ವೃದ್ಧರಿಗೂ ಆಸರೆ ಈ ಜಾದೂ ಕನ್ನಡಿ!

7
ಗಮನಸೆಳೆದ ಜಿಎಂಐಟಿ ವಿದ್ಯಾರ್ಥಿಗಳ ಪ್ರಾಜೆಕ್ಟ್‌ l ಆರು ವಿಭಾಗಗಳಿಂದ 24 ಮಾದರಿಗಳ ಪ್ರದರ್ಶನ

ವೃದ್ಧರಿಗೂ ಆಸರೆ ಈ ಜಾದೂ ಕನ್ನಡಿ!

Published:
Updated:
ವೃದ್ಧರಿಗೂ ಆಸರೆ ಈ ಜಾದೂ ಕನ್ನಡಿ!

ದಾವಣಗೆರೆ: ಕೆಲಸಕ್ಕೆ ಹೊರಡಲು ತಯಾರಾಗುತ್ತಿರುವಾಗಲೇ ಈ ಕನ್ನಡಿ ಎದುರಿಗೆ ನಿಂತು ಬಿಸಿ ಬಿಸಿ ಸುದ್ದಿಯನ್ನು ನೋಡಬಹುದು. ಹವಾಮಾನ ಮುನ್ಸೂಚನೆ ತಿಳಿದುಕೊಳ್ಳಬಹದು. ಧ್ವನಿ ಆದೇಶದಿಂದಲೇ ಮನೆಯಲ್ಲಿನ ವಿದ್ಯುತ್‌ ಉಪಕರಣಗಳನ್ನು ನಿಯಂತ್ರಿಸಬಹುದು...

ಹೌದು, ಇದೆಲ್ಲ ಈ ಜಾದೂ ಕನ್ನಡಿಯಿಂದ ಸಾಧ್ಯ! ನಗರದ ಜಿ.ಎಂ.ಐ.ಟಿಯ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ತಾವು ತಯಾರಿಸಿದ ‘ಮ್ಯಾಜಿಕ್‌ ಮಿರರ್‌’ (ಜಾದೂ ಕನ್ನಡಿ)ಗೆ ಧ್ವನಿ ಆದೇಶ ನೀಡಿ ಇಂಥ ಕೆಲಸಗಳನ್ನು ಪಟ ಪಟನೆ ಮಾಡಿ ತೋರಿಸುತ್ತಿದ್ದರೆ, ನೋಡುಗರು ಒಂದು ಕ್ಷಣ ಮೂಕವಿಸ್ಮಿತರಾಗುತ್ತಿದ್ದರು. ಜಿ.ಎಂ.ಐ.ಟಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಅಧ್ಯಯನ ಮಾದರಿಗಳ ಪ್ರದರ್ಶನದಲ್ಲಿ ಜಾದೂ ಕನ್ನಡಿ ಗಮನಸೆಳೆಯಿತು.

‘ಸ್ಮಾರ್ಟ್‌ ಫೋನ್‌, ಸ್ಮಾರ್ಟ್‌ ವಾಚ್‌ನಂತೆ ಸ್ಮಾರ್ಟ್‌ ಮಿರರ್‌ ತಯಾರಿಸಬಹುದೇ ಎಂಬ ಆಲೋಚನೆ ನಮಗೆ ಬಂತು. ಆರು ತಿಂಗಳ ಕಾಲ ಪ್ರಯತ್ನ ಪಟ್ಟು ಜಾದೂ ಕನ್ನಡಿ ನಿರ್ಮಿಸಿದೆವು. ₹ 12 ಸಾವಿರ ವೆಚ್ಚವಾಗಿದ್ದು, ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ ಬೆಲೆ ಇನ್ನೂ ಕಡಿಮೆಯಾಗಲಿದೆ. ಸ್ಯಾಮ್ಸಂಗ್‌ ಕಂಪನಿಯು ಕನ್ನಡಿ ಬಳಸಿಕೊಂಡು ಇದೇ ಮಾದರಿಯ ಉಪಕರಣವನ್ನು ತಯಾರಿಸಿದ್ದು, ಅದಕ್ಕೆ ₹ 60 ಸಾವಿರದಿಂದ ₹ 70 ಸಾವಿರವಿದೆ’ ಎಂದು ತಂಡದ ನಾಯಕ ದೀಕ್ಷಿತ್‌ ಆರ್‌. ಜೈನ್‌ ಮಾಹಿತಿ ನೀಡಿದರು.

‘ದ್ವಿಮುಖ ಕನ್ನಡಿಯನ್ನು ಬಳಸಿಕೊಂಡಿದ್ದೇವೆ. ಹಿಂಬದಿಗೆ ಮಾನಿಟರ್‌ ಅಳವಡಿಸಿದ್ದೇವೆ. ‘ಅಮೆಜಾನ್‌ ಅಲೆಕ್ಸಾ’ ಧ್ವನಿ ಸಹಾಯಕ ಉಪಕರಣ ಬಳಸಿಕೊಂಡು, ಧ್ವನಿ ಆದೇಶದ ಮೇಲೆ ಎಲ್ಲವನ್ನೂ ನಿಯಂತ್ರಿಸಲಾಗುತ್ತಿದೆ. ಮುಖದ ಗುರುತು ಆಧರಿಸಿ ಅವರಿಗೆ ಬೇಕಾದ ರೀತಿಯಲ್ಲಿ ಪ್ರೋಗ್ರಾಮ್‌ ಯೋಜಿಸಲು ಸಾಧ್ಯವಿದೆ. ಹವಾಮಾನ, ಸಮಯ ಹಾಗೂ ಸುದ್ದಿಯ ಸ್ಕ್ರೋಲ್‌ ಕನ್ನಡಿಯ ಪರದೆ ಮೇಲೆ ಕಾಣಿಸುತ್ತದೆ. ಮಲ್ಟಿಮೀಡಿಯಾ ತಂತ್ರಜ್ಞಾನ ಅಳವಡಿಸಲಾಗಿದೆ. ಧ್ವನಿ ಆದೇಶ ನೀಡಿದರೆ, ನಮಗೆ ಬೇಕಾದ ಫೋಟೊ, ವಿಡಿಯೊ ಪರದೆ ಮೇಲೆ ಬರುತ್ತವೆ’ ಎಂದು ಇದರ ವಿಶೇಷತೆಯನ್ನು ಹೇಳಿದರು.

‘ಮನೆಯ ವಿದ್ಯುತ್‌ ಬಲ್ಬ್‌, ಫ್ಯಾನ್‌, ಟಿ.ವಿ. ಸೇರಿ ವಿವಿಧ ಬಗೆಯ ವಿದ್ಯುತ್‌ ಉಪಕರಣಗಳನ್ನು ಈ ಕನ್ನಡಿಯ ಮೂಲಕ ನಿಯಂತ್ರಿಸಲು ಸಾಧ್ಯವಿದೆ. ಮನೆಗೆ ಯಾರು ಬಂದರು ಎಂಬುದನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ನೋಡಿ, ಈ ಕನ್ನಡಿ ಸಹಾಯದಿಂದ ಬಾಗಿಲನ್ನು ತೆರೆಯುವಂತೆ ಮಾಡಲೂ ಸಾಧ್ಯವಿದೆ. ವಿಶೇಷವಾಗಿ ಮನೆಯಲ್ಲಿ ಒಂಟಿಯಾಗಿರುವ ವೃದ್ಧರಿಗೆ ಜಾದೂ ಕನ್ನಡಿ ಹೆಚ್ಚು ಅನುಕೂಲವಾಗಲಿದೆ’ ಎಂದು ತಂಡದ ಸದಸ್ಯ ಕೃಷ್ಣಚೈತನ್ಯ ಹೊಳ್ಳ ಅಭಿಪ್ರಾಯಪಟ್ಟರು. ಈ ಉಪಕರಣ ಸಿದ್ಧಪಡಿಸಿದ ತಂಡದಲ್ಲಿ ವಿದ್ಯಾರ್ಥಿನಿಯರಾದ ರಶ್ಮಿ ಎಂ.ಜಿ. ಹಾಗೂ ವನಿತಾ ಪಿ. ಅವರೂ ಇದ್ದರು. ಪ್ರೊ. ಕೀರ್ತಿಪ್ರಸಾದ್‌ ಮಾರ್ಗದರ್ಶನ ನೀಡಿದ್ದರು.

ಈ ಮಾದರಿಗೆ ಕೆ.ಎಸ್‌.ಸಿ.ಎಸ್‌.ಟಿಯಿಂದ ₹ 6 ಸಾವಿರ ಶಿಷ್ಯವೇತನ ಸಿಕ್ಕಿದೆ. ಇದು ಆಗಸ್ಟ್‌ನಲ್ಲಿ ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಜಲಕೃಷಿ: ಮಣ್ಣು ಇಲ್ಲದೇ ಜೈವಿಕ ತ್ಯಾಜ್ಯದ ಪೋಷಕಾಂಶಯುಕ್ತ ನೀರಿನಲ್ಲಿ ಸಸಿಗಳನ್ನು ಬೆಳೆಸುವ ಜಲಕೃಷಿ ಮಾದರಿಯನ್ನು ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕಾರ್ತಿಕ್‌ ಕಿತ್ತೂರ, ಪೂರ್ಣಿಮಾ ಜಿ.ಎನ್‌, ಶ್ರುತಿ ಎಂ.ಎಸ್‌, ವೇದಾವತಿ ಎ. ಒಳಗೊಂಡ ತಂಡ ಮಾಡಿದೆ. ‘ಮನೆಯಲ್ಲಿನ ಜೈವಿಕ ತ್ಯಾಜ್ಯ ಬಳಸಿಕೊಂಡು, ಟೊಮೆಟೊ ಹಾಗೂ ವಿವಿಧ ಸೊಪ್ಪುಗಳನ್ನು ಬೆಳೆಸಲು ಸಾಧ್ಯವಿದೆ. ನಮ್ಮ ಸಲಹೆ ಪಡೆದು ಈ ಮಾದರಿಯನ್ನು ಅಳವಡಿಸಿಕೊಂಡು ಬ್ಯಾಡಗಿ ತಾಲ್ಲೂಕಿನಲ್ಲಿ ಮೇವು ಬೆಳೆಯಲಾಗುತ್ತಿದೆ’ ಎಂದು ಕಾರ್ತಿಕ್‌ ಮಾಹಿತಿ ನೀಡಿದರು.

ದ್ರವ ತ್ಯಾಜ್ಯ ಸಂಸ್ಕರಣೆ: ಅಲ್ಯುಮಿನಿಯಂ ಹಾಗೂ ಕಬ್ಬಿಣದ ಫಲಕಗಳನ್ನು ಬಳಸಿಕೊಂಡು ವಿದ್ಯುತ್‌ ಹಾಯಿಸುವ ಮೂಲಕ ದ್ರವ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ, ಶುದ್ಧ ನೀರನ್ನು ಪಡೆಯುವ ಮಾದರಿಯನ್ನು ಅನುಷಾ ಎಂ, ಅರ್ಚನಾ ಕೆ.ಪಿ, ದೀಪಾ ವಿ., ಶ್ರೀಧರ್‌ ಗೌಡ ಪಾಟೀಲ ಒಳಗೊಂಡ ತಂಡವು ರೂಪಿಸಿದೆ. ಇದರಲ್ಲಿ ಶುದ್ಧಗೊಳಿಸಿದ ನೀರನ್ನು ಕೈಗಾರಿಕೆಗಳಿಗೆ, ಕೃಷಿಗೆ ಬಳಸಿಕೊಳ್ಳಬಹುದು. ಜೊತೆಗೆ ಗೊಬ್ಬರವೂ ಲಭಿಸಲಿದೆ.

ಪ್ಲಾಸ್ಟಿಕ್‌ ಇಟ್ಟಿಗೆ: ಪೃಥ್ವಿರಾಜ್‌ ಎಸ್‌.ಆರ್‌, ರವಿತೇಜ್‌ ಎಂ.ಬಿ, ಶ್ರೀನಿವಾಸ್‌ ವಿ.ಆರ್‌, ಶರತ್‌ರಾಜ್‌ ಆರ್‌.ಎಂ. ಒಳಗೊಂಡ ತಂಡ ಪ್ಲಾಸ್ಟಿಕ್‌ ಪುಡಿಯನ್ನು ಬಳಸಿಕೊಂಡು ಇಟ್ಟಿಗೆ ತಯಾರಿಸಿದೆ. ಪ್ಲಾಸ್ಟಿಕ್‌ ಪುಡಿ ಜೊತೆಗೆ ಹಾರು ಬೂದಿ, ಜಲ್ಲಿ ಪುಡಿ, ಸಿಮೆಂಟ್‌ ಹಾಗೂ ಭತ್ತದ ತೌಡನ್ನೂ ಬಳಸಿಕೊಳ್ಳಲಾಗಿದೆ.

ಇನ್ನೊಂದೆಡೆ ಸಂದೀಪ, ಗಂಗಾಧರ, ವರುಣ್‌ ಹಾಗೂ ವೀರಣ್ಣ ಒಳಗೊಂಡ ತಂಡವು ಪ್ಲಾಸ್ಟಿಕ್‌ ಕರಗಿಸಿ ಇಟ್ಟಿಗೆಯನ್ನು ತಯಾರಿಸಿದೆ. ಇದಕ್ಕೆ ಅತಿ ಕಡಿಮೆ ಪ್ರಮಾಣದ ನೀರು ಸಾಕು. ಈ ಎರಡು ಬಗೆಯ ಒಂದು ಇಟ್ಟಿಗೆಯನ್ನು ತಯಾರಿಸಲು ₹ 7ರಿಂದ ₹ 8 ಖರ್ಚಾಗಲಿದೆ.

‘ವಿನೀರ್‌’ ಆ್ಯಪ್‌: ವಿವಿಧ ಬಗೆಯ ಸರ್ಕ್ಯೂಟ್‌ ಬೋರ್ಡ್‌ಗಳನ್ನು ಹೇಗೆ ಜೋಡಿಸಬೇಕು ಎಂಬ ಮಾಹಿತಿ ಇರುವ ‘ವಿನೀರ್‌’ ಮೊಬೈಲ್‌ ಆ್ಯಪ್‌ ಅನ್ನು ಆಸ್ಮಾ ಬಾನು, ದಿವ್ಯಶ್ರೀ ಬಿ.ಎಂ, ಮೇಘನಾ ಎಚ್‌.ಆರ್‌, ಶರತ್‌ ಎಂ. ಕೊಲೇಕರ್‌ ತಂಡವು ತಯಾರಿಸಿದೆ.

ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳು ತೆಂಗಿನಕಾಯಿ ಸುಲಿಯುವ ಯಂತ್ರವನ್ನು ತಯಾರಿಸಿದ್ದಾರೆ. ಕಾಲೇಜಿನ ಆರು ವಿಭಾಗಗಳಿಂದ ಒಟ್ಟು 24 ಆಯ್ದ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ದಾರಿ ತೋರುವ ಇ–ಅಂಧರ ಕೋಲು

ಕಂಪ್ಯೂಟರ್‌ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌ ವಿಭಾಗದ ಅರುಣ್‌ಕುಮಾರ್‌ ಬಿ.ಟಿ. ಮಾರ್ಗದರ್ಶನದಲ್ಲಿ ಸಹನಾ ಬಿ. ಸಯೀದಾ ಉಮರಾ ಬಾನು, ತೇಜಸ್ವಿನಿ ನೆಲವಿಗಿ, ಉಮಾ ಪಿ.ಕೆ ತಂಡ ‘ಇ–ಅಂಧರ ಕೋಲು’ ತಯಾರಿಸಿದೆ. ವೈಸ್‌ ಪ್ರೊಸೆಸರ್‌, ಜಿಪಿಎಸ್‌, ಅಲ್ಟ್ರಾ ಸೊನಿಕ್‌ ಸೆನ್ಸಾರ್‌, ವಾಟರ್‌ ಸೆನ್ಸಾರ್‌ಗಳನ್ನು ಬಳಸಿಕೊಂಡಿರುವ ನಿರ್ಮಿಸಿರುವ ಈ ಜಾಣ ಕೋಲು, ಅಂಧರಿಗೆ ಮಾರ್ಗದರ್ಶನ ಮಾಡುತ್ತದೆ. ಜಿಪಿಎಸ್‌ ಅಳವಡಿಸಿರುವುದಿಂದ ಅಂಧರು ದಾರಿ ತಪ್ಪಿಸಿಕೊಂಡಿದ್ದರೆ, ಅವರು ಎಲ್ಲಿದ್ದಾರೆ ಎಂಬುದು ಪೋಷಕರಿಗೆ ಗೊತ್ತಾಗುತ್ತದೆ. ಇದನ್ನು ಸಿದ್ಧಪಡಿಸಲು ₹ 5 ಸಾವಿರ ವೆಚ್ಚವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry