ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀ–ಕಾಸ್ಟ್‌ ತಂತ್ರಜ್ಞಾನದಲ್ಲಿ ಶಾಲಾ ಕೊಠಡಿ

ಮೈಸೂರು, ನಂಜನಗೂಡು ತಾಲ್ಲೂಕಿನಲ್ಲಿ 65 ಕಟ್ಟಡಗಳ ನಿರ್ಮಾಣ
Last Updated 17 ಜೂನ್ 2018, 8:36 IST
ಅಕ್ಷರ ಗಾತ್ರ

ವರುಣಾ (ಮೈಸೂರು): ಮೈಸೂರು ತಾಲ್ಲೂಕಿನಲ್ಲಿ ನೋಡು ನೋಡುತ್ತಿದ್ದಂತೆ 40 ಶಾಲಾ ಕೊಠಡಿಗಳು ತಲೆಎತ್ತಿವೆ. ಒಂದೆರಡು ತಿಂಗಳಲ್ಲಿ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿರುವುದು ಮಕ್ಕಳು ಹಾಗೂ ಪೋಷಕರ ಅಚ್ಚರಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರವು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ‘ಮೊದಲೇ ಅಚ್ಚು ಹಾಕುವ ತಾಂತ್ರಿಕತೆ’ (ಪ್ರೀ–ಕಾಸ್ಟ್‌) ಬಳಸಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿದೆ. ಖಾಸಗಿ ಕಂಪನಿಗಳು ತಮ್ಮ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಈ ಕಟ್ಟಡಗಳನ್ನು ನಿರ್ಮಿಸುತ್ತಿವೆ. ಇದಕ್ಕಾಗಿ ಬೆಂಗಳೂರಿನ ಯುನಿವರ್ಸಲ್‌ ಬಿಲ್ಡರ್ಸ್‌ ಕಂಪನಿಗೆ ಗುತ್ತಿಗೆ ನೀಡಿವೆ. ಮೈಸೂರು ಹಾಗೂ ನಂಜನಗೂಡು ತಾಲ್ಲೂಕಿನ 65ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೊಠಡಿಗಳು ನಿರ್ಮಾಣವಾಗುತ್ತಿವೆ.

ಶಾಲಾ ಕಟ್ಟಡಕ್ಕೆ ಸಂಬಂಧಿಸಿದ ಗೋಡೆ, ಚಾವಣಿ, ಕಿಟಕಿಗಳನ್ನು ಬೆಂಗಳೂರಿನ ಕಾರ್ಖಾನೆಯೊಂದರಲ್ಲೇ ಸಿದ್ಧಪಡಿಸಲಾಗುತ್ತದೆ. ಅವುಗಳನ್ನು ತಂದು ನಿರ್ದಿಷ್ಟ ಅಳತೆಯಲ್ಲಿ ಜೋಡಿಸಲಾಗುತ್ತದೆ. ಬಳಿಕ ವಿದ್ಯುತ್‌, ಒಳಚರಂಡಿ ಹಾಗೂ ನೀರಿನ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.

ವರುಣಾದಲ್ಲಿ 3, ಹಾರೋಹಳ್ಳಿಯಲ್ಲಿ 4, ಕೆಂಪೇಗೌಡನಹುಂಡಿಯಲ್ಲಿ 2, ವಾಜಮಂಗಲದಲ್ಲಿ 3 ಕೊಠಡಿಗಳು ಸೇರಿ ಒಟ್ಟು 40 ಕೊಠಡಿಗಳನ್ನು ಈಗಾಗಲೇ ನಿರ್ಮಿಸಲಾಗಿದೆ.

ಪ್ರೀ–ಕಾಸ್ಟ್‌ ತಂತ್ರಜ್ಞಾನ ಹೊಸದೇನೂ ಅಲ್ಲ. ಬೆಂಗಳೂರು ಹಾಗೂ ಮೈಸೂರಿನಲ್ಲಿ ತೆರೆದಿರುವ ಇಂದಿರಾ ಕ್ಯಾಂಟೀನ್‌ ಕಟ್ಟಡದ ಭಾಗಗಳನ್ನು ಈ ತಂತ್ರಜ್ಞಾನದಿಂದಲೇ ನಿರ್ಮಿಸಲಾಗಿದೆ. ಕೇವಲ ಒಂದು ತಿಂಗಳ ಕಡಿಮೆ ಸಮಯದಲ್ಲಿ ಕೊಠಡಿಗಳನ್ನು ನಿರ್ಮಿಸುತ್ತಿರುವುದು ವಿಶೇಷ. ಹಳೆಯ ಪದ್ಧತಿಯಲ್ಲಿ ನಿರ್ಮಿಸುತ್ತಿದ್ದ ಕೊಠಡಿ 40 ಟನ್ ತೂಕ ಹೊಂದಿದ್ದರೆ, ಈ ಕೊಠಡಿ 35 ಟನ್‌ ಇರುತ್ತದೆ ಎಂದು ಯುನಿವರ್ಸಲ್‌ ಬಿಲ್ಡರ್ಸ್‌ ಕಂಪನಿಯ ಎಂಜಿನಿಯರ್‌ ಹರೀಶ್ ತಿಳಿಸಿದರು.

‘ಈ ತಂತ್ರಜ್ಞಾನ ಬಳಸಿ ಅಪಾರ್ಟ್‌ಮೆಂಟ್‌ಗಳನ್ನೂ ನಿರ್ಮಿಸಲಾಗಿದೆ. ಈ ಕಟ್ಟಡಗಳ ಚಾವಣಿಯಲ್ಲಿ ಸೋರಿಕೆ ಕಡಿಮೆ ಇರುತ್ತದೆ’ ಎಂದು ರಾಬರ್ಟ್‌ ಬಾಷ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್ ಹೇಳುತ್ತಾರೆ.

ಕೊಠಡಿಗೆ ₹10 ಲಕ್ಷ ವೆಚ್ಚ

ಮೊದಲೇ ಸಿದ್ಧಪಡಿಸಿದ ಕೊಠಡಿಗೆ ₹8ರಿಂದ 10ಲಕ್ಷ ವೆಚ್ಚವಾಗುತ್ತದೆ. ಸಮಯವೂ ಉಳಿತಾಯವಾಗುತ್ತದೆ. 35ರಿಂದ 50 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಆದರೆ, ಸ್ಥಳೀಯ ಗುತ್ತಿಗೆದಾರರ ಮೂಲಕ ಕಟ್ಟಡ ನಿರ್ಮಿಸಲು ₹12ರಿಂದ 15 ಲಕ್ಷದವರಗೆ ಖರ್ಚು ಮಾಡಬೇಕಾಗುತ್ತದೆ. ಜತೆಗೆ, ಕಾಮಗಾರಿಗೆ ದೀರ್ಘ ಸಮಯ ಹಿಡಿಯುತ್ತದೆ ಎಂದು ಎಂಜಿನಿಯರ್‌ ಹರೀಶ್‌ ಹೇಳುತ್ತಾರೆ.

ಪ್ರಿ–ಕಾಸ್ಟ್‌ ತಂತ್ರಜ್ಞಾನದಿಂದ ಕಟ್ಟಡ ನಿರ್ಮಾಣ ಮಾಡುವುದರಿಂದ ತ್ವರಿತವಾಗಿ ಕಾಮಗಾರಿ ಪೂರ್ಣಗೊಳ್ಳುತ್ತದೆ. ಸಿಎಸ್‌ಆರ್‌ ಅಡಿ ನಿರ್ಮಿಸುವುದರಿಂದ ಗುಣಮಟ್ಟದ ವಿಷಯದಲ್ಲಿ ರಾಜಿ ಇಲ್ಲ.
ಕೃಷ್ಣಮೂರ್ತಿ, ಬಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT