ಹಾಗೂ ಲೆನಿನ್ ಬಟ್ಟೆಗಳಿಂದ ತಯಾರಿಸಿದ ಯಾವುದೇ ಉಡುಪುಗಳು ರಂಜಾನ್‌ಗೆ ಹೆಚ್ಚು ಸೂಕ್ತವಾಗಿವೆ. ಅರವಿಂದ್‌ನ ಎಲ್ಲ ಮಳಿಗೆಗಳಲ್ಲಿಯೂ ನೂರಾರು ವಿನ್ಯಾಸದ ರಂಜಾನ್‌ ವಿಶೇಷ ಉಡುಪುಗಳು ಲಭ್ಯ. ಲೆನಿನ್‌ನ ಬಟ್ಟೆಗಳ ಬೆಲೆ ₹600 ರಿಂದ ₹1200 ಇರುತ್ತದೆ’ ಎನ್ನುತ್ತಾರೆ ಅವರು.

ಕುರ್ತಾ-ಪೈಜಾಮಾ ಧರಿಸಲು ಕೆಲವು ಟಿಪ್ಸ್ 

* ಸಡಿಲ ಪೈಜಾಮಾ ಧರಿಸುವ ಫ್ಯಾಷನ್ ಹಳೆಯದ್ದಾಯಿತು. ಈಗೇನಿದ್ದರೂ ಸ್ಲಿಮ್ ಫಿಟ್ ಪೈಜಾಮಾಗಳ ಕಾಲ ಹಾಗಾಗಿ ಸಡಿಲ ಪೈಜಾಮಾದ ಆಯ್ಕೆಯಿಂದ ದೂರವಿರಿ.

* ಕುರ್ತಾಗೆ ಹೊಂದಿಕೆಯಾಗುವ ಪೈಜಾಮಾದ ಆಯ್ಕೆ ನಿಮ್ಮದಾಗಲಿ. ತೀರಾ ಗಾಢ ಬಣ್ಣದ ಪೈಜಾಮಾಗಳನ್ನು ಧರಿಸಬೇಡಿ. ಅದು ಕಣ್ಣಿಗೆ ರೇಜಿಗೆ ಹುಟ್ಟಿಸುತ್ತದೆ.

* ಕುರ್ತಾ-ಪೈಜಾಮಾಕ್ಕೆ ಒಪ್ಪುವ ಶೂ ಅಥವಾ ಚಪ್ಪಲಿಯನ್ನೇ ಧರಿಸಿ. ನವಾಬಿ ಶೈಲಿಯ ಚಪ್ಪಲಿಗಳು ಅಥವಾ ಕೊಲ್ಲಾಪುರಿಯ ಚಪ್ಪಲಿಗಳು ನಿಮ್ಮ ಆಯ್ಕೆ ಆಗಿರಲಿ. ಯಾವುದೇ ಕಾರಣಕ್ಕೂ ಸ್ಪೋರ್ಟ್ಸ್ ಮಾದರಿಯ ಶೂ ಧರಿಸಬೇಡಿ.

* ಕುರ್ತಾ-ಪೈಜಾಮಾ ಮೇಲೊಂದು ನೆಹರು ಜಾಕೆಟ್ ಧರಿಸಿ ನೋಡಿ ಅದರ ಲುಕ್ಕೇ ಬೇರೆ. ಗಾಢ ಬಣ್ಣ ನೆಹರು ಜಾಕೆಟ್ ಆಯ್ಕೆ ಮಾಡಿಕೊಳ್ಳಿ ಅದು ಕುರ್ತಾದ ಅಂದ ಹೆಚ್ಚಿಸುತ್ತದೆ.

* ಈ ಬಾರಿ ರಂಜಾನ್ ಮಳೆಗಾಲದಲ್ಲಿ ಬಂದಿದೆ. ಹಾಗಾಗಿ ಬೆಚ್ಚಗಿನ ಅನುಭವ ನೀಡುವಂತಹ ಕುರ್ತಾಗಳನ್ನು ಆಯ್ಕೆ ಮಾಡಿಕೊಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry