ಬಡವರಿಗೆ ಸೂರು ಯೋಜನೆ ‘ಮುಗಿಲೆತ್ತರ’!

7
ಯೋಜನೆ ವಿನ್ಯಾಸ ಬದಲು; 50 ಸಾವಿರ ಫಲಾನುಭವಿಗಳ ಆಯ್ಕೆ

ಬಡವರಿಗೆ ಸೂರು ಯೋಜನೆ ‘ಮುಗಿಲೆತ್ತರ’!

Published:
Updated:
ಬಡವರಿಗೆ ಸೂರು ಯೋಜನೆ ‘ಮುಗಿಲೆತ್ತರ’!

ಬೆಂಗಳೂರು: ರಾಜಧಾನಿಯ ಎತ್ತರೆತ್ತರದ ಬೆಳವಣಿಗೆಯ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಮುಗಿಲೆತ್ತರದ ವಸತಿ ಸಮುಚ್ಛಯಗಳ ನಿರ್ಮಾಣಕ್ಕೆ ವಸತಿ ಇಲಾಖೆ ಮುಂದಣಿ ಇಟ್ಟಿದೆ.

ನಗರದಲ್ಲಿ ಭೂ ಅಲಭ್ಯತೆಯ ಕಾರಣದಿಂದ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’ಯ ಮನೆಗಳನ್ನು ಲಂಬಾಕೃತಿಯಲ್ಲಿ ನಿರ್ಮಿಸಲು ಇಲಾಖೆ ನಿರ್ಧರಿಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ಆರಂಭದಲ್ಲಿ ಜಿ+ 3 ಅಂತಸ್ತಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಚೆನ್ನೈ, ಹೈದರಾಬಾದ್‌ನಲ್ಲಿ ಸ್ಥಳೀಯ ಸರ್ಕಾರಗಳೇ ಹತ್ತು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿ ಯಶಸ್ಸು ಸಾಧಿಸಿವೆ. ಅಲ್ಲಿನ ಮಾದರಿಗಳನ್ನು ಅಧ್ಯಯನ ಮಾಡಿದ ಬಳಿಕ ಯೋಜನೆಯ ವಿನ್ಯಾಸ ಬದಲಿಸಲು ತೀರ್ಮಾನಿಸಲಾಗಿದ್ದು, ಜಿ +14 ಅಂತಸ್ತಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ತಲೆ ಎತ್ತಲಿವೆ.

ಬಡವರಿಗೆ ಸೂರು ಒದಗಿಸುವ ಯೋಜನೆಯನ್ನು ಸಿದ್ದರಾಮಯ್ಯ ಅವರು 2017–18ರ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಮೂಲಕ ಮಹತ್ವಾಕಾಂಕ್ಷಿ ಯೋಜನೆಗೆ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೇ 50 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

‘ರಾಜ್ಯದ ಬೇರೆ ಭಾಗಗಳಲ್ಲಿ ಜಿ+3 ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ಕಟ್ಟಲಾಗುತ್ತಿದೆ. 2.3 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದ್ದೇವೆ. ಅಲ್ಲೆಲ್ಲ ಜಾಗದ ಕೊರತೆ ಇಲ್ಲ. ಆದರೆ, ನಗರದಲ್ಲಿ ನಮಗೆ ಬೇಕಾದ ಭೂಮಿಯನ್ನು ಪಡೆಯುವುದೇ ದೊಡ್ಡ ಸವಾಲು. ಕಟ್ಟಡಗಳ ಲಂಬಾಕಾರ ನಿರ್ಮಾಣದಿಂದ ವೆಚ್ಚವೂ ಕಡಿಮೆಯಾಗಲಿದೆ’ ಎಂದು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

‘ಎಲೆಕ್ಟ್ರಾನಿಕ್‌ ಸಿಟಿಯಲ್ಲಿ 20–25 ಅಂತಸ್ತಿನ ಕಟ್ಟಡಗಳೇ ಇವೆ. ಟಿಸಿಎಸ್‌ ಕಚೇರಿಯ ಕೂಗಳತೆ ದೂರದಲ್ಲಿ ನಮ್ಮ ಅಪಾರ್ಟ್‌ಮೆಂಟ್‌ ಸಮುಚ್ಚಯ ಸಹ ಇರಲಿದೆ. ನಾವ್ಯಾಕೆ ಮಾತ್ರ ಜಿ+3 ಕಟ್ಟಡಗಳಿಗೆ ಸೀಮಿತರಾಗಬೇಕು. ಈ ಕಟ್ಟಡಗಳಲ್ಲಿ ಲಿಫ್ಟ್‌ ಹಾಗೂ ಅಗ್ನಿಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸುತ್ತೇವೆ’ ಎಂದು ಅವರು ಹೇಳಿದರು.

 

ಐದು ವರ್ಷಗಳಲ್ಲಿ ನಗರ ಜಿಲ್ಲಾಡಳಿತ ಸುಮಾರು 16 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಲಕ್ಷ ಸೂರುಗಳ ನಿರ್ಮಾಣಕ್ಕೆ 1,130 ಎಕರೆ ಬೇಕಿದೆ ಎಂದು ಅಂದಾಜಿಸಲಾಗಿತ್ತು. ಜಿಲ್ಲಾಡಳಿತವು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ 582.39 ಎಕರೆ ಗೋಮಾಳ ಹಾಗೂ ಖರಾಬು ಭೂಮಿಯನ್ನು ಶುರುವಿನಲ್ಲೇ ಹಸ್ತಾಂತರಿಸಿತ್ತು. ಬಳಿಕ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿತ್ತು. ಇಲ್ಲಿಯವರೆಗೆ 1,040 ಎಕರೆ ಜಾಗವನ್ನು ನೀಡಿದೆ. ಈ ಜಾಗಗಳು 43 ಕಡೆ ಹಂಚಿ ಹೋಗಿವೆ.

‘ಒಂದು ಎಕರೆಯಲ್ಲಿ ಜಿ+3 ಅಂತಸ್ತಿನ 140 ಮನೆಗಳನ್ನು ನಿರ್ಮಿಸಬಹುದು. ಆದರೆ, ಅಷ್ಟೇ ಜಾಗದಲ್ಲಿ ಜಿ+14 ಅಂತಸ್ತಿನ 360 ಮನೆಗಳು ಬರಲಿವೆ. ಹೀಗಾದರೆ, ಲಕ್ಷ ಮನೆಗೆ 400–500 ಎಕರೆ ಸಾಕು. ಒಂದು ಲಕ್ಷ ವಸತಿ ನಿರ್ಮಾಣ ಪೂರ್ಣಗೊಂಡ ಬಳಿಕ, ಇನ್ನೂ ಐದು ಲಕ್ಷ ವಸತಿರಹಿತರಿಗೆ ಸೂರು ಕಲ್ಪಿಸುತ್ತೇವೆ’ ಎಂದರು.

ಬಿಲ್ಡರ್‌ಗಳಿಗೆ ಅಭಿವೃದ್ಧಿ ಹಕ್ಕು: ಯೋಜನೆಯ ಶೇ 25ರಷ್ಟು ಭೂಮಿಯ ಅಭಿವೃದ್ಧಿ ಹಕ್ಕನ್ನು ಡೆವಲಪರ್‌ಗಳಿಗೆ ಇಲಾಖೆ ಹಸ್ತಾಂತರಿಸಲಿದೆ. ಶೇ 75 ಭಾಗದಲ್ಲಿ ಕಟ್ಟಡ ನಿರ್ಮಿಸಿ ಹಂಚಿಕೆ ಮಾಡಿದ ಬಳಿಕಷ್ಟೇ ಡೆವಲಪರ್‌ ಶೇ 25 ಭಾಗವನ್ನು ಮಾರಾಟ ಮಾಡಬಹುದು. ಅದನ್ನು ವಾಣಿಜ್ಯ ಚಟುವಟಿಕೆಗಳಿಗೂ ಬಳಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

‘ಈ ಯೋಜನೆಗೆ ಮುಂದೆಯೂ ಅಡಚಣೆಗಳು ಎದುರಾಗಲಿವೆ. ಯೋಜನೆಗೆ ಮೀಸಲಿಟ್ಟ ಜಾಗ ತಮಗೆ ಸೇರಿದ್ದು ಎಂದು ಹಳೆಯ ದಾಖಲೆಗಳನ್ನು ಹಿಡಿದುಕೊಂಡು ಅನೇಕ ಮಂದಿ ಬರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

‘ಬಡವರ ಸೂರುಗಳಿಗೆ ನಗರದ ಕೇಂದ್ರ ಭಾಗದಲ್ಲಿ ಜಾಗ ಇಲ್ಲ. ಹೊರವಲಯದಲ್ಲೇ ಸಮುಚ್ಚಯಗಳನ್ನು ಕಟ್ಟಬೇಕಿದೆ. ಈ ವೇಳೆ ಸ್ಥಳೀಯರಿಂದ ಪ್ರತಿರೋಧ ಎದುರಾಗುವ ಸಾಧ್ಯತೆಯೂ ಇದೆ. ಇವುಗಳನ್ನೆಲ್ಲ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

**

ಯಾರಿಗೆ ಎಷ್ಟು ಮೀಸಲು

ವಸತಿ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 30, ಪರಿಶಿಷ್ಟ ಪಂಗಡಕ್ಕೆ ಶೇ 10, ಅಲ್ಪಸಂಖ್ಯಾತರಿಗೆ ಶೇ 10 ರಷ್ಟು ಮೀಸಲು ಇದೆ.

‘ಆರಂಭದಲ್ಲಿ ಒಂದು ಬಿಎಚ್‌ಕೆಯ 80 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತದೆ. ನಂತರ 2 ಬಿಎಚ್‌ಕೆಯ 20 ಸಾವಿರ ಮನೆಗಳನ್ನು ನಿರ್ಮಿಸುತ್ತೇವೆ. ಪ್ರತಿ ಮನೆಯ ಫಲಾನುಭವಿ ₹3 ಲಕ್ಷ ಭರಿಸಬೇಕಿದೆ. ಅವರಿಗೆ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತದೆ’ ಎಂದು ಕಪಿಲ್‌ ಮೋಹನ್‌ ತಿಳಿಸಿದರು.

**

ಯೋಜನೆಗೆ ಕೇಂದ್ರ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.

–ಕಪಿಲ್‌ ಮೋಹನ್‌, ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ

**

ವಸತಿ ಯೋಜನೆ ವಿಶೇಷಗಳು

320 ಚದರ ಅಡಿ: ಒಂದು ಬಿಎಚ್‌ಕೆ ಮನೆಯ ವಿಸ್ತೀರ್ಣ

₹6 ಲಕ್ಷ: ಮನೆಯ ಬೆಲೆ

*

520 ಚದರ ಅಡಿ: ಎರಡು ಬಿಎಚ್‌ಕೆ ಮನೆಯ ವಿಸ್ತೀರ್ಣ

12 ಲಕ್ಷ: ಮನೆಯ ಬೆಲೆ

*

₹ 3.50 ಲಕ್ಷ: ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ‌ನೀಡುವ ಸಹಾಯಧನ

₹ 2.70 ಲಕ್ಷ: ಸಾಮಾನ್ಯ ವರ್ಗಕ್ಕೆ ಸಹಾಯಧನ

₹1.5 ಲಕ್ಷ: ಪ್ರತಿ ಮನೆಗೆ ಕೇಂದ್ರ ಸರ್ಕಾರದ ಸಹಾಯಧನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry