‘ಸಮನ್ವಯ ಸಮಿತಿಗೆ ಉತ್ತರಿಸುವೆ’

7

‘ಸಮನ್ವಯ ಸಮಿತಿಗೆ ಉತ್ತರಿಸುವೆ’

Published:
Updated:

ಹಾಸನ: ‘ಜಲಸಂಪನ್ಮೂಲ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಗತ್ಯವಿದ್ದರೆ ಈ ಸಂಬಂಧ ಸಮನ್ವಯ ಸಮಿತಿಗೆ ಉತ್ತರ ನೀಡುವೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಲ್ಲಿ ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಎಂಬ ಬಗ್ಗೆ ಮಾಹಿತಿ ಇದ್ದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಚಿವ ಡಿ.ಕೆ.ಶಿವಕುಮಾರ್ ಅವರೇ ಕರೆದು ನೇರವಾಗಿ ಮಾತನಾಡಲಿ. ಉತ್ತರ ನೀಡಲು ಸಿದ್ಧನಿದ್ದೇನೆ’ ಎಂದರು.

‘ನನಗೂ ಸ್ವಾಭಿಮಾನ ಇದೆ. ಇಂತಹ ಸುಳ್ಳು ಆರೋಪದಿಂದ ಹೆದರಿ ಓಡಿ ಹೋಗಲ್ಲ. ನನ್ನ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ನಡುವಿನ ಬಾಂಧವ್ಯ ಉತ್ತಮವಾಗಿದೆ. ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಯಲ್ಲಿ ಮಾತ್ರ ಭಾಗವಹಿಸುವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿ ನನ್ನ ಹೆಸರು ಜೋರಾಗಿಯೇ ಓಡುತ್ತಿದೆ. ಹೀಗಾಗಿ ಮಾಧ್ಯಮದವರು ಸುಮ್ಮನೆ ಏನೇನೊ ಹೇಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಚೆನ್ನಾಗಿ ನಡೆಯಬಾರದು ಎಂದು ಮಾಧ್ಯಮಗಳು ಗಾಳಿ ಸುದ್ದಿ ಹಬ್ಬಿಸುತ್ತಿವೆ’ ಎಂದು ಅವರು ಕಿಡಿಕಾರಿದರು.

‘ರಾಜ್ಯದಲ್ಲಿ ಕೋಮುವಾದಿ ಶಕ್ತಿ ಅಧಿಕಾರಕ್ಕೆ ಬರಬಾರದು ಎಂದು ದೇವೇಗೌಡರು ಜಾತ್ಯತೀತ ಪಕ್ಷದ ಜೊತೆಗೆ ಕೈಜೋಡಿಸಿದ್ದಾರೆ. ಅದಕ್ಕೆ ಬದ್ಧರಾಗಿ ಎಲ್ಲರೂ ನಡೆದುಕೊಂಡು ಹೋಗಬೇಕು. ಶಾಸಕರು ಅಥವಾ ಸಚಿವರಿಗೆ ನೋವಾಗುವಂತೆ ನಡೆದುಕೊಂಡಿದ್ದರೆ ಅದಕ್ಕೂ ಉತ್ತರಿಸುವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry