ನ್ಯಾಯಮಂಡಳಿ ತೀರ್ಪೇ ಈಗ ಉಳಿದಿರುವ ಮಾರ್ಗ

7
ಸಂಧಾನ, ಪ್ರಧಾನಿ ಮಧ್ಯಸ್ಥಿಕೆ, ಚರ್ಚೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಸಾಧ್ಯತೆ ಎಲ್ಲಕ್ಕೂ ಬೀಳಲಿದೆ ತೆರೆ

ನ್ಯಾಯಮಂಡಳಿ ತೀರ್ಪೇ ಈಗ ಉಳಿದಿರುವ ಮಾರ್ಗ

Published:
Updated:
ನ್ಯಾಯಮಂಡಳಿ ತೀರ್ಪೇ ಈಗ ಉಳಿದಿರುವ ಮಾರ್ಗ

ಮಹದಾಯಿ ಜಲ ವಿವಾದಕ್ಕಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದಾಗಲಿ; ಕರ್ನಾಟಕ– ಗೋವಾ– ಮಹಾರಾಷ್ಟ್ರ ಸರ್ಕಾರಗಳು ಪರಸ್ಪರ ಚರ್ಚೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಸಾಧ್ಯತೆಗಳಾಗಲಿ ಬಹುತೇಕ ಕ್ಷೀಣಿಸಿವೆ. ಇನ್ನೇನಿದ್ದರೂ ಮಹದಾಯಿ ನ್ಯಾಯಮಂಡಳಿಯ ಐತೀರ್ಪು ಏನು ಬರುತ್ತದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.

ನವಲಗುಂದ ಮತ್ತು ನರಗುಂದದಲ್ಲಿ ರೈತರು ನಡೆಸುತ್ತಿರುವ ನಿರಂತರ ಪ್ರತಿಭಟನೆ 1,050 ದಿನ ದಾಟಿದೆ. ಇನ್ನೂ ಅದರ ಕಾವು ತಗ್ಗಿಲ್ಲ. ಈ ನಡುವೆ ರಾಜ್ಯ ವಿಧಾನಸಭಾ ಚುನಾವಣೆ ಮುಗಿದು, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ (ಜೆಡಿಎಸ್‌– ಕಾಂಗ್ರೆಸ್‌) ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಸನ್ನಿವೇಶದಲ್ಲಿ ಮಹದಾಯಿ ಭವಿಷ್ಯ ಏನು ಎಂಬುದು ಈ ಭಾಗದ ಪ್ರತಿಯೊಬ್ಬರ ಪ್ರಶ್ನೆ.

ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್‌ ನೇತೃತ್ವದ ಮಹದಾಯಿ ನ್ಯಾಯಮಂಡಳಿ ಮುಂದೆ ಮೂರೂ ರಾಜ್ಯಗಳ ವಾದ ಮಂಡನೆ ಫೆಬ್ರುವರಿ 22ರಂದೇ ಮುಗಿದಿದೆ. ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರೇ ಹೇಳಿರುವ ಪ್ರಕಾರ, ಜುಲೈ ತಿಂಗಳಲ್ಲಿ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ. ಒಂದು ವೇಳೆ ಆಗಲಿಲ್ಲ ಅಂದರೂ ಆಗಸ್ಟ್‌ 21ಕ್ಕೆ ಅದರ ಅವಧಿ ಮುಗಿಯುತ್ತಿದ್ದು, ಅಷ್ಟರೊಳಗೆ ವರದಿ ಕೊಡಬೇಕಾಗುತ್ತದೆ. ನ್ಯಾಯಮಂಡಳಿಯ ಅವಧಿಯನ್ನು ಹಲವು ಬಾರಿ ವಿಸ್ತರಿಸಿರುವುದರಿಂದ ಪುನಾ ಹಾಗೆ ಮಾಡುವ ಸಾಧ್ಯತೆ ಕಡಿಮೆ. ಎಷ್ಟೇ ವಿಳಂಬ ಅಂದರೂ ಇನ್ನು ಎರಡು ತಿಂಗಳಲ್ಲಿ ಮಹದಾಯಿ ತೀರ್ಪು ರಾಜ್ಯಕ್ಕೆ ವರವಾಗಲಿದೆಯೋ ಶಾಪವಾಗಲಿದೆಯೋ ಎಂಬುದು ತೀರ್ಮಾನವಾಗಲಿದೆ.

ರಾಜಕಾರಣದ ಸುತ್ತ: ಮುಂಬೈ ಕರ್ನಾಟಕ ಭಾಗದ 11 ತಾಲ್ಲೂಕುಗಳ ಜನರ ದಾಹ ನೀಗಿಸುವ ಮಹದಾಯಿ, ಕಳಸಾ– ಬಂಡೂರಿ ಯೋಜನೆಗೆ ಗೋವಾ ಸರ್ಕಾರ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಕುಡಿಯುವ ಸಲುವಾಗಿ 7.56 ಟಿ.ಎಂ.ಸಿ ಅಡಿ ನೀರು ಕೊಡಿ ಎಂದು ಕರ್ನಾಟಕ ಕೇಳಿದರೆ, ಗೋವಾ ಹಾಗೆ ಮಾಡಲು ಸಾಧ್ಯ ಇಲ್ಲ ಎಂದು ಹೇಳಿತು. ಇದು ಎರಡೂ ರಾಜ್ಯಗಳಲ್ಲಿ ರಾಜಕೀಯ ವಿಷಯವಾಗಿ, ವಾಗ್ವಾದಕ್ಕೂ ಕಾರಣವಾಯಿತು.

ಗೋವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಇದು ಅಲ್ಲಿ ಚುನಾವಣಾ ವಿಷಯ ಆಗಲಿಲ್ಲ. ಹಾಗೆಯೇ ಕಳೆದ ತಿಂಗಳು ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಚುನಾವಣಾ ವಿಷಯ ಆಗಲಿಲ್ಲ. ಆದರೆ, ರಾಜಕೀಯ ಪಕ್ಷಗಳು ಮಾತ್ರ ಈ ವಿಷಯ ಬಿಟ್ಟು ಚುನಾವಣೆಯನ್ನು ಮಾಡಲಿಲ್ಲ!

ಗೋವಾ ಚುನಾವಣೆ ಬಂದಾಗ ಗೋವಾ ಪರ, ಕರ್ನಾಟಕದ ಚುನಾವಣೆ ಬಂದಾಗ ಕರ್ನಾಟಕದ ಪರ ಇರುವ ರಾಷ್ಟ್ರೀಯ ಪಕ್ಷಗಳ (ಬಿಜೆಪಿ–ಕಾಂಗ್ರೆಸ್‌) ದ್ವಂದ್ವ ನಿಲುವುಗಳು ಜನರಿಗೂ ಅರ್ಥ ಆಗಿದೆ. ಹೀಗಾಗಿ ಪರಸ್ಪರ ಕೆಸರೆರಚಾಟಕ್ಕೇ ಹೆಚ್ಚಿನ ಸಮಯ ವ್ಯಯವಾಗಿದ್ದು, ಸಮಸ್ಯೆ ಇತ್ಯರ್ಥಕ್ಕೆ/ ಸಂಧಾನದ ಮಾತುಕತೆಗೆ ಬೆವರು ಹರಿಸಿದ್ದು ಕಡಿಮೆಯೇ ಎಂಬುದು ಸ್ಥಳೀಯರ ಅಭಿಪ್ರಾಯ.

‘ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಮಹದಾಯಿ ವಿಷಯದಲ್ಲಿ ಏನೂ ಮಾಡಲಿಲ್ಲ’ ಎಂದು ಬಿಜೆಪಿಯವರು ಪ್ರತಿಭಟನೆಗಳನ್ನು ಮಾಡಿದರು. ಆದರೆ, ಅವರ ನಂತರ ಅಧಿಕಾರಕ್ಕೆ ಬಂದ ಬಿಜೆಪಿಯವರು ಕೂಡ ಹೆಚ್ಚಿನದೇನನ್ನೂ ಮಾಡಲಿಲ್ಲ. ‘ನ್ಯಾಯಮಂಡಳಿ ರಚನೆಗೆ ಕಾಂಗ್ರೆಸ್ ಕಾರಣ’ ಎಂದು ಹೇಳುತ್ತಲೇ ಬಿಜೆಪಿ ಕಾಲ ಕಳೆಯಿತು. ಈ ಎರಡೂ ಪಕ್ಷಗಳನ್ನು ಟೀಕಿಸುತ್ತಲೇ ಜೆಡಿಎಸ್‌ ಕೂಡ ತನ್ನ ನೆಲೆ ಭದ್ರಪಡಿಸಿಕೊಳ್ಳುವ ಪ್ರಯತ್ನ ಮಾಡಿತು.

ಈ ವಿಷಯದಲ್ಲಿ ತಮ್ಮ ಪಕ್ಷದಿಂದ ಒಳ್ಳೆಯದಾಗಿದೆ ಎಂದು ಎದೆಯುಬ್ಬಿಸಿ ಹೇಳುವ ಸ್ಥಿತಿಯಲ್ಲಿ ಯಾವ ರಾಜಕೀಯ ಪಕ್ಷಗಳ ಮುಖಂಡರೂ ಇಲ್ಲ. ಆದರೆ, ಎಲ್ಲ ಪಕ್ಷಗಳಿಗೂ ಈ ವಿಷಯ ಜೀವಂತವಾಗಿ ಇರಬೇಕೆನ್ನುವ ಬಯಕೆ ಇರುವುದಂತೂ ಸತ್ಯ!

ಈ ನಡುವೆ, ಸಹ್ಯಾದ್ರಿ ಜಲಜನ ಸೊಸೈಟಿಯ ಸದಸ್ಯರು ಇತ್ತೀಚೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ, ‘ಮಹದಾಯಿ ಸಣ್ಣ ನೀರಾವರಿ ಯೋಜನೆ’ಗೆ ಒಪ್ಪಿಗೆ ನೀಡಬೇಕು ಎನ್ನುವ ಮನವಿ ಮಾಡಿದ್ದಾರೆ. ನಿಯೋಗದಲ್ಲಿ ಮುಂಬೈ ಕರ್ನಾಟಕ ಭಾಗದ ಶಂಕರಪ್ಪ ಅಂಬಲಿ ಮತ್ತಿತರ ಕೆಲವರನ್ನು ಬಿಟ್ಟರೆ ಪ್ರಮುಖ ಹೋರಾಟಗಾರರು ಕಾಣಿಸಿಲ್ಲ. ಇದು ಕೂಡ ಒಂದು ರೀತಿ ರಾಜಕಾರಣದ ಮತ್ತೊಂದು ಮಗ್ಗಲು ಎಂದೂ ಮಹದಾಯಿ ಹೋರಾಟಗಾರರು ಹೇಳುತ್ತಾರೆ.

ನೋಟಾ ಕರೆಗೂ ಸಿಗಲಿಲ್ಲ ಕಿಮ್ಮತ್ತು: ‘ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮೂರೂ ಪಕ್ಷಗಳು ಮಹದಾಯಿ ವಿಷಯದಲ್ಲಿ ರಾಜಕಾರಣ ಮಾಡುತ್ತಿವೆ. ಇವುಗಳಿಗೆ ಪಾಠ ಕಲಿಸಬೇಕೆಂದರೆ ಯಾವ ಪಕ್ಷಕ್ಕೂ ವೋಟ್‌ ಹಾಕದೆ, ನೋಟಾಗೆ ಹಾಕಿ’ ಎಂದು ರೈತ ಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಚುನಾವಣಾ ಪೂರ್ವದಲ್ಲಿ ಕರೆ ನೀಡಿದ್ದರು. ಆದರೆ, ಅದಕ್ಕೂ ಕಿಮ್ಮತ್ತು ಸಿಗಲಿಲ್ಲ. ಚುನಾವಣೆಯೇ ಬೇರೆ ಮಹದಾಯಿ ಹೋರಾಟವೇ ಬೇರೆ ಎಂದು ಪಕ್ಷ ಮತ್ತು ಜಾತಿ ರಾಜಕಾರಣಕ್ಕೆ ಜೋತುಬಿದ್ದು ಜನ ಮತ ಚಲಾಯಿಸಿದರು.

ಮಹದಾಯಿ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಒಟ್ಟು 21,037 ಮತಗಳು ನೋಟಾಕ್ಕೆ ಬಿದ್ದಿವೆ. ಇವೆಲ್ಲ ಮಹದಾಯಿ ಕಾರಣಕ್ಕೇ ಬಿದ್ದಿವೆ ಎಂದು ಹೇಳುವುದಕ್ಕೂ ಸಾಧ್ಯ ಇಲ್ಲ. ಆದರೆ ಒಂದಂತೂ ಸತ್ಯ, ಸೊಬರದಮಠ ಅವರ ಕರೆಗೂ ಪೂರ್ಣ ಪ್ರಮಾಣದ ಬೆಂಬಲ ಸಿಗಲಿಲ್ಲ. ಇದನ್ನು ಅವರೇ ಸ್ವತಃ ಒಪ್ಪಿಕೊಳ್ಳುತ್ತಾರೆ. ‘ಜಾತಿ ಮತ್ತು ಹಣದ ಮುಂದೆ ಮಹದಾಯಿ ಏನೂ ಅಲ್ಲ’ ಎಂದೂ ಅವರು ಅಸಹಾಯಕತೆ ವ್ಯಕ್ತಪಡಿಸಿದರು. ಈ ಅಭಿಪ್ರಾಯಕ್ಕೆ ರೋಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಕೂಡ ಬೆಂಬಲ ಸೂಚಿಸಿದರು.

ಬಿಜೆಪಿ ಕೈಹಿಡಿಯಿತೇ ಭರವಸೆ?

‘ಕೇಂದ್ರ ಅಲ್ಲದೆ, ಗೋವಾ, ಮಹಾರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಹೀಗಾಗಿ ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಬಿಜೆಪಿಗೆ ಅವಕಾಶ ಇತ್ತು. ಆದರೆ, ಹಾಗೆ ಮಾಡಲಿಲ್ಲ’ ಎಂಬುದು ಕಾಂಗ್ರೆಸ್‌ನ ಆರೋಪ. ಹೀಗೆ ಹೇಳುತ್ತಲೇ ವೋಟ್ ಬ್ಯಾಂಕ್‌ ರಾಜಕಾರಣ ಮಾಡಿದ ಕಾಂಗ್ರೆಸ್ಸಿಗೆ, ಮತದಾರ ಚುನಾವಣೆಯಲ್ಲಿ ‘ಸಿಹಿ’ ಸುದ್ದಿ ಕೊಡಲಿಲ್ಲ! ಮಹದಾಯಿ ಪಾತ್ರದ 13 ವಿಧಾನಸಭಾ ಕ್ಷೇತ್ರಗಳ ಪೈಕಿ ಎಂಟು ಕಡೆ ಬಿಜೆಪಿ ಅಭ್ಯರ್ಥಿಗಳೇ ಗೆದ್ದರು. ಇದರರ್ಥ ಕಾಂಗ್ರೆಸ್‌ ಆರೋಪಕ್ಕೆ ಜನ ಸೊಪ್ಪು ಹಾಕಲಿಲ್ಲ ಎಂಬುದು. ಹಾಗಾದರೆ ಬಿಜೆಪಿಯನ್ನು ಏಕೆ ಬೆಂಬಲಿಸಿದರು?

ಇದಕ್ಕೆ ಜೆಡಿಎಸ್‌ ನಾಯಕ ಎನ್‌.ಎಚ್‌.ಕೋನರಡ್ಡಿ ಹೀಗೆ ಉತ್ತರಿಸುತ್ತಾರೆ– ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಸಂದರ್ಭದಲ್ಲಿ ಗದಗದಲ್ಲಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಮಹದಾಯಿ ವಿವಾದ ಬಗೆಹರಿಸುವುದಾಗಿ ಹೇಳಿದ್ದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು. ಬಿಜೆಪಿ ಮುಖಂಡರ ಮೋಡಿ ಮಾಡುವ ಮಾತುಗಳಿಂದಾಗಿ ತಮ್ಮೆಲ್ಲ ಲೆಕ್ಕಾಚಾರಗಳು ತಲೆಕೆಳಗಾದವು ಎಂಬುದು ಅವರ ಅನಿಸಿಕೆ.

ಈ ಕಾರಣಕ್ಕೋ ಏನೋ ಮಹದಾಯಿ, ಕಾಂಗ್ರೆಸ್‌ ಕೈಹಿಡಿಯಲಿಲ್ಲ. ಮತ್ತೂ ವಿಶೇಷ ಅಂದರೆ, ಬಿಜೆಪಿಯಿಂದ ಗೆದ್ದಿರುವ ಎಂಟೂ ಶಾಸಕರು ಲಿಂಗಾಯತರು! ಆ ಸಮುದಾಯದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದು ಕೂಡ ಇದಕ್ಕೆ ಪೂರಕವಾಗಿ ಕೆಲಸ ಮಾಡಿದೆ ಎಂಬುದು ರೈತ ಹೋರಾಟಗಾರ ಬಿ.ಎಸ್‌.ಸೊಪ್ಪಿನ ಅವರ ಅಭಿಪ್ರಾಯ.

ಕೋನರಡ್ಡಿ

ಕೋನರಡ್ಡಿ ಮತ್ತು ಮಹದಾಯಿ

ಮಹದಾಯಿ ವಿಷಯವನ್ನು ನಿರಂತರವಾಗಿ ಜೀವಂತ ಇಟ್ಟವರಲ್ಲಿ ಎನ್‌.ಎಚ್‌.ಕೋನರಡ್ಡಿ ಕೂಡ ಒಬ್ಬರು. ವಿಧಾನಸಭೆ ಒಳಗೆ ಮತ್ತು ಹೊರಗೆ ಅವರು ಹೋರಾಟ ಮಾಡದ ದಿನವೇ ಇಲ್ಲ. ಆದರೂ ಅವರನ್ನು ನವಲಗುಂದ ಕ್ಷೇತ್ರದ ಮತದಾರರು ಕೈಹಿಡಿಯಲಿಲ್ಲ. ಹಾಗಾದರೆ ಈ ಭಾಗದ ಜನರಿಗೆ ಮಹದಾಯಿ ನೀರು ಬೇಕಿಲ್ಲವೇ?

ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಮಹದಾಯಿಗೂ ಚುನಾವಣೆಗೂ ಸಂಬಂಧವೇ ಇಲ್ಲ ಎನ್ನುವ ಅಭಿಪ್ರಾಯ ಬಂತು. 2013ರ ಚುನಾವಣೆಯಲ್ಲಿ ಕೋನರಡ್ಡಿ ಗೆದ್ದಿದ್ದು ಕೂಡ ಮಹದಾಯಿ ಕಾರಣಕ್ಕೆ ಅಲ್ಲ; ಆ ಸಂದರ್ಭದಲ್ಲಿ ಕೆಜೆಪಿ– ಬಿಜೆಪಿ ಮತ ವಿಭಜನೆಯ ಲಾಭ ಹಾಗೂ ಅದಕ್ಕೂ ಮೊದಲು ಎರಡು ಚುನಾವಣೆಗಳಲ್ಲಿ ಸೋತ ಅನುಕಂಪ ಅವರ ಕೈಹಿಡಿದಿತ್ತು. ಅದಕ್ಕೆ ಪೂರಕವಾಗಿ ಮಹದಾಯಿ ವಿಚಾರ ಪ್ರಸ್ತಾಪಿಸಿಕೊಂಡು ಈ ಚುನಾವಣೆಯಲ್ಲೂ ಜನರ ವಿಶ್ವಾಸ ಗಳಿಸಬಹುದು ಎನ್ನುವುದು ಅವರ ಲೆಕ್ಕಾಚಾರ ಆಗಿತ್ತು. ಆದರೆ, ಬಿಜೆಪಿ ಮುಖಂಡರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶೀಘ್ರ ವಿವಾದ ಇತ್ಯರ್ಥಪಡಿಸುವ ಭರವಸೆ ಕೊಟ್ಟ ನಂತರ ಜನ ಕೂಡ ತಮ್ಮ ನಿಲುವು ಬದಲಿಸಿರಬಹುದು. ಜತೆಗೆ ಯಡಿಯೂರಪ್ಪ ಫ್ಯಾಕ್ಟರ್‌, ಪಂಚಮಸಾಲಿ ಲಿಂಗಾಯತರಾದ ಶಂಕರ ಮುನೇನಕೊಪ್ಪ ಅವರಿಗೆ ಪೂರಕವಾಗಿ ಕೆಲಸ ಮಾಡಿದೆ. ಕೋನರಡ್ಡಿ, ರಡ್ಡಿ ಸಮುದಾಯಕ್ಕೆ ಸೇರಿದ್ದು, ಅವರ ಜಾತಿಯವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಜತೆಗೆ ಮುಸ್ಲಿಂ, ಕುರುಬರ ಮತಗಳು ಚದುರಿದ ಕಾರಣ ಕೋನರಡ್ಡಿ ಸೋಲಬೇಕಾಯಿತು ಎಂಬುದು ಸ್ಥಳೀಯರ ವಿಶ್ಲೇಷಣೆ.

ಹಣ ಹೊಂದಿಸುವ ಸವಾಲು

ನೀರಿನ ಲಭ್ಯತೆ ಮತ್ತು ಹಂಚಿಕೆ ವಿಷಯಕ್ಕಿಂತ ಹೆಚ್ಚಾಗಿ ಪರಿಸರದ ಮೇಲಾಗುವ ಪರಿಣಾಮಗಳ ಕುರಿತೇ ನ್ಯಾಯಮಂಡಳಿ ಮುಂದೆ ಸುದೀರ್ಘ ಚರ್ಚೆಯಾಗಿದೆ. ಹೀಗಾಗಿ ರಾಜ್ಯದ ಪಾಲಿಗೆ ಎಷ್ಟು ನೀರು ಸಿಗುತ್ತದೆ ಎಂಬುದರ ಮೇಲೆ ಮುಂದಿನ ತೀರ್ಮಾನಗಳು ನಿಂತಿವೆ.

ಇಂತಿಷ್ಟೆಂದು ನೀರು ಹಂಚಿಕೆಯಾದರೆ ಮಾತ್ರ ಕಳಸಾ ಮತ್ತು ಬಂಡೂರಿ ನಾಲಾಗಳಿಗೆ ಅಡ್ಡಲಾಗಿ ಎರಡು ಜಲಾಶಯಗಳನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಅದರ ನಂತರ ಕಾಲುವೆಗಳ ಮರುಜೋಡಣೆ ಮಾಡಬೇಕಾಗುತ್ತದೆ. ಇಷ್ಟೆಲ್ಲ ಆಗಲು ಏನಿಲ್ಲ ಅಂದರೂ ಕನಿಷ್ಠ ₹300 ಕೋಟಿಯಿಂದ 400 ಕೋಟಿ ಬೇಕಾಗುತ್ತದೆ. ಇದು ಸಮ್ಮಿಶ್ರ ಸರ್ಕಾರಕ್ಕೆ ಒಂದು ಸವಾಲೇ ಸರಿ. ಇದುವರೆಗೆ ₹250 ಕೋಟಿ ಖರ್ಚು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry