ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೂನ್‌ ಸ್ಫೋಟ ಪ್ರಕರಣ: ಮಕ್ಕಳ ಸ್ಥಿತಿ ಗಂಭೀರ

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮ
Last Updated 17 ಜೂನ್ 2018, 10:07 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮಾರ್ಚ್‌ 23ರಂದು ಪಟ್ಟಣಕ್ಕೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್‌ ಪಕ್ಷದಿಂದ ಗಾಳಿಯಲ್ಲಿ ಹಾರಿ ಬಿಡಲು ತಂದಿದ್ದ ಹೀಲಿಯಂ ಬಲೂನು ಸ್ಫೋಟಗೊಂಡು ಗಾಯಗೊಂಡಿದ್ದ ಐವರು ಮಕ್ಕಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಇಲ್ಲಿನ ಕಾವೇರಿಪುರ (ಹಳೇ ಸಂತೆ ಮೈದಾನ) ಬಡಾವಣೆಯ ಕುಮಾರ್‌ ಅವರ ಮಗ ಮಾದೇಶ (10) ಹಾಗೂ ಪ್ರಭು ಅವರ ಮಗ ರಾಹುಲ್‌ ಅವರ ದೇಹ ಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ. ಮಾದೇಶನಿಗೆ ಮಲಗಿದ ಸ್ಥಳದಿಂದ ಮಿಸುಕಾಡಲೂ ಆಗದ ಸ್ಥಿತಿ ಬಂದಿದೆ. ಮೈ ತುಂಬಾ ವ್ರಣ ಬಂದಿದ್ದು ನೋವು ತಾಳಲಾರದೇ ನರಳುತ್ತಿದ್ದಾನೆ. ಅನ್ನ, ನೀರು ಪೋಷಕರೇ ಕೊಡಬೇಕು. ಶೌಚಕಾರ್ಯ ಕೂಡ ಮಲಗಿದಲ್ಲೇ ಆಗುತ್ತಿದೆ. ‘ಅಮ್ಮಾ..’ ಎಂದು ಕೂಗಲು ಸಹ ಆಗದಷ್ಟು ಮಾದೇಶ ನಿತ್ರಾಣಗೊಂಡಿದ್ದಾನೆ. ದೇಹ ಕೆಂಪು ಬಣ್ಣಕ್ಕೆ ತಿರುಗಿದ್ದು, ಪರಿಚಿತರೇ ಗುರುತು ಹಿಡಿಯಲಾರದಷ್ಟು ರೂಪು ಬದಲಾಗಿದೆ.

ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಕುಮಾರ್‌ ಅವರ ಮಗ ರಾಹುಲ್‌ ಸ್ಥಿತಿ ಕೂಡ ಸುಧಾರಿಸಿಲ್ಲ. ಹೀಲಿಯಂ ರಾಸಾಯನಿಕ ತುಂಬಿದ್ದ ಬಲೂನು ಸಿಡಿದ ಸಂದರ್ಭದಲ್ಲಿ ಹೊರ ಹೊಮ್ಮಿದ ಬೆಂಕಿಯ ಜ್ವಾಲೆಗೆ ರಾಹುಲ್‌ನ ಮುಖ, ಕೈ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ದೇಹ ಅಲ್ಲಲ್ಲಿ ಬಾತುಕೊಂಡಂತಾಗಿದೆ. ಮನೆಯಿಂದ ಹೊರ ಬರಲು ಆಗದೇ ನಾಲ್ಕು ಗೋಡೆಗಳ ನಡುವೆಯೇ ಆತ ಉಸಿರಾಡುತ್ತಿದ್ದಾನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತನಾದ ರಾಹುಲ್‌ನ ಶಿಕ್ಷಣ ಕೂಡ ನಿಂತು ಹೋಗಿದೆ.

‘ಕಾಂಗ್ರೆಸ್‌ನೋರು ಕಟ್ಟಿದ್ದ ಪೀಪಿ ಒಡೆದು ಆಟ ಆಡ್ತಾ ಇದ್ದ ನನ್ನ ಮೊಮ್ಮಗ ಮಾದೇಶನ ಮೇಲೆ ಬಿದ್ದು ಈ ಗತಿ ಬಂದೈತಿ ನೋಡಿ. ಮೈ ಎಲ್ಲಾ ಉರಿ ಅಂತಾನೆ. ಕೈ, ಕಾಲು ಬೊಬ್ಬೆ ಬಂದು ಬೆಂದೋಗವೆ, ಉಸಿರಾಡೋಕೂ ಕಷ್ಟ ಪಡ್ತಾನೆ. ಕೂಲಿಯನ್ನೇ ನೆಚ್ಚಿ ಬದುಕ್ತಾ ಇದ್ದೀವಿ. ಖರ್ಚು ಭರಿಸಕ್ಕೆ ಆಗ್ತಾ ಆಗಿಲ್ಲ’ ಎಂದು ಮಾದೇಶನ ಅಜ್ಜಿ ಜಯಮ್ಮ ಕಣ್ಣೀರು ಹಾಕುತ್ತಾರೆ.

ಮರಗೆಲಸ ಮಾಡುವ ರಾಹುಲ್‌ನ ತಂದೆ ಪ್ರಭು ಅವರ ಸಂಕಷ್ಟ ಕೂಡ ಇಮ್ಮಡಿಸಿದೆ. ‘ಮೂರು ತಿಂಗಳುಗಳಿಂದ ಮಗನನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆಯಿಂದ ಕೆಲಸ ಬಿಟ್ಟಿದ್ದೇನೆ. ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಒಂದು ವಾರದ ಚಿಕಿತ್ಸೆ ಖರ್ಚಿಗೆ ಕನಿಷ್ಠ ₹ 10 ಸಾವಿರ ಬೇಕು. ಸಾಲ ಮಾಡಿಕೊಂಡಿದ್ದು ಸಂಕಷ್ಟಕ್ಕೆ ಸಿಲುಕಿದ್ದೇನೆ’ ಎಂದು ಪ್ರಭು ತಮ್ಮ ಸಂಕಷ್ಟ ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT