ಎನ್‌ಪಿಎ: ₹ 1.20 ಲಕ್ಷ ಕೋಟಿ ವಜಾ

7

ಎನ್‌ಪಿಎ: ₹ 1.20 ಲಕ್ಷ ಕೋಟಿ ವಜಾ

Published:
Updated:
ಎನ್‌ಪಿಎ: ₹ 1.20 ಲಕ್ಷ ಕೋಟಿ ವಜಾ

ನವದೆಹಲಿ : ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 2017–18ನೇ ಹಣಕಾಸು ವರ್ಷದಲ್ಲಿ ಗರಿಷ್ಠ ಪ್ರಮಾಣದ ನಷ್ಟಕ್ಕೆ ಗುರಿಯಾಗಿದ್ದರೂ, ಅದಕ್ಕೂ ಹೆಚ್ಚಿನ ಮೊತ್ತದ ವಸೂಲಾಗದ ಸಾಲ (ಎನ್‌ಪಿಎ) ವಜಾ ಮಾಡಿವೆ.

ಒಂದು ವರ್ಷದ ಅವಧಿಯಲ್ಲಿ ₹1.20 ಲಕ್ಷ ಕೋಟಿಯಷ್ಟು ‘ಎನ್‌ಪಿಎ’ ವಜಾ ಮಾಡಲಾಗಿದೆ. ಇದು ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಿಗೆ ಆಗಿರುವ ನಷ್ಟಕ್ಕಿಂತಲೂ ಒಂದೂವರೆ ಪಟ್ಟು ಹೆಚ್ಚಿಗೆ ಇದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ದಶಕದಲ್ಲಿ ಮೊದಲ ಬಾರಿ: ನಷ್ಟದ ಪ್ರಮಾಣ ಹೆಚ್ಚಿಗೆ ಇರುವಂತಹ ಸಂದರ್ಭದಲ್ಲಿಯೂ ಭಾರಿ ಮೊತ್ತದ ‘ಎನ್‌ಪಿಎ’ ವಜಾ ಮಾಡಿರುವುದು ದಶಕದಲ್ಲಿಯೇ ಇದೇ ಮೊದಲ ಬಾರಿಯಾಗಿದೆ. ವಸೂಲಾಗದ ಸಾಲದ ತೀವ್ರ ಸಮಸ್ಯೆ ಎದುರಿಸುತ್ತಿರುವ ಬ್ಯಾಂಕ್‌ಗಳಿಗೆ ಇದು ಇನ್ನೊಂದು ಬಗೆಯ ಹೊಡೆತವಾಗಿದೆ. 2016–17ರವರೆಗೂ ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳು ಲಾಭದ ಲ್ಲಿದ್ದವು. 2017–18ರಲ್ಲಿ ₹ 85,370 ಕೋಟಿ ನಷ್ಟಕ್ಕೆ ಗುರಿಯಾಗಿವೆ.

2016–17 ರಲ್ಲಿ ₹ 474 ಕೋಟಿ ನಷ್ಟ ಉಂಟಾಗಿತ್ತು.  ₹ 81,683 ಕೋಟಿ ಯಷ್ಟು ಎನ್‌ಪಿಎ ವಜಾ ಮಾಡಲಾಗಿತ್ತು.

ನಷ್ಟ ಭರ್ತಿಗೆ ಲಾಭದ ಬಳಕೆ: ಬ್ಯಾಂಕಿಂಗ್‌ ಭಾಷೆಯಲ್ಲಿ  ಸಾಲ ವಜಾ ಎಂದರೆ, ಎನ್‌ಪಿಎ ಖಾತೆಗಳಿಗೆ ಬ್ಯಾಂಕ್‌ ತನ್ನ ಲಾಭದ ಶೇ 100ರಷ್ಟನ್ನು ತೆಗೆದು ಇರಿಸುವುದು ಎಂದರ್ಥ.

ಇದರಿಂದ ಬ್ಯಾಂಕ್‌ನ ಲೆಕ್ಕಪತ್ರದಲ್ಲಿ ‘ಎನ್‌ಪಿಎ’ದ ಅಸ್ತಿತ್ವವೇ ಇರುವುದಿಲ್ಲ. ಇಂತಹ ಸಾಲ ವಜಾ ನಿರ್ಧಾರದಿಂದ ಬ್ಯಾಂಕ್‌ಗಳ ಲಾಭವೆಲ್ಲ ಕೊಚ್ಚಿಕೊಂಡು ಹೋಗುತ್ತದೆ. ಆರ್‌ಬಿಐ ಸಾಲ ‍ಪುನರ್‌ ಹೊಂದಾಣಿಕೆ ನಿಯಮಗಳನ್ನು ಬದಲಿಸಿರುವುದರಿಂದ  ಬ್ಯಾಂಕ್‌ಗಳ ‘ಎನ್‌ಪಿಎ’ ಸಂಕಟ ಇನ್ನಷ್ಟು ಹೆಚ್ಚಿದೆ.

ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಒಟ್ಟಾರೆ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ.

‘ಸಂಪತ್ತು ಪುನರ್‌ರಚನಾ ಕಂಪನಿ ಅಥವಾ ಸಂಪತ್ತು ನಿರ್ವಹಣಾ ಕಂಪನಿ ಸ್ಥಾಪಿಸುವ ಬಗ್ಗೆ ಶಿಫಾರಸು ನೀಡಲು ಸಮಿತಿ ರಚಿಸಲಾಗಿದೆ. ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಕಾರ್ಯನಿರ್ವಾಹಕಯೇತರ ಅಧ್ಯಕ್ಷ ಸುನಿಲ್‌ ಮೆಹ್ತಾ ನೇತೃತ್ವದಲ್ಲಿ ಈ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಮಿತಿಯು ಇನ್ನೂ ವರದಿ ಸಲ್ಲಿಸಬೇಕಾಗಿದೆ.

ಎನ್‌ಪಿಎ ವಜಾ ಆಗಿರುವ ವಿವರ

ವರ್ಷ;ಎನ್‌ಪಿಎ (ಕೋಟಿಗಳಲ್ಲಿ)

2013–14;₹ 34,409

2014–15;₹ 49,018

2015–16;₹ 57,585

2016–17;₹ 81,683

2017–18;₹ 1.20 ಲಕ್ಷ ಕೋಟಿ

ಬ್ಯಾಂಕ್‌ವಾರು ಮಾಹಿತಿ

(ಕೋಟಿಗಳಲ್ಲಿ)

ಎಸ್‌ಬಿಐ;₹ 40,196

ಕೆನರಾ ಬ್ಯಾಂಕ್‌;₹ 8,310

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌;₹ 7,407

ಬ್ಯಾಂಕ್‌ ಆಫ್‌ ಬರೋಡಾ;₹ 4,948

*ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌;₹ 10,307

ಬ್ಯಾಂಕ್‌ ಆಫ್‌ ಇಂಡಿಯಾ;₹ 9,093

ಐಡಿಬಿಐ ಬ್ಯಾಂಕ್‌; ₹ 6,632

ಅಲಹಾಬಾದ್‌ ಬ್ಯಾಂಕ್‌;₹ 3,648

* ರೇಟಿಂಗ್‌ ಸಂಸ್ಥೆ ‘ಇಕ್ರಾ’ ಮಾಹಿತಿ

***

ಅಂಕಿ–ಅಂಶ

21 -ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ

11 -21 ಬ್ಯಾಂಕ್‌ಗಳಲ್ಲಿ ಆರ್‌ಬಿಐನ ನಷ್ಟ ಸರಿದೂಗಿಸುವ ವ್ಯಾಪ್ತಿಯೊಳಗಿರುವ ಬ್ಯಾಂಕ್‌ಗಳು

₹ 8.31 ಲಕ್ಷ ಕೋಟಿ -2017ರ ಡಿಸೆಂಬರ್‌ ಅಂತ್ಯಕ್ಕೆ ಬ್ಯಾಂಕಿಂಗ್‌ ವಲಯದ ವಸೂಲಿಯಾಗದ ಸಾಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry