₹56 ಸಾವಿರ ಕೋಟಿ ಹೊಂದಿಸುವ ಸವಾಲು

7
ಕೃಷ್ಣಾ ಕೊಳ್ಳದ ಜನರ ಕೂಗಿಗೆ ಸ್ಪಂದಿಸುವುದೇ ಜೆಡಿಎಸ್‌– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ; ಸಿಬ್ಬಂದಿ ಕೊರತೆ ಸಮಸ್ಯೆ

₹56 ಸಾವಿರ ಕೋಟಿ ಹೊಂದಿಸುವ ಸವಾಲು

Published:
Updated:
₹56 ಸಾವಿರ ಕೋಟಿ ಹೊಂದಿಸುವ ಸವಾಲು

ಬಾಗಲಕೋಟೆ: ರಾಜ್ಯದಲ್ಲಿ ಪ್ರತಿ ಬಾರಿ ಹೊಸ ಸರ್ಕಾರ ಬಂದಾಗಲೂ ಕೃಷ್ಣಾ ಕೊಳ್ಳದ ಜನರ ನಿರೀಕ್ಷೆ ಗರಿಗೆದರುತ್ತದೆ. ಈಗ, ಜೆಡಿಎಸ್‌– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಅದು ಮುಂದುವರಿದಿದೆ.‌

ಅಡಿಗಲ್ಲು ಹಾಕಿ ಅರ್ಧ ಶತಮಾನ ಕಳೆದರೂ ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ತಾರ್ಕಿಕ ಅಂತ್ಯಕಂಡಿಲ್ಲ. ಹಾಗಾಗಿ, ಬಚಾವತ್‌ ಆಯೋಗದ ತೀರ್ಪಿನ ಅನ್ವಯ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆ ಇನ್ನೂ ಸಾಧ್ಯವಾಗಿಲ್ಲ. ಈ ಹಿಂದೆ, ಎಚ್‌.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಹಂತದ ಯೋಜನೆಯ ಅನುಷ್ಠಾನ ಕಾಮಗಾರಿ ಚುರುಕು ಪಡೆದಿತ್ತು. ಈಗ ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾರೆ. ಈ ಅವಧಿಯಲ್ಲಾದರೂ ಯೋಜನೆ ಪೂರ್ಣಗೊಂಡು, ರಾಜ್ಯದ ಪಾಲಿನ ನೀರು ಬಳಕೆಯಾಗಲಿದೆಯೇ ಎಂಬುದು ಸ್ಥಳೀಯರ ಪ್ರಶ್ನೆ.

ಮೂರು ಹಂತಗಳಲ್ಲಿ ಅನುಷ್ಠಾನ: ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಬರಪೀಡಿತ ಪ್ರದೇಶದ 15.36 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವ ಉದ್ದೇಶದ ಕೃಷ್ಣಾ ಮೇಲ್ದಂಡೆ ಯೋಜನೆಗೆ, 1964ರ ಮೇ 22ರಂದು ಅಂದಿನ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅಡಿಗಲ್ಲು ಹಾಕಿದ್ದರು. ಯೋಜನೆಯ ಅನುಷ್ಠಾನಕ್ಕಾಗಿ, ಆಲಮಟ್ಟಿಯಲ್ಲಿ ಕೃಷ್ಣಾ ಭಾಗ್ಯ ಜಲನಿಗಮ (ಕೆಬಿಜೆಎನ್‌ಎಲ್‌) ನೆಲೆಗೊಂಡಿದೆ.

ಅದರಡಿ ಮೊದಲ ಹಂತದಲ್ಲಿ ಆಲಮಟ್ಟಿ, ನಾರಾಯಣಪುರ ಜಲಾ ಶಯಗಳನ್ನು ನಿರ್ಮಿಸುವ ಮೂಲಕ 119 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಲಾಗಿದೆ.

ಎರಡು ಹಾಗೂ ಮೂರನೇ ಹಂತದಲ್ಲಿ ಉಳಿದ 54 ಟಿಎಂಸಿ ಅಡಿ ನೀರು ಬಳಕೆಗೆ ಯೋಜಿಸಲಾಗಿದೆ. ಎರಡನೇ ಹಂತದಲ್ಲಿ ಆಲಮಟ್ಟಿ, ನಾರಾಯಣಪುರ ಬಲದಂಡೆ ಕಾಲುವೆ, ರಾಂಪುರ, ಇಂಡಿ, ಮುಳವಾಡ ಏತ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ ವಿಸ್ತರಣೆ ಕಾರ್ಯವೂ ಪೂರ್ಣ ಗೊಂಡಿದೆ. ಜೊತೆಗೆ ಜಮಖಂಡಿ ತಾಲ್ಲೂಕು ಹಿಪ್ಪರಗಿಯಲ್ಲಿ ಬ್ಯಾರೇಜ್ ನಿರ್ಮಿಸಿ 4.9 ಟಿಎಂಸಿ ಅಡಿ ನೀರು ಹಿಡಿದಿಟ್ಟು, ಐನಾಪುರ ಹಾಗೂ ಹಳಿಯಾಳ ಎಡದಂಡೆ ಕಾಲುವೆ ಮೂಲಕ ಜಮೀನಿಗೆ ಹರಿಸಲಾಗುತ್ತಿದೆ.

ಈಗ ಮೂರನೇ ಹಂತದ ಕಾಮಗಾರಿ ಅನುಷ್ಠಾನ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ, ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ, ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಈಗಿರುವ 519.6 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸುವುದು. ಜೊತೆಗೆ ಮುಳವಾಡ, ಚಿಮ್ಮಲಗಿ, ಎನ್‌ಆರ್‌ಬಿಸಿ, ಇಂಡಿ ವಿಸ್ತರಣೆ ಯೋಜನೆ, ಭೀಮಾ ಪ್ಲ್ಯಾಂಕ್, ರಾಂಪುರ, ಮಲ್ಲಾಬಾದ, ಕೊಪ್ಪಳ, ಹೆರಕಲ್ ಏತ ನೀರಾವರಿ ಯೋಜನೆಗಳ ಅನುಷ್ಠಾನವೂ ಸೇರಿದೆ.

ಈ ಹಂತದಲ್ಲಿ ನೀರಾವರಿ ಯೋಜನೆಗಳ ಕಾಮಗಾರಿ ಜೊತೆಗೆ ಭೂಸ್ವಾಧೀನ, ಜಮೀನಿಗೆ ಸೂಕ್ತ ಪರಿಹಾರ ನಿಗದಿ, ಪುನರ್ವಸತಿ ಕೇಂದ್ರಗಳ ನಿರ್ಮಾಣ, ಸಂತ್ರಸ್ತರ ಸ್ಥಳಾಂತರ ಆಗಬೇಕಿದೆ. ಜೊತೆಗೆ ಅನುಷ್ಠಾನ ಹಂತದಲ್ಲಿ ಆಗುವ ವಿಳಂಬದಿಂದ ಏರಿಕೆಯಾಗುವ ಯೋಜನಾ ವೆಚ್ಚವೂ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಸ್ವಾಧೀನಕ್ಕೆ ಅಧಿಸೂಚನೆ: ಆಲಮಟ್ಟಿ ಅಣೆಕಟ್ಟೆಯ ಎತ್ತರ 524.256 ಮೀಟರ್‌ಗೆ ಹೆಚ್ಚಳಗೊಂಡಲ್ಲಿ, 188 ಗ್ರಾಮಗಳ ವ್ಯಾಪ್ತಿಯ 75,563 ಎಕರೆ ಜಮೀನು ಹಾಗೂ 24,163 ಕಟ್ಟಡಗಳು ಕೃಷ್ಣೆಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿವೆ.

ಈಗಾಗಲೇ 127 ಗ್ರಾಮಗಳ ವ್ಯಾಪ್ತಿಯ 45,452 ಎಕರೆ 28 ಗುಂಟೆ ಭೂಮಿಯ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಜೊತೆಗೆ ಮುಳುಗಡೆಯಾಗಲಿರುವ 20 ಗ್ರಾಮಗಳಿಗೆ ಪುನರ್ವಸತಿ ಕೇಂದ್ರ ನಿರ್ಮಿಸಲು 7,123 ಎಕರೆ

ಜಮೀನು ಸ್ವಾಧಿನಪಡಿಸಿಕೊಳ್ಳಲಾಗು ತ್ತಿದೆ (ಬಾಗಲಕೋಟೆ ನಗರದಲ್ಲಿ 1,640 ಎಕರೆ). ಈಗಾಗಲೇ 4,908 ಎಕರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 2,054 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಉಳಿದ 9 ಯೋಜನೆಗಳಿಗೆ 51,837 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಅದರಲ್ಲಿ 22,760 ಎಕರೆ ಸ್ವಾಧೀನಕ್ಕೆ ಈಗಾಗಲೇ ಸರ್ಕಾರದಿಂದ ಅನುಮತಿ ದೊರೆತಿದೆ. ಕಳೆದ ನಾಲ್ಕು ವರ್ಷಗಳಲ್ಲಿ 21,746 ಎಕರೆ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 11,463 ಎಕರೆಗೆ ಬೆಲೆ ನಿಗದಿಪಡಿಸಿ ಐತೀರ್ಪು ಹೊರಡಿಸಲಾಗಿದೆ. ಆದರೆ ಈಗ ನಿಗದಿಪಡಿಸಿದ ಪರಿಹಾರದ ಮೊತ್ತಕ್ಕೂ ಸಂತ್ರಸ್ತರು ಒಪ್ಪಿಲ್ಲ.

ಸಿಬ್ಬಂದಿ ಕೊರತೆ: ಯೋಜನೆಯ ಅನುಷ್ಠಾನ ಆಮೆಗತಿಯಲ್ಲಿ ಸಾಗಲು ಸಂಪನ್ಮೂಲ ಕೊರತೆಯ ಜೊತೆಗೆ ಪುನರ್‌ವಸತಿ ಹಾಗೂ ಪುನರ್‌ನಿರ್ಮಾಣ ವಿಭಾಗದಲ್ಲಿ ಸಿಬ್ಬಂದಿ ಕೊರತೆಯೂ ಪ್ರಮುಖ ಕಾರಣವಾಗಿದೆ. ಭೂಸ್ವಾಧೀನ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ, ಅಧಿಕಾರಿ ವರ್ಗ ಸೇರಿದಂತೆ ಬಹಳಷ್ಟು ಹುದ್ದೆಗಳು ಖಾಲಿ ಇವೆ. ಇಲ್ಲವೇ ಬೇರೆ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಇಲ್ಲಿಗೆ ಅಧಿಕಾರಿಗಳು ಬಂದರೂ ಬಹಳಷ್ಟು ದಿನ ಉಳಿಯುವುದಿಲ್ಲ. ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.

‘ಬೇರೆ ಸರ್ಕಾರಿ ಕಚೇರಿಗಳಲ್ಲಿ ಶೇ 30ರಿಂದ 35ರಷ್ಟು ಸಿಬ್ಬಂದಿ ಕೊರತೆ ಇದ್ದರೆ, ಇಲ್ಲಿ ಆ ಪ್ರಮಾಣ ಶೇ 65ರಿಂದ 70ರಷ್ಟು ಇದೆ’ ಎನ್ನುತ್ತಾರೆ, ಈ ಹಿಂದೆ ಯೋಜನೆಯ ಪುನರ್ವಸತಿ ವಿಭಾಗದ ಆಯುಕ್ತರಾಗಿದ್ದ ಶಿವಯೋಗಿ ಕಳಸದ.

ಹಣಕಾಸು ಹೊಂದಾಣಿಕೆ ಸವಾಲು..

‘ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಹೊಸ ಸರ್ಕಾರದ ಮುಂದೆ ಈಗ ₹56 ಸಾವಿರ ಕೋಟಿ ಹೊಂದಿಸುವ ದೊಡ್ಡ ಸವಾಲು ಎದುರಾಗಿದೆ. 2011ರಲ್ಲಿ ಮೂರನೇ ಹಂತದ ಯೋಜನೆಗೆ ಚಾಲನೆ ನೀಡಿದಾಗ ಅನುಷ್ಠಾನ ವೆಚ್ಚ ₹17 ಸಾವಿರ ಕೋಟಿ ನಿಗದಿಯಾಗಿತ್ತು. ಈಗ ಅದು ಅರ್ಧ ಲಕ್ಷ ಕೋಟಿ ಗಡಿ ದಾಟಿದೆ. ಕೇಂದ್ರ ಸರ್ಕಾರ 2013ರಲ್ಲಿ ಜಾರಿಗೊಳಿಸಿದ ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ, ಜಮೀನಿನ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಮೊತ್ತದ ಪರಿಹಾರವನ್ನು ಸಂತ್ರಸ್ತರಿಗೆ ನೀಡಬೇಕಿದೆ. ಇದು ಯೋಜನೆ ವೆಚ್ಚ ಅಗಾಧವಾಗಿ ಏರಿಕೆಯಾಗಲು ಪ್ರಮುಖ ಕಾರಣ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ, ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಹಾಗೂ ಪುನರ್‌ನಿರ್ಮಾಣ ವಿಭಾಗದ ಅಧಿಕಾರಿಯೊಬ್ಬರು.

ಯೋಜನೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿ ಪ್ರತಿ ವರ್ಷ ಅದಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಬಹುದು. ಇಲ್ಲದಿದ್ದರೆ ವಿಶ್ವಬ್ಯಾಂಕ್‌, ನಬಾರ್ಡ್ ಸೇರಿದಂತೆ ಬೇರೆ ಬೇರೆ ಸಾಂಸ್ಥಿಕ ಸಂಸ್ಥೆಗಳ ಮೂಲಕ ಸಾಲ ಪಡೆಯಬಹುದು. ಈ ಹಿಂದೆ ಮೊದಲ ಹಂತದ ಯೋಜನೆ ಅನುಷ್ಠಾನದ ವೇಳೆ ವಿಶ್ವಬ್ಯಾಂಕ್‌ ನೆರವು ಪಡೆಯಲಾಗಿತ್ತು ಎಂಬುದನ್ನು ಅವರು ಸ್ಮರಿಸುತ್ತಾರೆ.

ಜೊತೆಗೆ, ದೀರ್ಘಾವಧಿಯ ನೀರಾವರಿ ಬಾಂಡ್‌ಗಳ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಿಯೂ ಯೋಜನೆ ಪೂರ್ಣಗೊಳಿಸಲು ಸಂಪನ್ಮೂಲ ಕ್ರೋಡೀಕರಿಸಬಹುದು ಎನ್ನುತ್ತಾರೆ ಅವರು.

ಹಣ ಬಿಡುಗಡೆಯಾಗಿಲ್ಲ:

ಹಿಂದಿನ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲೇ ₹5 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಸದ್ಯ ಅದಕ್ಕೆ ಹಣ ಹೊಂದಿಸುವ ತಕ್ಷಣದ ಸವಾಲು ಹೊಸ ಸರ್ಕಾರದ ಮುಂದಿದೆ. ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ, ಅಂತಿಮ ತೀರ್ಪು ನೀಡಿ ಬೆಲೆ ನಿಗದಿಗೊಳಿಸಿದ 60 ದಿನಗಳಲ್ಲಿಯೇ ಸಂತ್ರಸ್ತರಿಗೆ ಹಣ ಪಾವತಿಸಬೇಕಿದೆ. ಹಾಗಾಗಿ ಐತೀರ್ಪು ಇರಲಿ, ಪ್ರಾಥಮಿಕ ಅಧಿಸೂಚನೆ ಹೊರಡಿಸಲೂ ಹಿಂಜರಿಯುತ್ತಿರುವುದಾಗಿ ಅವರು ಹೇಳುತ್ತಾರೆ.

ಹೊಸ ಭೂಸ್ವಾಧೀನ ಕಾಯ್ದೆಯಡಿ ಆಯಾ ಪ್ರದೇಶದಲ್ಲಿ ಜಮೀನಿನ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ಪರಿಹಾರ ನಿಗದಿ ಮಾಡಲಾಗುತ್ತಿದೆ. ಅದಕ್ಕೂ ಸಂತ್ರಸ್ತರು ಒಪ್ಪಿಗೆ ನೀಡಿಲ್ಲ. ಜಮೀನಿನ ಮಾರುಕಟ್ಟೆ ದರಕ್ಕೂ ಆಯಾ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ವಾಸ್ತವಿಕ ಬೆಲೆಗೂ ಅಜಗಜಾಂತರ ಇದೆ. ಹಾಗಾಗಿ ವಾಸ್ತವಿಕ ಬೆಲೆ ಆಧರಿಸಿ ಏಕರೂಪದ ಬೆಲೆ ನಿಗದಿ ಮಾಡಬೇಕು ಎಂಬುದು ಸಂತ್ರಸ್ತರ ಆಗ್ರಹ.

ವಾಸ್ತವಿಕ ಬೆಲೆ ಎಂಬುದೇ ಅವೈಜ್ಞಾನಿಕ. ಅದನ್ನು ಆಧರಿಸಿ ಬೆಲೆ ನಿಗದಿ ಮಾಡಿದಲ್ಲಿ ಯೋಜನೆಗೆ ಸಂಪನ್ಮೂಲ ಕ್ರೋಡೀಕರಿಸುವುದೇ ಅಸಾಧ್ಯ ಎಂಬುದು ಅಧಿಕಾರಿ ವರ್ಗದ ಅಭಿಮತ.

ಹಿಂದೆ ಕೊಟ್ಟಿದೆ: ಯೋಜನೆಯ ಮೊದಲನೇ ಹಂತದ ಅನುಷ್ಠಾನ ವೇಳೆ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರ ಆಯಾ ಜಿಲ್ಲಾ ಮಟ್ಟದಲ್ಲಿ ಬೆಲೆ ನಿಗದಿ ಸಮಿತಿ ರಚಿಸಿ ಸಂತ್ರಸ್ತರಿಗೆ ಪರಿಹಾರ ನೀಡಿದೆ. ಅದೇ ಮಾದರಿಯಲ್ಲಿ ಈಗಲೂ ಸಮಿತಿ ರಚಿಸಿ ಬೆಲೆ ನಿಗದಿ ಮಾಡಲಿ ಎಂದು ಸಂತ್ರಸ್ತರು ಒತ್ತಾಯಿಸುತ್ತಾರೆ.

ಈ ಬೇಡಿಕೆಗೆ ಸ್ಪಂದಿಸಿದ್ದ ಹಿಂದಿನ ಸರ್ಕಾರ, ಆ ಬಗ್ಗೆ ಸಂತ್ರಸ್ತರ ಅಳಲು ಆಲಿಸಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿತ್ತು. ಈ ಸಮಿತಿಯು, ಸಂತ್ರಸ್ತರ ಅಳಲು ಕೇಳುವ ಜೊತೆಗೆ ಬಾಧಿತ ಪ್ರದೇಶದ ಜನಪ್ರತಿನಿಧಿಗಳು, ಅಧಿಕಾರಿಗ ಳೊಂದಿಗೂ ಸಮಾಲೋಚನಾ ಸಭೆ ನಡೆಸಿತ್ತು.

ಈಗಾಗಲೇ ಕೂಡಲಸಂಗಮ, ಕೊಪ್ಪಳ, ಬೆಂಗಳೂರಿನಲ್ಲಿ ಐದಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸ ಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ನಂತರ ಸಮಿತಿಯ ಚಟುವಟಿಕೆಯೂ ಸ್ಥಗಿತಗೊಂಡಿತ್ತು. ಎಚ್‌.ಕೆ.ಪಾಟೀಲ, ಬಸವರಾಜ ರಾಯರಡ್ಡಿ, ಶರಣಪ್ರಕಾಶ ಪಾಟೀಲ ಈ ಸಮಿತಿಯಲ್ಲಿ ಇದ್ದರು.

ಹೊಸ ಸರ್ಕಾರದಲ್ಲಿ ಕಂದಾಯ ಇಲಾಖೆ ಜವಾಬ್ದಾರಿಯನ್ನು ಆರ್‌.ವಿ.ದೇಶಪಾಂಡೆ ಹೊತ್ತಿದ್ದು, ಅವರೂ ಸೇರಿದಂತೆ ಸಮಿತಿಯೊಳಗಿರುವ ಎಲ್ಲರೂ ಹೊಸಬರೇ ಇದ್ದಾರೆ. ಈಗ ಹೊಸ ಸರ್ಕಾರದಲ್ಲಿ ಆ ಕಾರ್ಯಕ್ಕೆ ಮರುಚಾಲನೆ ಸಿಗಬೇಕಿದೆ.

ಏಕರೂಪದ ಬೆಲೆ ನಿಗದಿ ಅಗತ್ಯವನ್ನು ಹಿಂದಿನ ಸಂಪುಟ ಉಪ ಸಮಿತಿಗೆ ಮನವರಿಕೆ ಮಾಡಿದ್ದೆವು. ಈಗ ಬಂದಿರುವ ಹೊಸ ಬರಿಗೂ ಮನದಟ್ಟು ಮಾಡುತ್ತೇವೆ

- ಅಜಯಕುಮಾರ ಸರನಾಯಕ, ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry