ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಶ್ರದ್ಧಾಭಕ್ತಿಯಿಂದ ರಂಜಾನ್ ಹಬ್ಬದಾಚರಣೆ

ಈದ್‌ ಉಲ್‌ ಫಿತ್ರ್‌ ಪ್ರಯುಕ್ತ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ; ಶ್ರೀಗಂಧದ ಗಿಡ ವಿತರಣೆ
Last Updated 17 ಜೂನ್ 2018, 12:37 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಈದ್ಗಾ ಮೈದಾನದ ಕಾಂಪೌಂಡ್‌ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಹತ್ತು ಲಕ್ಷ ರೂಗಳನ್ನು ನೀಡುತ್ತಿದ್ದು, ಒಂದು ವಾರದೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ನಗರದ ಈದ್ಗಾ ಮೈದಾನದಲ್ಲಿ ಈದ್‌ ಉಲ್‌ ಫಿತ್ರ್‌ ಪ್ರಯುಕ್ತ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಅರಣ್ಯ ಇಲಾಖೆಯ ವತಿಯಿಂದ ಶ್ರೀಗಂಧದ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಗಿಡ ಬೆಳೆಸಿ ಶ್ರೀಗಂಧದ ರೀತಿಯಲ್ಲಿ ಸುವಾಸನೆ ಬೀರುವ ಸಂಬಂಧ ಸಮಾಜದಲ್ಲಿ ಬೆಳೆಯಲಿ. ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲಿ ಎಂದು ಹೇಳಿದರು.

ಶಾಸಕ ವಿ.ಮುನಿಯಪ್ಪ ಮಾತನಾಡಿ, ‘ಸೌಹಾರ್ದದ ಪ್ರತೀಕವಾದ ಈದ್ ಆಚರಣೆಯು ಏಕತೆ ಮತ್ತು ಅಭಿವೃದ್ದಿಗೆ ಪೂರಕವಾಗಲಿ ಎಂದು ತಿಳಿಸಸಿದರು.

ಈದ್‌ ಪ್ರಯುಕ್ತ ಎಲ್ಲರೂ ಹೊಸ ಬಟ್ಟೆ ತೊಟ್ಟು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ತಿಂಗಳ ಕಾಲ ಉಪವಾಸ ವ್ರತ ಆಚರಿಸಿ, ಹಬ್ಬ ಆಚರಿಸುವ ತವಕ ಎಲ್ಲರಲ್ಲೂ ಕಾಣುತ್ತಿತ್ತು. ಇಡೀ ಊರಲ್ಲಿ ಸಂಭ್ರಮ ನೆಲೆಸಿತ್ತು.

ರಂಜಾನ್‌ ಕೊನೆಯ ದಿನಕ್ಕೆ ಮುನ್ನ ಎಲ್ಲ ಮುಸ್ಲಿಮರು ಬಡವರು, ದುರ್ಬಲರು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಧಾನ್ಯ, ವಸ್ತ್ರ ದಾನ ಮಾಡಿದರು.

ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ, ನಗರಸಭೆ ಆಯುಕ್ತ ಚಲಪತಿ, ಸುಬ್ರಮಣಿ, ಸಯ್ಯದ್‌, ತಾಜ್‌ಪಾಷಾ, ರಾಜ್‌ಕುಮಾರ್‌, ಬಾಲಕೃಷ್ಣ, ಮಧು, ಸಿಪಿಐ ಸಿದ್ದರಾಜು, ಪಿಎಸ್ಐಗಳಾದ ನವೀನ್‌, ಪ್ರದೀಪ್‌ ಪೂಜಾರಿ ಇದ್ದರು.

ಹಿಂದೂ ಸ್ವಾಮೀಜಿಯಿಂದ ದಾನ

ರಂಜಾನ್‌ ಪ್ರಯುಕ್ತ ಮುಸ್ಲಿಮರು ದಾನ ಮಾಡುವುದು ಸಂಪ್ರದಾಯ. ಆದರೆ ನಗರದ ಈದ್ಗಾ ಮೈದಾನಕ್ಕೆ ಹಳದಿ ಕಚ್ಚೆ ಪಂಚೆ, ಮೇಲು ಧೋತ್ರ, ಹಣೆ ಮೇಲೆ ತಿಲಕವನ್ನು ಇಟ್ಟುಕೊಂಡಿದ್ದ ಹಿಂದೂ ಸ್ವಾಮೀಜಿಯೊಬ್ಬರು ಮುಸ್ಲಿಮರಿಗೆ ವಸ್ತ್ರ, ಹಣ, ಬಿಸ್ಕತ್‌, ವಿವಿಧ ತಿನಿಸುಗಳನ್ನು ದಾನ ಮಾಡಿ ಎಲ್ಲರ ಗಮನ ಸೆಳೆದರು.

ನಂತರ ಮಾತನಾಡಿದ ಅವರು, ‘ನನ್ನ ಹೆಸರು ಮುರಳೀಧರ. ವೃತ್ತಿಯಲ್ಲಿ ವಕೀಲ. ಮೂಲಸ್ಥಳ ದಾವಣಗೆರೆ. ಶಿಡ್ಲಘಟ್ಟದ ರಾಮ ದೇವಸ್ಥಾನದ ಅರ್ಚಕರ ಮಗಳನ್ನು ವಿವಾಹವಾಗಿದ್ದೇನೆ. ಅಜ್ಜನ ಕಾಲದಿಂದಲೂ ನಮ್ಮೂರಿನಲ್ಲಿ ರಂಜಾನ್‌ ದಿನ ಮಸೀದಿಗೆ ಅಕ್ಕಿ ಕೊಡುವುದು, ಅವರ ಪ್ರಾರ್ಥನೆಯ ನಂತರ ದಾನ ನೀಡುವ ಸಂಪ್ರದಾಯ ಇದೆ. ಬಡವರಿಗೆ, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತಾ ನಮ್ಮ ಪಾಪ ತೊಳೆದುಕೊಳ್ಳುವ ಕೆಲಸವಿದು. ಈ ಬಾರಿ ಇಲ್ಲಿ ಸೇವೆ ಮುಂದುವರಿಸಿದ್ದೇನೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT