‘ಆಮ್’ ಗುಬ್ಬಚ್ಚಿ ಮೇಲೆ ಮೋದಿ ಬ್ರಹ್ಮಾಸ್ತ್ರ!

7

‘ಆಮ್’ ಗುಬ್ಬಚ್ಚಿ ಮೇಲೆ ಮೋದಿ ಬ್ರಹ್ಮಾಸ್ತ್ರ!

ಡಿ. ಉಮಾಪತಿ
Published:
Updated:
‘ಆಮ್’ ಗುಬ್ಬಚ್ಚಿ ಮೇಲೆ ಮೋದಿ ಬ್ರಹ್ಮಾಸ್ತ್ರ!

ಜನತಂತ್ರವನ್ನು ಅಣಕಿಸುವ ರಾಜಕೀಯ ಪ್ರಹಸನಗಳು ದೇಶದ ಉದ್ದಗಲಕ್ಕೆ ಕಾಲ ಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಐದು ವರ್ಷಗಳಿಗೊಮ್ಮೆ ಮತ ನೀಡಿ ಪಕ್ಷಗಳು- ವ್ಯಕ್ತಿಗಳನ್ನು ಆರಿಸಿದ ಜನ ಮುಂದಿನ ಚುನಾವಣೆ ತನಕ ಅಸಹಾಯಕರು. ಈ ಅಣಕಗಳನ್ನು ಹೇವರಿಕೆ, ರೋಷ, ವಿಷಾದ, ವ್ಯಥೆಯಿಂದ ನೋಡುತ್ತಿರುತ್ತಾರೆ. ತಮ್ಮ ರಾಜಕೀಯ ಲಾಭ ನಷ್ಟಗಳಿಗಾಗಿ ರಾಜಕೀಯ ಪಕ್ಷಗಳು ಹೂಡುವ ಹೂಟಗಳ ಕಹಿಯನ್ನು ಅಂತಿಮವಾಗಿ ಉಣ್ಣುವವರು ಜನಸಾಮಾನ್ಯರೇ.

ಇಂತಹ ಅಸಂಖ್ಯಾತ ಅಣಕಗಳ ಸಾಲಿಗೆ ಸೇರುವ ಮತ್ತೊಂದು ರಾಜಕೀಯ ನಾಟಕ ದೆಹಲಿಯಲ್ಲಿ ಜರುಗಿದೆ. ಆಮ್ ಆದ್ಮಿ ಪಾರ್ಟಿ ಸರ್ಕಾರದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್ ಬೈಜಲ್ ನಿವಾಸದಲ್ಲಿ ಧರಣಿ ಕುಳಿತಿದ್ದಾರೆ. ಕಳೆದ ಸೋಮವಾರ ಸಂಜೆಯಿಂದ ಆರಂಭವಾದ ಈ ಧರಣಿಯಲ್ಲಿ ಕೇಜ್ರಿವಾಲ್ ಸಂಪುಟದ ಮೂವರು ಸಹೋದ್ಯೋಗಿಗಳೂ ಇದ್ದಾರೆ. ದೆಹಲಿ ಸರ್ಕಾರದ ಐಎಎಸ್ ಅಧಿಕಾರಿಗಳ ಮೂರು ತಿಂಗಳ ಮುಷ್ಕರವನ್ನು ಅಂತ್ಯಗೊಳಿಸಬೇಕು ಎಂಬುದು ಕೇಜ್ರಿವಾಲ್ ಬೇಡಿಕೆ.

ಮೂರು ತಿಂಗಳಿನಿಂದ ಲೆಫ್ಟಿನೆಂಟ್‌ ಗವರ್ನರ್‌ರನ್ನು ಕೇಜ್ರಿ ಸಂಗಾತಿಗಳು ಒಂಬತ್ತು ಸಲ ಭೇಟಿ ಮಾಡಿ ಈ ಬೇಡಿಕೆ ಇರಿಸಿದ್ದಾರೆ. ಒಂಬತ್ತನೆಯ ಭೇಟಿಯ ನಂತರ ಅಲ್ಲಿಯೇ ನಿರೀಕ್ಷಣಾ ಕೊಠಡಿಯಲ್ಲಿ ಧರಣಿ ಹೂಡುವ ನಿರ್ಧಾರ. ವಾರದಿಂದ ನಿವಾಸದ ನಿರೀಕ್ಷಣಾ ಕೊಠಡಿಯನ್ನು ಬಿಟ್ಟು ಅವರು ಕದಲಲಿಲ್ಲ. ಮನೆಯಿಂದ ಬರುವ ಊಟ ತಿಂಡಿ ಸೇವಿಸಿ ರಾತ್ರಿ ಮೈ ಚೆಲ್ಲುವುದು ಅಲ್ಲಿನ ಸೋಫಾಗಳ ಮೇಲೆ. ಈ ನಡುವೆ ದಟ್ಟ ದೂಳಿನ ಹೊದಿಕೆ ದಿನಗಟ್ಟಲೆ ದೆಹಲಿಯನ್ನು ಆವರಿಸಿ ಏದುಬ್ಬಸ ಹುಟ್ಟಿ ಹಾಕಿತ್ತು. ನೆರೆಯ ಹರಿಯಾಣದಿಂದ ಯಮುನಾ ನದಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿತು.

ಧಗಧಗಿಸುವ ಬೇಸಿಗೆಯಲ್ಲಿ ವಿದ್ಯುತ್‌ ಪೂರೈಕೆ ಏರುಪೇರು ಕಂಡಿತು. ಇದ್ಯಾವುದರ ಪರಿವೆಯೂ ಇಲ್ಲದೆ ಹವಾನಿಯಂತ್ರಿತ ಕೊಠಡಿಯ ಸೋಫಾದ ಮೇಲೆ ಮಜವಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಟೀಕೆ ಕೇಜ್ರಿವಾಲ್ ಮತ್ತು ಅವರ ಸಂಗಾತಿಗಳ ಕುರಿತು ವ್ಯಕ್ತವಾಯಿತು. ‘ಹಗಲಿರುಳು ಸೋಫಾದ ಮೇಲೆ ಕಾಲ ಕಳೆಯುವುದು ಅಷ್ಟು ಸಲೀಸಲ್ಲ, ನಾವು ಧರಣಿ ಕುಳಿತಿರುವುದು ದೆಹಲಿಯ ಜನರ ಯೋಗಕ್ಷೇಮಕ್ಕಾಗಿ’ ಎಂಬುದು ಕೇಜ್ರಿ ಸಮಜಾಯಿಷಿ.

ಧರಣಿ ನಡೆಸಿರುವ ನಿರೀಕ್ಷಣಾ ಕೊಠಡಿ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯ ಕೊಠಡಿಯ ನಡುವಿನ ಅಂತರ ಕೇವಲ ಐದು ಅಡಿಗಳು. ಏಳು ದಿನಗಳೇ ಉರುಳಿದರೂ ಅನಿಲ್ ಬೈಜಲ್ ಸಾಹೇಬರು ಇತ್ತ ಬಂದು ಧರಣಿನಿರತರನ್ನು ಮಾತಾಡಿಸಿಲ್ಲ. ಕಳೆದ ಕೆಲವು ದಿನಗಳಿಂದ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ರಾಜನಿವಾಸ ರಸ್ತೆ ನೂರಾರು ಪೊಲೀಸರು ಪಹರೆ ನಡೆಸಿರುವ ಭದ್ರ ಕೋಟೆಯಾಗಿ ಪರಿಣಮಿಸಿದೆ.

ಕೇಜ್ರಿವಾಲ್ ಮತ್ತು ಅವರ ಪಕ್ಷದ ಪ್ರಕಾರ ಈ ಎಲ್ಲ ಬಿಕ್ಕಟ್ಟಿನ ಹಿಂದಿರುವ ನೇರ ಕೈವಾಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರದು. ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಮುಷ್ಕರನಿರತ ಐಎಎಸ್ ಅಧಿಕಾರಿಗಳು ಮೋದಿಯವರ ದಾಳಗಳು.

ಭಾನುವಾರದ ನೀತಿ ಆಯೋಗದ ಸಭೆಗೆ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಶನಿವಾರ ದೆಹಲಿ ತಲುಪಿದರು. ಪ್ರತಿಪಕ್ಷಗಳು ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ಧರಣಿನಿರತ ಕೇಜ್ರಿವಾಲ್ ಅವರ ಭೇಟಿ ಬಯಸಿ ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ಕೋರಿದರು. ಅನುಮತಿ ನಿರಾಕರಿಸಲಾಯಿತು! ಲೆಫ್ಟಿನೆಂಟ್‌ ಗವರ್ನರ್‌ರ ಭೇಟಿ ಕೋರಿದರು. ಅವರು ಊರಲ್ಲಿ ಇಲ್ಲ ಎಂಬ ಸಬೂಬಿನ ಜವಾಬು. ಕೈ ಚೆಲ್ಲಿದ ಮುಖ್ಯಮಂತ್ರಿಗಳು ಭಾನುವಾರ ಮುಂಜಾನೆ ನೀತಿ ಆಯೋಗದ ಸಭೆಯ ಸಂದರ್ಭದಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಮಧ್ಯಪ್ರವೇಶ ಕೋರಿದರು. ಪ್ರಧಾನಿ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ!

ಕೇಜ್ರಿವಾಲ್-ಮೋದಿ ತಿಕ್ಕಾಟ ಇಂದು ನೆನ್ನೆಯದಲ್ಲ. 2014ರ ಲೋಕಸಭಾ ಚುನಾವಣೆಗೆ ಮುನ್ನ ಮೋದಿಯವರು ಇನ್ನೂ ಗುಜರಾತ್ ಮುಖ್ಯಮಂತ್ರಿ. ಗುಜರಾತ್ಮಾದರಿ ಅಭಿವೃದ್ಧಿ ಕೇವಲ ಲೊಳಲೊಟ್ಟೆ ಎಂದು ಗುಜರಾತಿನ ನೆಲದಲ್ಲಿ ನಿಂತು ಸವಾಲು ಹಾಕಿದ್ದರುಕೇಜ್ರಿವಾಲ್. ಅಹಮದಾಬಾದ್‌ನಲ್ಲಿ ಮೋದಿ ಭೇಟಿಗೆ ಸಮಯ ಕೋರಿದ ‘ಅಧಿಕಪ್ರಸಂಗತನ’ ಕೂಡಾ ಮಾಡಿದ್ದರು.

ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮಂತಹ ಬ್ರಹ್ಮಾಸ್ತ್ರಕ್ಕೆ ಸಡ್ಡು ಹೊಡೆದದ್ದು ಇದೇ ‘ಯಃಕಶ್ಚಿತ್’ ಆಪ್ ಗುಬ್ಬಚ್ಚಿ ಎಂಬುದು ಮೋದಿ ಸಿಟ್ಟು. 2015ರ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಮೋದಿ- ಅಮಿತ್ ಶಾ ಗಾಯದ ಮೇಲೆ ಉಪ್ಪು ಉಜ್ಜಿತ್ತು. ಮೋದಿ ಜನಪ್ರಿಯತೆಯ ಉತ್ತುಂಗದ ದಿನಗಳಲ್ಲೂ ಕೇಜ್ರಿವಾಲ್ ಪಕ್ಷ ಐತಿಹಾಸಿಕ ಗೆಲುವು ಗಳಿಸಿತ್ತು. ಒಟ್ಟು 70ರ ಪೈಕಿ 67 ಸ್ಥಾನಗಳನ್ನು ಆಪ್ ಗೆದ್ದಿತ್ತು. ಬಿಜೆಪಿಗೆ ದಕ್ಕಿದ್ದು ಕೇವಲ ಮೂರು ಸ್ಥಾನಗಳು! ದೇಶದ ಉದ್ದಗಲಕ್ಕೆ ಬಾನೆತ್ತರ ಬೆಳೆದಿರುವ ಮೋದಿಯವರು ಈ ಅಪಮಾನವನ್ನು ಮರೆಯುತ್ತಿಲ್ಲ. ಬಿಜೆಪಿಯ ಖಾಸಗಿ ವೇದಿಕೆಗಳಲ್ಲಿ ಕೂಡ ಅವರು ಕೇಜ್ರಿ ಹೆಸರು ಹೇಳುವುದಿಲ್ಲ... ಕೇಜ್ರಿ-ಆಪ್ ಪ್ರಸ್ತಾಪ ಬಂದರೆ ಕುದಿಕೋಪವನ್ನು ಅಡಗಿಸಿಡಲೂ ಅವರಿಂದ ಅಗದು. ಕೇಜ್ರಿ ನೆರಳು ಕಂಡರೆ ಆಗಿಬರುವುದಿಲ್ಲ. ಈ ಮಾತು ಗುಟ್ಟಾಗಿ ಉಳಿದಿಲ್ಲ. ಮುಖಾಮುಖಿ ಆದಾಗಲೂ ಮೋದಿ ತಮ್ಮತ್ತ ನೋಡುವುದಿಲ್ಲ, ಮಾತಾಡಿಸುವುದಿಲ್ಲ ಮತ್ತು ಸಭೆಗಳಲ್ಲಿ ಮಾತಾಡುವ ಅವಕಾಶ ನೀಡುವುದಿಲ್ಲ ಎಂದು ಖುದ್ದು ಕೇಜ್ರಿವಾಲ್ ದೂರಿದ್ದಾರೆ.

ಈ ಹಿಂದಿನ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್ ಜಂಗ್ ಕೂಡ ಕೇಂದ್ರದ ತಾಳಕ್ಕೆ ಕುಣಿದು ಆಪ್ ಸರ್ಕಾರಕ್ಕೆ ಅಡೆತಡೆಗಳನ್ನು ಎಬ್ಬಿಸಿ ನಿಲ್ಲಿಸಿದ್ದು ಹೌದು. ಅವರ ನಂತರ ನೇಮಕವಾದ ಅನಿಲ್ ಬೈಜಲ್ ಅವರದೂ ಇದೇ ಕಾರ್ಯ ಸೂಚಿ. ಸಂಘರ್ಷದಲ್ಲೇ ಸಾಗಿ ಬಂದಿರುವ ಈ ಸಂಬಂಧ ಇಂದಿನ ಬಿಕ್ಕಟ್ಟಿನ ಸ್ಥಿತಿಯನ್ನು ತಲುಪಿದ್ದು ಹೇಗೆ?

ಮೂರು ತಿಂಗಳ ಹಿಂದಿನ ಮಾತು. ಫೆಬ್ರುವರಿ 19ರ ರಾತ್ರಿ 11.30ರ ವೇಳೆ. ತಮ್ಮ ನಿವಾಸದಲ್ಲಿ ನಡೆದ ಸಭೆಯೊಂದಕ್ಕೆ ಮುಖ್ಯಕಾರ್ಯದರ್ಶಿ ಅನ್ಶು ಪ್ರಕಾಶ್ ಅವರನ್ನು ಕರೆದಿದ್ದರು ಕೇಜ್ರಿವಾಲ್. ದೆಹಲಿಯ ದುರ್ಬಲರಿಗೆ ನ್ಯಾಯಬೆಲೆ ಪಡಿತರವನ್ನು ಮನೆ ಬಾಗಿಲಿಗೇ ತಲುಪಿಸುವ ಮಹತ್ವಾ

ಕಾಂಕ್ಷೆ ಯೋಜನೆ ಸಭೆಯ ವಿಷಯವಸ್ತು. ಈ ಯೋಜನೆ ಜಾರಿಗೆ ಅಧಿಕಾರಶಾಹಿ ಅನಗತ್ಯ ಕೊಕ್ಕೆ ಹಾಕಿ ವಿಳಂಬ ಮಾಡುತ್ತಿದೆ ಎಂಬುದು ‘ಆಪ್’ ದೂರಾಗಿತ್ತು. ಎಂಟು ನಿಮಿಷಗಳ ನಂತರ ಈ ಸಭೆಯಿಂದ ಹೊರಬಿದ್ದ ಮುಖ್ಯಕಾರ್ಯದರ್ಶಿ ಈ ಸಭೆಯಲ್ಲಿ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಯಿತು ಎಂದು ಪೊಲೀಸ್ ದೂರು ನೀಡಿದರು. ಸಭೆಯಲ್ಲಿದ್ದ ಪ್ರಕಾಶ್ ಜರ್ವಾಲ್ ಮತ್ತು ಅಮಾನತ್‌ ಉಲ್ಲಾ ಎಂಬ ಇಬ್ಬರು ಆಪ್ ಶಾಸಕರನ್ನು ಹಲ್ಲೆಯ ಅಪಾದನೆಯ ಮೇರೆಗೆ ಪೊಲೀಸರು ಬಂಧಿಸಿದರು. ಕಾವೇರಿದ ಕಟು ಮಾತುಗಳ ವಿನಿಮಯ ನಡೆಯಿತೇ ವಿನಾ ಹಲ್ಲೆ ನಡೆದಿಲ್ಲ ಎಂದರು ಮುಖ್ಯಮಂತ್ರಿ. ಹಲ್ಲೆಯ ಕುರಿತು ಸಾಕ್ಷ್ಯಾಧಾರ ಸಂಗ್ರಹಿಸಲು ಮುಖ್ಯಮಂತ್ರಿ ನಿವಾಸದ ಸಿ.ಸಿ. ಟಿ.ವಿ. ಕ್ಯಾಮೆರಾಗಳಲ್ಲಿ ದಾಖಲಾದ ಚಿತ್ರೀಕರಣವನ್ನು ವಶಪಡಿಸಿಕೊಳ್ಳಲು 60 ಮಂದಿ ಪೊಲೀಸರ ದಂಡು ದಾಳಿಯಿಟ್ಟಿತು. ಈ ದಾಳಿಯ ಪೂರ್ವಸೂಚನೆಯನ್ನು ಕೂಡ ಮುಖ್ಯಮಂತ್ರಿಗೆ ನೀಡಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಮೂರು ತಿಂಗಳಾದರೂ ಈವರೆಗೆ ಆರೋಪಪಟ್ಟಿಯನ್ನು ಕೂಡ ಸಲ್ಲಿಸಿಲ್ಲ.

ಮುಖ್ಯಕಾರ್ಯದರ್ಶಿಯ ಹಿಂದೆ ನಿಂತ ಐಎಎಸ್ ಅಧಿಕಾರಿಗಳು ತೀವ್ರ ಪ್ರತಿಭಟನೆ ದಾಖಲಿಸಿದರು. ಮುಖ್ಯಮಂತ್ರಿ ಕ್ಷಮೆ ಕೋರಬೇಕು. ಅಲ್ಲಿಯವರೆಗೆ ಮುಖ್ಯಮಂತ್ರಿ ಮತ್ತು ಸಚಿವರು ತಮ್ಮ ಕಚೇರಿಗಳು ಮತ್ತು ನಿವಾಸದಲ್ಲಿ ಕರೆಯುವ ಯಾವುದೇ ಸಭೆಗಳಿಗೆ ಬರುವುದಿಲ್ಲ ಎಂದು ಸಾರಿದರು. ಆದರೆ ತಾವು ಮುಷ್ಕರ ನಡೆಸುತ್ತಿಲ್ಲ ಎಂಬುದು ಅವರ ವಾದ. ಸರ್ಕಾರದ ಯೋಜನೆಗಳ ಜಾರಿ ಮತ್ತು ಕೆಲಸ ಕಾರ್ಯಗಳು ಮಂದಗತಿ ಹಿಡಿದಿವೆ ಇಲ್ಲವೇ ಸ್ಥಗಿತಗೊಂಡಿವೆ ಎಂಬುದು ಆಪ್ ಆರೋಪ.

ದೇಶದ ರಾಜಧಾನಿ ಎಂಬ ಕಾರಣಕ್ಕಾಗಿ ದೆಹಲಿ ಅರೆ-ರಾಜ್ಯವೇ ವಿನಾ ಪೂರ್ಣ ಪ್ರಮಾಣದ ರಾಜ್ಯ ಅಲ್ಲ. ಅರ್ಥಾತ್ ಪೂರ್ಣ ಪ್ರಮಾಣದ ರಾಜ್ಯವೊಂದು ಹೊಂದಿರುವ ಎಲ್ಲ ಅಧಿಕಾರಗಳೂ ದೆಹಲಿ ಸರ್ಕಾರದ ಬಳಿ ಇಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೂಡಿಯೇ ದೆಹಲಿಯನ್ನು ಆಳುತ್ತವೆ. ಎಲ್ಲ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ, ವರ್ಗಾವಣೆ, ಬಡ್ತಿ, ಅಮಾನತು, ಶಿಸ್ತುಕ್ರಮದ ಎಲ್ಲ ಅಧಿಕಾರ ಕೇಂದ್ರ ಸರ್ಕಾರದ್ದು. ದೆಹಲಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಲೋಕೋಪಯೋಗಿ ಇಲಾಖೆಯನ್ನು ನೇರವಾಗಿ ಕೇಂದ್ರ ನಗರಾಭಿವೃದ್ಧಿ ಮಂತ್ರಿ ನಿಯಂತ್ರಿಸುತ್ತಾರೆ. ಉದಾಹರಣೆಗೆ ಕರ್ನಾಟಕದಂತಹ ಪೂರ್ಣಪ್ರಮಾಣದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯ ಸರ್ಕಾರದ್ದೇ ಹೊಣೆಗಾರಿಕೆ. ಪೊಲೀಸ್ ವ್ಯವಸ್ಥೆ ರಾಜ್ಯ ಸರ್ಕಾರಕ್ಕೆ ವರದಿ ಮಾಡಿಕೊಳ್ಳುತ್ತದೆ ಮತ್ತು ಐಎಎಸ್- ಐಪಿಎಸ್ ಅಧಿಕಾರಿಗಳ ನಿಯುಕ್ತಿ, ವರ್ಗಾವಣೆಯ ಅಧಿಕಾರ ರಾಜ್ಯ ಸರ್ಕಾರದ್ದು. ಆದರೆ ದೆಹಲಿಯ ಪೊಲೀಸ್ ವ್ಯವಸ್ಥೆಯು ಕೇಂದ್ರ ಗೃಹಮಂತ್ರಿಯವರಿಗೆ ವರದಿ ಮಾಡಿಕೊಳ್ಳುತ್ತದೆ.

ಯಾಕೆ ಹೀಗೆ? ಚುಟುಕಾಗಿ ಮತ್ತು ಸರಳವಾಗಿ ಹೇಳಬೇಕಿದ್ದರೆ ದೇಶದ ರಾಜಧಾನಿಯಾದ ಕಾರಣ ದೆಹಲಿ ಕೇಂದ್ರ ಸರ್ಕಾರದ ಶಕ್ತಿ ಪೀಠ. ದೆಹಲಿ ರಾಜ್ಯ ವಿಧಾನಸಭೆ ಮತ್ತು ದೆಹಲಿ ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳ ಕಚೇರಿಗಳು ನಿವಾಸಗಳ ಜೊತೆ ಜೊತೆಗೆ ದೇಶದ ಸಂಸತ್ ಸದನ, ರಾಷ್ಟ್ರಪತಿ ಮತ್ತು ಅವರ ನಿವಾಸ, ಸಂಸದರ ವಸತಿ, ಪ್ರಧಾನಮಂತ್ರಿ ಮತ್ತು ಅವರ ಮಂತ್ರಿಮಂಡಲದ ಸದಸ್ಯರ ಕಚೇರಿಗಳು- ನಿವಾಸಗಳು, ಸುಪ್ರೀಂ ಕೋರ್ಟ್- ಮುಖ್ಯನ್ಯಾಯಮೂರ್ತಿ- ಇತರೆ ಎಲ್ಲ ನ್ಯಾಯಮೂರ್ತಿಗಳ ನಿವಾಸಗಳು, ದೇಶದ ಸೇನಾ ಮುಖ್ಯಸ್ಥರ ಕಚೇರಿಗಳು ಮತ್ತು ನಿವಾಸಗಳು ಇಲ್ಲಿವೆ. ಕಾಲ ಕಾಲಕ್ಕೆ ಭೇಟಿ ನೀಡುವ ವಿದೇಶೀ ಗಣ್ಯರು, ಜಗತ್ತಿನ ಬಹುತೇಕ ದೇಶಗಳ ದೂತಾವಾಸಗಳು ಮತ್ತು ಅವುಗಳ ನೂರಾರು ರಾಜತಾಂತ್ರಿಕರು, ರಾಯಭಾರಿಗಳ ನೆಲೆ. ಅಂತರರಾಷ್ಟ್ರೀಯ ಒಪ್ಪಂದಗಳ ಪ್ರಕಾರ ಇವರಿಗೆ ಭದ್ರತೆ ಒದಗಿಸುವುದು ಕೇಂದ್ರದ ಕರ್ತವ್ಯ. ಈ ಕಾರಣದಿಂದಾಗಿ ದೆಹಲಿ ಪೊಲೀಸ್ ವ್ಯವಸ್ಥೆಯು ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ಕೇಂದ್ರ ಗೃಹಮಂತ್ರಿಯವರ ನಿಯಂತ್ರಣದಲ್ಲಿ ಕೆಲಸ ಮಾಡುತ್ತದೆ.

ನೀರು, ವಿದ್ಯುತ್‌, ಆರೋಗ್ಯ, ಆಹಾರ ಮತ್ತು ನಾಗರಿಕ ಸರಬರಾಜು, ಶಿಕ್ಷಣ (ಕೇವಲ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ), ಸಮಾಜ ಕಲ್ಯಾಣದಂತಹ ವಿಷಯಗಳು ಮಾತ್ರವೇ ದೆಹಲಿ ಸರ್ಕಾರದ ಅಧೀನದಲ್ಲಿವೆ. ಈ ವಿಷಯಗಳ ಕುರಿತ ರಾಜ್ಯ ಸರ್ಕಾರದ ನೀತಿ ನಿರ್ಧಾರಗಳನ್ನು ಕೂಡ ಲೆಫ್ಟಿನೆಂಟ್‌ ಗವರ್ನರ್‌ ತಡೆಹಿಡಿಯಬಲ್ಲರು.

ಇತರೆ ಚುನಾಯಿತ ಸರ್ಕಾರಗಳಂತೆ ತನ್ನಿಚ್ಛೆಯ ಪ್ರಕಾರ ಕೆಲಸ ಮಾಡುವ ಸ್ವಾತಂತ್ರ್ಯ ದೆಹಲಿ ಸರ್ಕಾರಕ್ಕೆ ಇಲ್ಲ. ಅದೊಂದು ನಗರ ರಾಜ್ಯ. ವೈಭವೀಕೃತ ಮುನಿಸಿಪಾಲಿಟಿ. ಸಾರಾಂಶದಲ್ಲಿ ಹೇಳುವುದಾದರೆ ದೆಹಲಿ ಸರ್ಕಾರದ ಕೈಕಾಲು ಕಟ್ಟಿ ಹಾಕುವ ಶಕ್ತಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಉಂಟು. ಇಂತಹ ಅಧಿಕಾರವು ಜನತಂತ್ರ ವಿರೋಧಿ ಎಂದು ಕೇಜ್ರಿವಾಲ್ ನೇತೃತ್ವದ ಸರ್ಕಾರವು ಕೇಂದ್ರದ ವಿರುದ್ಧ ಕಾನೂನು ಸಮರ ಸಾರಿದೆ.

ವಿಧಾನಸಭೆ ಮತ್ತು ಸಂಸತ್ತು, ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ಎರಡೂ ಇರುವ ರಾಜ್ಯ ದೆಹಲಿ. ಈ ಹಿನ್ನೆಲೆಯಲ್ಲಿ ಸಂಸದ್‌ನ ತೂಕ ಹೆಚ್ಚೇ ವಿನಾ ವಿಧಾನಸಭೆಯದಲ್ಲ. ಸಂವಿಧಾನದ ಪ್ರಕಾರ ಒಂದು ಸ್ವಾಧೀನ ಮತ್ತೊಂದು ಅಧೀನ.

ಇಂತಹ ಹಲವು ಕಾರಣಗಳಿಗಾಗಿ ದೆಹಲಿ ಮುಖ್ಯಮಂತ್ರಿ ಅರೆಬರೆ ಮುಖ್ಯಮಂತ್ರಿ. ನಿಜದ ಅಧಿಕಾರದಂಡ ಇರುವುದು ಲೆಫ್ಟಿನೆಂಟ್‌ ಗವರ್ನರ್‌ ಬಳಿ. ಜನರಿಂದ ಆರಿಸಿಬಂದ ಮುಖ್ಯಮಂತ್ರಿಗಿಂತ ಕೇಂದ್ರ ಸರ್ಕಾರ ನೇಮಿಸುವ ಲೆಫ್ಟಿನೆಂಟ್‌ ಗವರ್ನರ್‌ ಅವರೇ ಹೆಚ್ಚು ಶಕ್ತರು. ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟದ ನೀತಿ ನಿರ್ಧಾರಗಳನ್ನು ತಡೆಹಿಡಿಯುವ ಮತ್ತು ಬದಲಿಸಬಲ್ಲ ಅಧಿಕಾರ ಅವರದು.

ಮೋದಿ ನೇತೃತ್ವದ ಸರ್ಕಾರ ತಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎನ್ನುತ್ತಾರೆ ಕೇಜ್ರಿವಾಲ್. ಕೆಲಸವನ್ನೇ ಮಾಡಿಲ್ಲ, ಹೀಗಾಗಿ ಲೋಕಸಭಾ ಚುನಾವಣೆಗಳಿಗೆ ಮುನ್ನ ಧರಣಿಯ ನಾಟಕ ನಡೆಸಿದ್ದಾರೆ ಎನ್ನುತ್ತಿದೆ ಬಿಜೆಪಿ. ಪ್ರಹಸನ ಮಂದುವರೆಯಲಿದೆ. ಈ ಜಗಳದಲ್ಲಿ ಬಡವಾಗುತ್ತಿದ್ದಾರೆ ದೆಹಲಿಯ ಜನಸಾಮಾನ್ಯರು.

ಬರಹ ಇಷ್ಟವಾಯಿತೆ?

 • 13

  Happy
 • 4

  Amused
 • 2

  Sad
 • 4

  Frustrated
 • 5

  Angry