ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ರೈತರ ಆಕ್ರೋಶ

ಕುಂದಾಪುರದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಸಭೆ
Last Updated 17 ಜೂನ್ 2018, 9:06 IST
ಅಕ್ಷರ ಗಾತ್ರ

ಕುಂದಾಪುರ: ಕಟ್ಟಡದ ನಿರ್ಮಾಣಕ್ಕೆ ಒಂದು ಲೋಡ್‌ ಮರಳು ಪಡೆಯಲು ವಿಧಾನಪರಿಷತ್‌ ಸದಸ್ಯನಾಗಿ ನಾನೇ ಪರದಾಡುವಂತಹ ಸ್ಥಿತಿ ಇದೆ. ಇನ್ನು ಜಿಲ್ಲೆಯ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

ಕುಂದಾಪುರ ಆರ್‌ಎನ್‌ ಶೆಟ್ಟಿ ಸಭಾ ಭವನದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮರಳು ತೆಗೆಯಬಾರದು ಎಂಬ ನಿರ್ಬಂಧ ವಿಧಿಸುವ ಅಧಿಕಾರಿಗಳು ಜಿಲ್ಲೆಯ ಜನರಿಗೆ ಅಗತ್ಯ ಮರಳು ಒದಗಿಸಬೇಕು. ಜನ ಸಾಮಾನ್ಯರ ಪರ ರೈತ ಸಂಘದ ಧ್ವನಿ ಎತ್ತಲಿದೆ.  ಕಪ್ಪು ಹಣದಿಂದ ಮನೆ ಹಾಗೂ ಕಟ್ಟಡ ನಿರ್ಮಾಣ ಮಾಡುವವರಿಗೆ ಇದರ ಸಮಸ್ಯೆ ಇಲ್ಲ. ಸರ್ಕಾರದ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವ ಜನರಿಗೆ ಸಮಸ್ಯೆ ಇದೆ ಎಂದು ಅವರು ಆಕ್ರೋಶ ಹೊರಹಾಕಿದರು.

ಜಿಲ್ಲೆಯ ಮರಳು ಸಮಸ್ಯೆಗೆ ಕಡಿವಾಣ ಬಿಳಬೇಕು.ಶಾಶ್ವತ ಪರಿಹಾರ ಅಗತ್ಯ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಬ್ಬಗೆಯ ನೀತಿಯಿಂದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಮನೆ ಎದುರು ಮರಳು ಸಿಗುತ್ತಿದೆ. ಆದರೆ, ವಿದೇಶದಿಂದ ಬಂದ ಮರಳು ಚೀಲ ಹೆಚ್ಚು ದುಡ್ಡು ಕೊಟ್ಟು ಖರೀದಿ ಮಾಡಬೇಕಾದ ಸ್ಥಿತಿ ಇದೆ ಎಂದು ಹೇಳಿದರು.

ವಿದ್ಯುತ್‌ ಕಣ್ಣು ಮುಚ್ಚಾಲೆ ಜಿಲ್ಲೆಯಲ್ಲಿ ವ್ಯಾಪಕವಾಗಿದೆ. ಗ್ರಾಮೀಣಕ್ಕೆ ಸಂಚಾರ ಮಾಡುವ ಬಸ್ಸುಗಳ ಸೇವೆಯನ್ನು ಆರಂಭ ಮಾಡಬೇಕು. ರೈತರಿಗೆ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ಮಾಹಿತಿ ಗ್ರಾಮೀಣ ಭಾಗಕ್ಕೆ ತಲುಪಲು ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಆಕ್ರಮ–ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಕುಮ್ಕಿ ಭೂಮಿ ಇತ್ಯರ್ಥಕ್ಕೆ ಇರುವ ಕಾನೂನು ತೊಡಕು ನಿವಾರಣೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಹೇಳಿದರು.

ಪ್ರಾಕೃತಿಕ ವಿಕೋಪದ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ. ಉಡುಪಿಗೆ ಕುಡಿಯುವ ನೀರಿಗಾಗಿ ವಾರಾಹಿ ನದಿಯಿಂದ ನೀರು ಕೊಂಡೊಯ್ಯುವುದು. ರೈತರ ಸಾಲ ಮನ್ನಾ. ಕೃಷಿ ಇಲಾಖೆ ಸವಲತ್ತುಗಳ ಸಮಗ್ರ ಬಳಕೆ. ಮಕ್ಕಳ ಬಸ್‌ ಪಾಸ್‌ ರದ್ದತೆ ಸೇರಿದಂತೆ ಹಲವು ವಿಚಾರಗಳು ಸಭೆಯಲ್ಲಿ ಪ್ರಾಸ್ತಾಪಗೊಂಡವು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್‌.ಪ್ರಕಾಶ್ಚಂದ್ರ ಶೆಟ್ಟಿ, ಹದ್ದೂರು ರಾಜೀವ್‌ ಶೆಟ್ಟಿ,  ದೇವಾನಂದ ಶೆಟ್ಟಿ ಬಸ್ರೂರು,  ವಿಕಾಸ ಹೆಗ್ಡೆ ಕೊಳ್ಕೆರೆ, ತಾಲ್ಲೂಕು ಟಿಎಪಿಸಿಎಂಎಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಬಿದ್ಕಲ್‌ಕಟ್ಟೆ, ವಕೀಲ ಕೃಷ್ಣರಾಜ ಶೆಟ್ಟಿ,  ಸತೀಶ್‌ ಕಿಣಿ ಬೆಳ್ವೆ, ಸಂತೋಷ್‌ ಶೆಟ್ಟಿ ಬಲಾಡಿ, ಕೃಷ್ಣದೇವ ಕಾರಂತ್‌ ಕೋಣಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ದಿನೇಶ್‌ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಸೀತಾರಾಮ ಗಾಣಿಗ, ಉದಯ್‌ಕುಮಾರ ಶೆಟ್ಟಿ ವಂಡ್ಸೆ, ರಾಜೂ ಶೆಟ್ಟಿ ಶಾಡಿಗುಂಡಿ, ಕಿಶೋರ ಶೆಟ್ಟಿ ಮೈರಕೊಮೆ, ಚೇತನ್‌ ರೈ ದಾಸರಬೆಟ್ಟು, ಚೋರಾಡಿ ಅಶೋಕಕುಮಾರ ಶೆಟ್ಟಿ, ಮನೋಹರ ಶೆಟ್ಟಿ ಅಂಪಾರು, ಶೇಖರ ಶೆಟ್ಟಿ ಯಡ್ತಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT