ಸೋಮವಾರ, ಜೂನ್ 21, 2021
27 °C

ಅಡಗಿ ಹೋದ ವಿವೇಕದ ದನಿ

ಉಮಾಪತಿ. ಡಿ. Updated:

ಅಕ್ಷರ ಗಾತ್ರ : | |

ಅಡಗಿ ಹೋದ ವಿವೇಕದ ದನಿ

ಕಾಶ್ಮೀರ ಎಂಬ ಧರೆಯ ಮೇಲಿನ ಸ್ವರ್ಗ ಆಳದ ಉಮ್ಮಳದಲ್ಲಿ ಮುಳುಗಿ ದಶಕಗಳೇ ಉರುಳಿವೆ. ಭಯೋತ್ಪಾದಕ ದಾಳಿಗಳು, ಹತ್ಯೆಗಳು, ಕಾಯಮ್ಮಾಗಿ ಕಾಣೆಯಾಗುವ ಯುವಕರು, ಸೇನೆಯಿಂದ ಅಧಿಕಾರ ದುರುಪಯೋಗ, ಚಿತ್ರಹಿಂಸೆಯ ಪ್ರಕರಣಗಳು, ಮಿಲಿಟರೀಕರಣ, ಕರ್ಫ್ಯೂ, ಮಹಿಳೆಯರ ಮೇಲೆ ಅತ್ಯಾಚಾರಗಳು ಕಾಶ್ಮೀರದ ಜನಜೀವನವನ್ನು ಶಾಶ್ವತವಾಗಿ ಛಿದ್ರಗೊಳಿಸಿವೆ.

ಹಿರಿಯ ಪತ್ರಕರ್ತ ಶುಜಾತ್ ಬುಖಾರಿ, ಮೊನ್ನೆ ಶ್ರೀನಗರದಲ್ಲಿ ಪ್ರತ್ಯೇಕತಾವಾದಿ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಕಳೆದ ಹತ್ತು ವರ್ಷಗಳಿಂದ ಶ್ರೀನಗರದಿಂದ ಹೊರಬೀಳುವ ದೈನಿಕ ‘ದಿ ರೈಸಿಂಗ್ ಕಾಶ್ಮೀರ್’ನ ಪ್ರಧಾನ ಸಂಪಾದಕರಾಗಿದ್ದರು ಶುಜಾತ್.

ಕಣಿವೆಯೊಳಗಿಂದ ಕೇಳಿ ಬರುತ್ತಿದ್ದ ವಿವೇಕದ ಮತ್ತು ಸೌಮ್ಯವಾದಿ ದನಿ ಶುಜಾತ್. ಕಾಶ್ಮೀರ ಸಮಸ್ಯೆ ಬಿಡಿಸಲು ಶಾಂತಿ ಮತ್ತು ಮಾತುಕತೆಯ ದಾರಿಯನ್ನು ಸದಾ ಪ್ರತಿಪಾದಿಸಿದ್ದರು. ಕಾಶ್ಮೀರಿ ಪಂಡಿತರು ಮತ್ತು ಮುಸಲ್ಮಾನರ ನಡುವಣ ಕಂದಕವನ್ನು ತುಂಬಲು ಅವರದು ತೀರದ ಉತ್ಸಾಹ. ಈ ಕಾರಣಕ್ಕಾಗಿಯೇ ಸಾವು ಮೇಲೆರಗಿ ಅವರನ್ನು ಎಳೆದೊಯ್ದಿತು.

ಭಾರತ ಸರ್ಕಾರಕ್ಕೆ ‘ಬಿಕರಿ’ಯಾದ ವ್ಯಕ್ತಿ ಎಂದು ಜಿಹಾದಿಗಳು ತಿಳಿದಿದ್ದರು. ಕಟ್ಟರ್ ಬಲಪಂಥೀಯರು ಇದೇ ಶುಜಾತ್ ಅವರನ್ನು ‘ಜಿಹಾದಿ’ ಎಂದು ಕರೆದದ್ದು ವಿಚಿತ್ರ ವಿಪರ್ಯಾಸವಲ್ಲದೆ ಮತ್ತೇನು? ಪ್ರತ್ಯೇಕತಾವಾದಿಗಳು ಮತ್ತು ದೇಶಭಕ್ತರು ಇಬ್ಬರೂ ಅವರನ್ನು ಇಷ್ಟಪಡುತ್ತಿರಲಿಲ್ಲ. ಪತ್ರಕರ್ತನೊಬ್ಬನ ನಿಷ್ಪಕ್ಷಪಾತ ಮತ್ತು ನ್ಯಾಯತತ್ಪರತೆಗೆ ಹಾಗೂ ಜನಪರ ನಿಲುವಿಗೆ ಇದಕ್ಕಿಂತ ಉತ್ತಮ ಗೌರವ ದೊರೆಯಲಾರದು.

ಪತ್ರಕರ್ತರಾಗಿ ತಮ್ಮ ದಿಟ್ಟ ಮತ್ತು ಸ್ವತಂತ್ರ ನಿಲುವುಗಳಿಗಾಗಿ ದೇಶವಿದೇಶಗಳಲ್ಲಿ ಆದರ ಗಳಿಸಿದ್ದ ಶುಜಾತ್, ಇಲ್ಲಿಯವರೆಗೆ ಹತ್ಯೆಯ ಮೂರು ಯತ್ನಗಳಿಂದ ಪಾರಾಗಿದ್ದರು. ನಾಲ್ಕನೆಯದು ಅವರನ್ನು ಉಳಿಸಲಿಲ್ಲ. 2006ರಲ್ಲಿ ಅವರನ್ನು ಭಯೋತ್ಪಾದಕರ ಗುಂಪೊಂದು ಅಪಹರಿಸಿತ್ತು. ಪಾರಾಗಿ ಬಂದ ಅವರಿಗೆ ಪೊಲೀಸ್ ಮೈಗಾವಲು ದೊರೆತಿತ್ತು. ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದ ಅವರು, ಉಗ್ರಗಾಮಿಗಳ ಮಾನವ ಹಕ್ಕಿನ ಸಮರ್ಥಕರೂ ಆಗಿದ್ದರು. ಅದೇ ಉಗ್ರಗಾಮಿಗಳು ಅವರನ್ನು ಹೊಡೆದು ಉರುಳಿಸಿದ್ದು ಕ್ರೂರ ವ್ಯಂಗ್ಯ.

‘ಕಾಶ್ಮೀರ ಕಣಿವೆಯಲ್ಲಿ ಪತ್ರಕರ್ತನ ಕೆಲಸ ಮಾಡುವವರಿಗೆ ಅಕ್ಷರಶಃ ಎಂಟೆದೆ ಇರಬೇಕು. ಸಳ್ಳನೆ ಗಾಳಿ ಸೀಳಿ ತೂರಿ ಬರುವ ಭಯೋತ್ಪಾದಕರ ಗುಂಡುಗಳು ಮತ್ತು ಠಳಾಯಿಸುವ ಸಾವಿನ ನಡುವೆ ನ್ಯಾಯಪರವಾಗಿ ವರದಿ ಮಾಡುವುದೇ ಒಂದು ಚಮತ್ಕಾರ. ಆರಾಮ ಕುರ್ಚಿ ದೇಶಭಕ್ತರಿಗೆ ಈ ಕಷ್ಟನಷ್ಟ ಅರ್ಥವಾಗದು’ ಎನ್ನುತ್ತಾರೆ ಕಾಶ್ಮೀರ ಮೂಲದ ಮತ್ತೊಬ್ಬ ಅನುಭವಿ ಪತ್ರಕರ್ತೆ ನಿಧಿ ರಾಜ್ದಾನ್.

ರಮ್ಜಾನ್ ಸದ್ಭಾವನಾ ಕ್ರಮವಾಗಿ ಭಾರತ ಸರ್ಕಾರ ಉಗ್ರಗಾಮಿಗಳ ವಿರುದ್ಧ ಕಣಿವೆಯಲ್ಲಿ ಕದನ ವಿರಾಮ ಘೋಷಿಸಿತ್ತು. ಇದೇ ಅವಧಿಯಲ್ಲಿ ಈ ಹೇಯ ಹತ್ಯೆ ಜರುಗಿದೆ. ಕದನವಿರಾಮವನ್ನು ವಿಸ್ತರಿಸಿ ಮಾತುಕತೆಯ ವಾತಾವರಣ ಮೂಡಿಸಬೇಕೆಂಬ ಕುರಿತು ಒಮ್ಮತ ರೂಪುಗೊಳ್ಳತೊಡಗಿತ್ತು. ಶುಜಾತ್ ಇದನ್ನೇ ಪ್ರತಿಪಾದಿಸಿದ್ದರು. ಕಾಶ್ಮೀರದ ಹಿಂಸಾಚಾರ- ಭಯೋತ್ಪಾದನೆಯ ಕಡಾಯಿ ನಿರಂತರ ಕೊತ ಕೊತನೆ ಕುದಿಯುತ್ತಿರಬೇಕು ಎಂದು ಬಯಸುವ ಕೇಡಿ ಶಕ್ತಿಗಳು ಪರಿಹಾರ ದ್ವೇಷಿಗಳು. ಈ ದಿಕ್ಕಿನಲ್ಲಿ ಅವರ ದುಷ್ಟ ಕಾರ್ಯಸೂಚಿಯ ಭಾಗವೇ ಶುಜಾತ್ ಹತ್ಯೆ ಎನ್ನಲಾಗಿದೆ.

ಕಣಿವೆಯಲ್ಲಿ ಕೇಂದ್ರ ಸರ್ಕಾರ ಉಗ್ರಗಾಮಿಗಳ ವಿರುದ್ಧ ಘೋಷಿಸಿದ್ದ ಇತ್ತೀಚಿನ ಕದನವಿರಾಮ ಕ್ರಮವನ್ನು ಶುಜಾತ್ ಸ್ವಾಗತಿಸಿದ್ದರು. ಭಯೋತ್ಪಾದಕ ಗುಂಪುಗಳು ಕದನ ವಿರಾಮದ ಹಗೆಗಳು. ಶಾಂತಿಯನ್ನು ಬಯಸಿದ್ದ ಪ್ರತ್ಯೇಕತಾವಾದಿ ತಲೆಯಾಳು ಅಬ್ದುಲ್ ಗನಿ ಲೋನ್ ಅವರನ್ನು ಹದಿನಾರು ವರ್ಷಗಳ ಹಿಂದೆ ಕೊಂದವರೇ ಇಂದು ಶುಜಾತ್ ಅವರ ಬಲಿ ಪಡೆದಿದ್ದಾರೆ.

ಕಾಶ್ಮೀರದ ಶಾಂತಿ ಪ್ರಕ್ರಿಯೆಯಲ್ಲಿ ಶುಜಾತ್ ಅಚಲ ವಿಶ್ವಾಸ ಇರಿಸಿದ್ದರು. ಅದನ್ನು ಬಹಿರಂಗವಾಗಿ ಹೇಳಲು ಅವರು ಎಂದೂ ಅಂಜಲಿಲ್ಲ. ಕಾಶ್ಮೀರದ ನಾಡಿ ಬಡಿತದ ಮೇಲೆ ಬೆರಳಿಟ್ಟು ಬರೆದ ಕೆಲವೇ ವಿಶ್ವಾಸಾರ್ಹ ಪತ್ರಕರ್ತರಲ್ಲಿ ಶುಜಾತ್ ಒಬ್ಬರು. ಕಾಶ್ಮೀರಿ ಪತ್ರಕರ್ತರು ಪೂರ್ವಗ್ರಹಪೀಡಿತರು ಎಂಬ ಆಪಾದನೆಯನ್ನು ಅವರು ಒಪ್ಪುತ್ತಿರಲಿಲ್ಲ.

‘ಹೆಮ್ಮೆಯಿಂದ ಎದೆ ಸೆಟೆಸಿ ಪತ್ರಕರ್ತರ ಹೊಣೆಗಾರಿಕೆಯನ್ನು ನಿಭಾಯಿಸಿದ್ದೇವೆ. ನೆಲಮಟ್ಟದ ನಿಜವನ್ನು ಹೇಳಲು ಇನ್ನು ಮುಂದೆಯೂ ಹಿಂಜರಿಯುವುದಿಲ್ಲ’ ಎಂದು ಅವರು ಹತರಾಗುವ ಮುನ್ನ ಟ್ವೀಟ್ ಮಾಡಿ ಹೊರ ಜಗತ್ತಿಗೆ ಸಾರಿದ್ದರು. ಪತ್ನಿ ತೆಹಮೀನಾ, ಮಗಳು ದುರಿಯಾ, ಮಗ ತಮಹೀದ್ ಅವರನ್ನು ಅಗಲಿದ್ದಾರೆ. ಅಣ್ಣ ಬಶ್ರತ್ ಬುಖಾರಿ ಅವರು ಮೆಹಬೂಬಾ ಮುಫ್ತಿ ಸರ್ಕಾರದಲ್ಲಿ ಕಾನೂನು, ತೋಟಗಾರಿಕೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ.

‘ತಮ್ಮ ಮೂಗಿನ ನೇರಕ್ಕೆ ಸತ್ಯ ಹೇಳುವ, ಎಲ್ಲ ಬಣಗಳ ಬೇಲಿಗಳ ಹೊರ ಜಿಗಿದು ತಮ್ಮದೇ ತೀರ್ಮಾನಗಳಿಗೆ ತಲುಪುವುದು ತಮ್ಮ ಬದ್ಧ ಕರ್ತವ್ಯ ಎಂದು ಬಲವಾಗಿ ನಂಬಿದ್ದವರು’ ಎಂದು ಅವರನ್ನು ಬಲ್ಲ ಹಿರಿಯ ಪತ್ರಕರ್ತೆ ಸೀಮಾ ಚಿಸ್ತಿ ಹೇಳುತ್ತಾರೆ. ಕಾಶ್ಮೀರದ ಪ್ರಕ್ಷುಬ್ದತೆಯ ಕಷ್ಟಕೋಟಲೆಗಳ ನಡುವೆ ನೂರಾರು ಎಳೆಯ ಪತ್ರಕರ್ತರು ಶುಜಾತ್ ನೆರಳಿನಲ್ಲಿ ಅರಳಿ ಘಮ ಘಮಿಸಿದ್ದಾರೆ.

ನಿರಂತರ ಕುತೂಹಲವೇ ಅವರ ಆಳದ ಗುಣ. ದಶದಿಕ್ಕುಗಳಿಂದ ಬರುವ ಎಲ್ಲ ಬಗೆಯ ಮಾಹಿತಿಗಳನ್ನು ಬಾಚಿಕೊಂಡು ಒಂದರೊಡನೆ ಮತ್ತೊಂದನ್ನು ಪೋಣಿಸುವ ಅವರ ಸಾಮರ್ಥ್ಯ ಅಗಾಧ.

‘ಅತ್ಯುತ್ತಮ ವರದಿಗಾರ, ಯಾವಾಗಲೂ ಹತ್ತು ಹೆಜ್ಜೆ ಮುಂದಿರುತ್ತಿದ್ದರು’ ಎಂದು ದೆಹಲಿಯಲ್ಲಿ ‘ದಿ ವೀಕ್’ನ ಸ್ಥಾನಿಕ ಸಂಪಾದಕ, ಕನ್ನಡಿಗ ಕೆ.ಎಸ್. ಸಚ್ಚಿದಾನಂದ ಮೂರ್ತಿ ನೆನೆಯುತ್ತಾರೆ.

ಶುಜಾತ್ ಅವರದು ಪತ್ರಕರ್ತರ ಕುಟುಂಬದ ಹಿನ್ನೆಲೆ. ಅವರ ತಂದೆಯೂ ಪತ್ರಕರ್ತರಾಗಿದ್ದರು. ಪತ್ರಕರ್ತನಾಗಿದ್ದ ಅಣ್ಣ ರಾಜಕಾರಣಿಯಾದರು. ಮೊನ್ನೆ ಫೆಬ್ರುವರಿಯಲ್ಲಷ್ಟೇ ಅವರಿಗೆ 50 ತುಂಬಿತ್ತು. ದೈಹಿಕವಾಗಿ ಎತ್ತರದ ಮತ್ತು ಎದ್ದು ಕಾಣುವ ತಮ್ಮ ಆಳ್ತನ ಕುರಿತು ಶುಜಾತ್‌ಗೆ ಸಂಕೋಚ ಇತ್ತೆಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಜೊತೆಗೆ ಹೆಜ್ಜೆ ಹಾಕುವವರ ಸಲುವಾಗಿ ಬೆನ್ನನ್ನು ಬೇಕೆಂದೇ ಕೊಂಚ ಗೂನು ಮಾಡಿಕೊಂಡು ಬಗ್ಗಿ ನಡೆಯುತ್ತಿದ್ದರಂತೆ. ಅವರ ಮಾನಸ್ಥಿತಿಗೂ ಕನ್ನಡಿ ಹಿಡಿಯುವ ಗುಣವಿದು. ಮುಂಜಾನೆ ಎದ್ದ ಕೂಡಲೇ ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ಗಾರ್ಡಿಯನ್’ ಓದದೆ ದಿನಚರಿ ಶುರುವಾಗುತ್ತಿರಲಿಲ್ಲ. ದೇಶೀ ಪತ್ರಿಕೆಗಳು ಕಾಶ್ಮೀರ ತಲುಪುವ ಹೊತ್ತಿಗೆ ಮಧ್ಯಾಹ್ನ ಆಗಿರುತ್ತಿತ್ತು.

ಕೇವಲ ಕೋಶ ಓದಲಿಲ್ಲ, ದೇಶ ದೇಶಗಳನ್ನೂ ಸುತ್ತಿದ್ದರು ಪತ್ರಕರ್ತ ಶುಜಾತ್. ಕಾಶ್ಮೀರ ನೆಲದ ವಾಸ್ತವವನ್ನು ವೈಶ್ವಿಕ ದೃಷ್ಟಿಯಲ್ಲಿ ಬೆರೆಸಿ ನೋಡಬಲ್ಲವರಾಗಿದ್ದರು. ಹಲವಾರು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮತ್ತು ‘ದಿ ಹಿಂದೂ’ ಪತ್ರಿಕೆಯಲ್ಲಿನ ಸುದೀರ್ಘ ಸೇವಾನುಭವ ಅವರಲ್ಲಿನ ಪತ್ರಕರ್ತನನ್ನು ಇನ್ನಷ್ಟು ಸ್ಫುಟಗೊಳಿಸಿತ್ತು.

ಸ್ವಂತ ಪತ್ರಿಕೆ ‘ದಿ ರೈಸಿಂಗ್ ಕಾಶ್ಮೀರ್’ ಕ್ಕೆ ತಮ್ಮ ಎಲ್ಲ ಪ್ರತಿಭೆಯನ್ನೂ ಧಾರೆಯೆರೆದರು. ಅವರ ವರದಿಗಾರಿಕೆ ಪೂರ್ವಗ್ರಹಗಳ ವಾಸನೆಯಿಂದ ಮುಕ್ತವಾಗಿರುತ್ತಿತ್ತು. 1990ರ ದಶಕದ ಆರಂಭದಲ್ಲಿ ಇವರ ಪ್ರತಿಭೆಯನ್ನು ಗುರುತಿಸಿ ‘ಹಿಂದೂ’ ಪತ್ರಿಕೆಗೆ ಕರೆತಂದ ಆ ಪತ್ರಿಕೆಯ ಮಾಜಿ ಸಂಪಾದಕ ಹರೀಶ್ ಖರೆ ಶುಜಾತ್ ವರದಿಗಾರಿಕೆಯ ನ್ಯಾಯತತ್ಪರತೆಯನ್ನು ತುಂಬು ಹೃದಯದಿಂದ ಕೊಂಡಾಡಿದ್ದಾರೆ.

‘ಎಲ್ಲ ಕಾಶ್ಮೀರಿಗಳೂ ಉಗ್ರಗಾಮಿಗಳು ಮತ್ತು ಕಲ್ಲು ತೂರುವವರು’ ಎಂದು ಹಣೆಪಟ್ಟಿ ಹಚ್ಚಿ ಕಾಶ್ಮೀರ ಸಂವಾದಕ್ಕೆ ದ್ವೇಷಭರಿತ ಕಾರ್ಯಸೂಚಿಯ ನಂಜು ಹಿಂಡುತ್ತಲೇ ನಡೆದಿರುವ ಕೆಲವು ಟಿ.ವಿ. ಚಾನೆಲ್‌ಗಳ ಕುರಿತು ಅವರು ತೀವ್ರ ವ್ಯಥಿತರಾಗಿದ್ದರು.

ಇಂಗ್ಲಿಷ್‌ ಜೊತೆಗೆ ಕಾಶ್ಮೀರಿ ಮತ್ತು ಉರ್ದುವಿನಲ್ಲೂ ಬರೆಯುತ್ತಿದ್ದ ಅವರು ಆದಬೀ ಮರ್ಕಾಜ್ ಕಮ್ರಾಜ್ ಎಂಬ ಕಾಶ್ಮೀರ ಕಣಿವೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾಗಿದ್ದರು.

ದೂರ ದೂರಕ್ಕೆ ಪಸರಿಸಿದ ಉತ್ತರ ಕಾಶ್ಮೀರದ ಹಚ್ಚ ಹಸಿರು ಗಿರಿಶ್ರೇಣಿಗಳ ತಪ್ಪಲಿನ ಸೇಬಿನ ತೋಟಗಳ ನಡುವೆ ಶುಜಾತ್ ಹುಟ್ಟೂರು ಕ್ರೀರಿ. ಶುಕ್ರವಾರ ಅವರನ್ನು ಅಲ್ಲಿಯ ಮಣ್ಣಿನಡಿ ‘ಮಲಗಿಸಲಾಯಿತು’.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.