ಅಲೆಮಾರಿಗಳು ‘ದಾಖಲೆಗಳಿಲ್ಲದ ನತದೃಷ್ಟರು’!

7
ಗುಬ್ಬಿ: ‘ಅಕ್ಷರ ಮಡಿಲು’ ಕಾರ್ಯಕ್ರಮದಲ್ಲಿ ಡಾ.ಬಾಲಗುರುಮೂರ್ತಿ ವಿಷಾದ; ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಅಲೆಮಾರಿಗಳು ‘ದಾಖಲೆಗಳಿಲ್ಲದ ನತದೃಷ್ಟರು’!

Published:
Updated:
ಅಲೆಮಾರಿಗಳು ‘ದಾಖಲೆಗಳಿಲ್ಲದ ನತದೃಷ್ಟರು’!

ಗುಬ್ಬಿ: ‘ಜಾತ್ಯತೀತ ಬದುಕು ನಿರ್ಮಿಸಿಕೊಳ್ಳಲು ಯತ್ನಿಸುತ್ತಿರುವ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸರ್ಕಾರ ಮುಖ್ಯವಾಹಿನಿಗೆ ತರಬೇಕು’ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಕೋಶದ ನೋಡಲ್ ಅಧಿಕಾರಿ ಡಾ.ಬಾಲಗುರುಮೂರ್ತಿ ಒತ್ತಾಯಿಸಿದರು.

ಪಟ್ಟಣದ ಗಟ್ಟಿಲೇಔಟ್‌ನ ಪತಂಜಲಿ ಉದ್ಯಾನದ ಆವಣದಲ್ಲಿ ಗುರುವಾರ ಮಡಿಲು ಸೇವಾಟ್ರಸ್ಟ್ ಹಮ್ಮಿಕೊಂಡಿದ್ದ ‘ಅಕ್ಷರ ಮಡಿಲು’ ಕಾರ್ಯಕ್ರಮದಲ್ಲಿ ಉಚಿತ ಬ್ಯಾಗ್ ಹಾಗೂ ಪಠ್ಯ ಸಾಮಗ್ರಿ ವಿತರಿಸಿ ಮಾತನಾಡಿದರು.

‘ಅಲೆಮಾರಿ ಬುಡಕಟ್ಟು ಸಮುದಾಯಗಳು ನೆಲೆ ನಿಲ್ಲಲು ಬೇಕಾದ ವಾತಾವರಣ ಇಲ್ಲದಾಗಿದೆ. ಅನೇಕ ದಶಕಗಳಿಂದ ಯಾವುದೇ ಸೌಲಭ್ಯಗಳು ದಕ್ಕಿಲ್ಲ. ಜಾತಿ ಪ್ರಮಾಣಪತ್ರ ನೀಡುವ ಅಧಿಕಾರಿಗಳು ನಿಮ್ಮ ಜಾತಿ ಸೂಚಿಸುವ ಯಾವುದಾದರೂ ದಾಖಲೆ ತನ್ನಿ ಎಂದು ಹೇಳುತ್ತಾರೆ. ಈ ಅಲೆಮಾರಿಗಳು ದಾಖಲೆಗಳಿಲ್ಲದ ನತದೃಷ್ಟರು’ ಎಂದು ಅಭಿಪ್ರಾಯಪಟ್ಟರು.

ದಿನದಿಂದ ದಿನಕ್ಕೆ ಜಾತಿ ಪ್ರಜ್ಞೆ ಹೆಚ್ಚುತ್ತಿದೆ. ಸಂವಿಧಾನ ಆಶಯ ಈಡೇರದಿರುವುದು ಇಂದಿನ ದುರಂತವಾಗಿದೆ. ದೇಶದಲ್ಲಿ ಜಾತಿ ಹೆಸರನ್ನು ಮುಖ್ಯವಾಹಿನಿಗೆ ತರಲು ಹೋರಾಟ ನಡೆಯುತ್ತಿದೆ. ರಾಜಕಾರಣವೂ ಜಾತಿಯ ಮೇಲೆ ನಿಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಮಾತನಾಡಿ, ‘ಶಿಕ್ಷಣಕ್ಕೆ

ಒತ್ತು ನೀಡಿದಾಗ ಮಾತ್ರ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ. ಅಲೆಮಾರಿ ಕುಟುಂಬಗಳ ತಾಯಂದಿರು ಹಾಗೂ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪಣ ತೊಡಬೇಕಿದೆ. ಜಾತಿ ಒಂದು ಶಾಪವಾಗಿದ್ದು, ದೊಡ್ಡ ಸಮುದಾಯಗಳ ನಡುವೆ ಜಾತಿ ಅರಳುವ ಹೂವಾದರೆ, ಸಣ್ಣ ಸಮುದಾಯಗಳ ನಡುವೆ ಇದೇ ಜಾತಿ ಅರಳಲಾಗದೆ ನರಳುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಹಲವಾರು ತಾಲ್ಲೂಕುಗಳಿಂದ ಅಂದರೆ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರದಿಂದ ಬಂದಿದ್ದ 200ಕ್ಕೂ ಹೆಚ್ಚು ಅಲೆಮಾರಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಆರ್.ಹೊನ್ನೆಶಪ್ಪ, ಸೀಜಲ್ ನ್ಯೂ ಲೈಫ್ ಫೌಂಡೇಷನ್ ಕಾರ್ಯದರ್ಶಿ ಡಾ.ಪದ್ಮಾಕ್ಷಿಲೋಕೇಶ್, ಹಂಪಿ ವಿಶ್ವವಿದ್ಯಾನಿಲಯ ಬುಡಕಟ್ಟು ಅಧ್ಯಯನ ವಿಭಾಗದ ಸಂಶೋಧನಾರ್ಥಿ ವೇಷ್ಗಾರು ರಾಮಾಂಜನೆಯ, ವೈದ್ಯರಾದ ಡಾ.ಪವನ್, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿಶ್ವನಾಥ್, ಮಡಿಲು ಸೇವಾ ಟ್ರಸ್ಟ್ ಟ್ರಸ್ಟಿ ಲಕ್ಷ್ಮಿಅರಸು ಇದ್ದರು.

28 ಎಕರೆ ಜಾಗ ಮೀಸಲು

‘ತುಮಕೂರು ಜಿಲ್ಲೆಯಲ್ಲಿ ಬುಡಕಟ್ಟು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ 28 ಎಕರೆ ಜಾಗವನ್ನು ಮೀಸಲಿಡಲಾಗಿದೆ. ರಾಜ್ಯದಲ್ಲಿ 11 ಲಕ್ಷ ಬುಡಕಟ್ಟು ಅಲೆಮಾರಿಗಳಿದ್ದು, ಇವರ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಹಣ ಮೀಸಲಿಟ್ಟಿದೆ. ಗ್ರಾಮೀಣ ಭಾಗದಲ್ಲಿ ಅಲೆಮಾರಿಗಳು ಮನೆಕಟ್ಟಿಕೊಳ್ಳಲು ಒಂದು ಕುಟುಂಬಕ್ಕೆ 3.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿ 4ಲಕ್ಷ ಹಣ ನೀಡಲು ಸರ್ಕಾರ ಬದ್ದವಾಗಿದೆ. ಗುಬ್ಬಿಯಲ್ಲಿ ಮಡಿಲು ಸೇವಾಟ್ರಸ್ಟ್ ಅಲೆಮಾರಿಗಳ ಪ್ರಗತಿಗಾಗಿ ಶ್ರಮಿಸುತ್ತಿದೆ. ಇವರ ಮೊದಲ ಮತದಾನಕ್ಕಾಗಿ ಹಾಗೂ ಈ ಮಕ್ಕಳ ಓದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದು ಡಾ.ಬಾಲಗುರುಮೂರ್ತಿ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry