4
ಕೊಲ್ಹಾಪುರ, ಫಂಡರಪುರಕ್ಕೆ ಹೋಗುವ ಭಕ್ತರಿಗೆ ಅನುಕೂಲ, ಹೆಚ್ಚಿನ ಸೌಲಭ್ಯ ಕಲ್ಪಿಸುವ ಭರವಸೆ

ಹುಬ್ಬಳ್ಳಿ, ದೆಹಲಿಗೆ ಹೊಸ ರೈಲು: ಖೂಬಾ

Published:
Updated:

ಬೀದರ್‌: ‘ಬೀದರ್‌–ದೆಹಲಿ ಹಾಗೂ ಬೀದರ್‌–ಹುಬ್ಬಳ್ಳಿ ಮಧ್ಯೆ ಎರಡು ಹೊಸ ರೈಲುಗಳನ್ನು ಆರಂಭಿಸುವಂತೆ ರೈಲ್ವೆ ಸಚಿವ ಪಿಯುಷ್ ಗೋಯೆಲ್ ಅವರಿಗೆ ಮನವಿ ಮಾಡಲಾಗಿದ್ದು, ಕೇಂದ್ರ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ಇಲ್ಲಿನ ರೈಲು ನಿಲ್ದಾಣದಲ್ಲಿ ಗುರುವಾರ ನಡೆದ ಬೀದರ್–ಕೊಲ್ಹಾಪುರ ರೈಲಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಕುಟುಂಬದ ಯಾರೊಬ್ಬರೂ ರಾಜಕೀಯದಲ್ಲಿ ಇಲ್ಲ. ಮೋದಿ ಸರ್ಕಾರ, ನಾಲ್ಕು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಮಾಡಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಎದುರಿಸಲು ದೇಶದ ಎಲ್ಲ ಪಕ್ಷಗಳು ಒಂದಾಗುತ್ತಿರುವುದು ಅಚ್ಚರಿ ಮೂಡಿಸುತ್ತಿದೆ’ ಎಂದು ಹೇಳಿದರು.

‘ಕೊಲ್ಹಾಪುರದ ಮಹಾಲಕ್ಷ್ಮಿ, ಪಂಢರಪುರದ ವಿಠ್ಠಲ–ರುಕ್ಮಾಯಿ ದರ್ಶನಕ್ಕೆ ಹೋಗಿ ಬರುವ ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಕ್ತರ ಅನುಕೂಲಕ್ಕಾಗಿ ಪಂಢರಪುರ ಮಾರ್ಗವಾಗಿ ಬೀದರ್‌– ಕೊಲ್ಹಾಪುರ ರೈಲು ಆರಂಭಿಸಲಾಗಿದೆ. ರೈಲು ಮೊದಲ ಹಂತದಲ್ಲಿ ವಾರದಲ್ಲಿ ಒಂದು ಬಾರಿ ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ವಾರಕ್ಕೆ ಎರಡು ಬಾರಿ ಸಂಚರಿಸಲಿದೆ’ ಎಂದು ತಿಳಿಸಿದರು.

‘ಬೀದರ್–ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆದಿವೆ. ಮೂರು ತಿಂಗಳ ಅವಧಿಯಲ್ಲಿ ವಿಮಾನ ಸಂಚಾರ ಆರಂಭವಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮೊದಲು ಇದ್ದ ಪುಣೆ–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದನ್ನು ಹೊರತು ಪಡಿಸಿ ಜಿಲ್ಲೆಯ 11 ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಕಾಂಗ್ರೆಸ್‌ ಕುಟುಂಬ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಾಚಿಕೆಗೇಡು ಸಂಗತಿಯಾಗಿದೆ. ಚುನಾವಣೆಯ ಸಂದರ್ಭದಲ್ಲಿ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ಮಾಡಿಕೊಂಡಿರುವವರು ಒಗ್ಗೂಡಿ ಸರ್ಕಾರ ರಚಿಸಿದ್ದಾರೆ’ ಎಂದು ಟೀಕಿಸಿದರು.

‘ಬೀದರ್‌ ಜಿಲ್ಲೆಯಲ್ಲಿ ಮೂರು ಲಕ್ಷ ರೈತರು ಇದ್ದಾರೆ. ಬೆಳೆ ವಿಮೆ ಮಾಡಿಸುವಲ್ಲಿ ಬೀದರ್‌ ಜಿಲ್ಲೆ ದೇಶದಲ್ಲೇ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರ ರೈತರಿಗೆ ಬೆಳೆ ಹಾನಿ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ಸುಭಾಷ ಕಲ್ಲೂರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಪಂಢರಪುರದ ರುಕ್ಮೀಣಿ ಮಂದಿರ ಸಮಿತಿಯ ಘನಿನಾಥ ಮಹಾರಾಜ ಔಸೇಕರ್, ಗುರುಬಾಬಾ ಔಸೇಕರ್, ವಿಶ್ವ ವಾರಕರಿ ಸೇನಾ ಅಧ್ಯಕ್ಷ ಏಕನಾಥ ಮಹಾರಾಜ ಹಂಡೆ, ಬಿಜೆಪಿ ಮುಖಂಡರಾದ ಬಾಬು ವಾಲಿ, ಬಾಬುರಾವ್‌ ಕಾರಭಾರಿ, ಜಯಕುಮಾರ ಕಾಂಗೆ ಇದ್ದರು.

ಸಂಸದ ಭಗವಂತ ಖೂಬಾ ಅವರು ನಾಲ್ಕು ವರ್ಷಗಳ ಅವಧಿಯಲ್ಲಿ ಹನ್ನೊಂದು ಹೊಸ ರೈಲುಗಳನ್ನು ಆರಂಭಿಸಿದ್ದಾರೆ

- ರಘುನಾಥ ಮಲ್ಕಾಪುರೆ, ವಿಧಾನ ಪರಿಷತ್‌ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry