ರಾಷ್ಟ್ರಪತಿ ಆಗುವ ಉತ್ಸಾಹವಿರಲಿ

7
ಶಾಲಾ ಮಕ್ಕಳಿಗೆ ಜೈನಮುನಿ ಚಿನ್ಮಯ ಸಾಗರ ಮಹಾರಾಜರ ಸಲಹೆ

ರಾಷ್ಟ್ರಪತಿ ಆಗುವ ಉತ್ಸಾಹವಿರಲಿ

Published:
Updated:

ಬಾಗಲಕೋಟೆ: ‘ಆಚಾರ, ವಿಚಾರ, ಸಂಪ್ರದಾಯ, ಕಾಯಕ ಹಾಗೂ ಭಾವೈಕ್ಯತೆಯ ನೆಲವಾದ ಭಾರತ ವಿಶ್ವದಲ್ಲಿಯೇ ಮಾದರಿ. ಇಲ್ಲಿ ಜನಿಸಿದ ಮಕ್ಕಳು ದೇಶದ ಗೌರವದ ಸಂಕೇತಗಳಾಗಿದ್ದಾರೆ’ ಎಂದು ಜೈನಮುನಿ ಚಿನ್ಮಯ ಸಾಗರ ಮಹಾರಾಜ ಹೇಳಿದರು.

ಇಲ್ಲಿನ ವಿದ್ಯಾಗಿರಿಯ ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ದಿಗಂಬರ ಜೈನ ಸಮಾಜದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನುದ್ದೇಶಿಸಿ ಆಧ್ಯಾತ್ಮಿಕ ಪ್ರವಚನ ನೀಡಿದರು.

ವಿದ್ಯಾರ್ಥಿ ಬದುಕಿನಲ್ಲಿ ಬಲು ಎಚ್ಚರದಿಂದ ನಡೆದು ವಿದ್ಯೆಯ ಜೊತೆಗೆ ವಿನಯವಂತರಾಗಬೇಕು. ತಪ್ಪು ಮಾಡುವುದು ಸಹಜ. ಅದೇ ತಪ್ಪನ್ನು ಪದೇ ಪದೇ ಮಾಡದೇ ಮಾಡದೇ ತಂದೆ-–ತಾಯಿ, ಗುರುಗಳಿಗೆ ಗೌರವ ತರುವಂತಹ ಕಾರ್ಯ ಮಕ್ಕಳು ಮಾಡಬೇಕು ಎಂದರು.

ಮಕ್ಕಳಿಗೆ ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಸಾಧನೆ ಮಾಡಬೇಕೆಂಬ ಛಲವಿರಬೇಕು. ರಾಷ್ಟ್ರಪತಿ ಆಯ್ಕೆ ಮಾಡುತ್ತೇನೆ ಎಂಬುದರ ಬದಲು ನಾನೇ ರಾಷ್ಟ್ರಪತಿಯಾಗುತ್ತೇನೆ ಎಂಬ ಕನಸು ಕಟ್ಟಬೇಕು. ನಿಮ್ಮಲ್ಲಿ ಅಂತಹ ಉತ್ಸಾಹ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಪೂಜ್ಯರು ಲೋಕಕಲ್ಯಾಣಕ್ಕಾಗಿ ನಾಡಿನೆಲ್ಲೆಡೆ ಸಂಚರಿಸಿದ್ದಾರೆ. ಇಂತಹ ಮಹಾತ್ಮರ ಸೇವೆಯಿಂದಲೇ ದೇಶದ ಇಂದು ಪುಣ್ಯದ ತಾಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ.ವಿ.ವಿ ಸಂಘದ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಸಜ್ಜನ, ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷ ಸಿದ್ದಣ್ಣ ಶೆಟ್ಟರ, ನಿವೃತ್ತ ಪ್ರಾಚಾರ್ಯ ಬೋಳಿಶೆಟ್ಟಿ, ಆರ್.ಜಿ.ಅಳ್ಳಿಗಿ, ಜೈನ ಸಮಾಜದ ಅಧ್ಯಕ್ಷ ಭೂಪಾಲರಾವ್ ಸಂಗಮಿ, ಅಜಿತ್ ಒಂದಕುದರಿ, ಋಷಭ ಹೇಶೆ, ವಿಲಾಸ ಒಂದಕುದರಿ, ಧನಪಾಲ್ ದಂಡಾವತಿ, ಅಪ್ಪಣ್ಣ ಒಂದಕುದರಿ, ರಾವ್‌ಸಾಹೇಬ ಪಾಟೀಲ, ಧರಣೇಂದ್ರ ಬೀಳಗಿ, ರವಿ ಒಂದಕುದರಿ ಉಪಸ್ಥಿತರಿದ್ದರು.

ಮೆರವಣಿಗೆ ಮೂಲಕ ಕರೆತಂದರು..

ಪ್ರಾರಂಭದಲ್ಲಿ ಚಿನ್ಮಯ ಸಾಗರ ಮಹಾರಾಜ ಅವರನ್ನು ಜೈನ ಮಂದಿರದಿಂದ ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದವರೆಗೆ ಪಾದಯಾತ್ರೆ ಮೂಲಕ ಕರೆತರಲಾಯಿತು. ಈ ವೇಳೆ ಚಕ್ರೇಶ್ವರಿ ಮಹಿಳಾ ಮಂಡಳದಿಂದ ಕುಂಭ ಮೇಳ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry