ಕುಲದೀಪ್‌ಗೆ ನೇಮರ್, ಪ್ರಣಯ್‌ಗೆ ಮೆಸ್ಸಿ ಇಷ್ಟ

7

ಕುಲದೀಪ್‌ಗೆ ನೇಮರ್, ಪ್ರಣಯ್‌ಗೆ ಮೆಸ್ಸಿ ಇಷ್ಟ

Published:
Updated:
ಕುಲದೀಪ್‌ಗೆ ನೇಮರ್, ಪ್ರಣಯ್‌ಗೆ ಮೆಸ್ಸಿ ಇಷ್ಟ

ಕೋಲ್ಕತ್ತ: ಫುಟ್‌ಬಾಲ್‌ ವಿಶ್ವಕಪ್‌ ಆರಂಭವಾಗುತ್ತಿದ್ದಂತೆ ಭಾರತದ ವಿವಿಧ ಕ್ರೀಡಾಪಟುಗಳು ತಮ್ಮ ನೆಚ್ಚಿನ ಆಟಗಾರರ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಎಲ್ಲ ಕ್ರೀಡಾಪಟುಗಳು ಈ ಸಲದ ವಿಶ್ವಕಪ್‌ನಲ್ಲಿ ಚಿನ್ನದ ಬೂಟು ಪ್ರಶಸ್ತಿ ಗೆಲ್ಲುವವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಲಯೊನೆಲ್‌ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ನೇಮರ್‌ ಅವರೆಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

‘ನೇಮರ್‌ ಅವರ ಕಾರಣಕ್ಕೆ ನನಗೆ ಬ್ರೆಜಿಲ್‌ ತಂಡ ಇಷ್ಟ. ಕ್ರಿಕೆಟ್‌ ಆಟದಲ್ಲಿ ಮುಳುಗಿದ್ದರೂ, ಬಿಡುವು ಮಾಡಿಕೊಂಡು ನೇಮರ್‌ ಅವರು ಆಡುವ ಪಂದ್ಯಗಳನ್ನು ವೀಕ್ಷಿಸುತ್ತೇನೆ. ನೇಮರ್ ಅವರ ಆಟದ ವೈಖರಿ, ಫುಟ್‌ಬಾಲ್‌ ಬಗ್ಗೆ ಅವರಿಗಿರುವ ಪ್ರೀತಿ ನನ್ನ ಮೆಚ್ಚುಗೆಗೆ ಕಾರಣ. ಆದ್ದರಿಂದ ಈ ಬಾರಿ ಬ್ರೆಜಿಲ್‌ ಮತ್ತು ನೇಮರ್‌ ಅವರಿಗೆ ನನ್ನ ಬೆಂಬಲ’ ಎಂದು ಭಾರತ ಕ್ರಿಕೆಟ್‌ ತಂಡದ ಆಟಗಾರ ಕುಲದೀಪ್‌ ಯಾದವ್‌ ಹೇಳಿದ್ದಾರೆ.

‘ಕಳೆದ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಬ್ರೆಜಿಲ್‌ ತಂಡ ಹೀನಾಯ ಸೋಲು ಅನುಭವಿಸಿತ್ತು. ಆ ಸೋಲು ತೀವ್ರ ನಿರಾಸೆ ತರಿಸಿತ್ತು. ಈಗಲೂ  ಆ ಪಂದ್ಯವನ್ನು ನೆನಪು ಮಾಡಿಕೊಂಡರೆ ನಿದ್ದೆ ಬರುವುದಿಲ್ಲ’ ಎಂದು ಅವರು ಮೆಲುಕು ಹಾಕುತ್ತಾರೆ.

ಇನ್ನೂ ಭಾರತದ ಬಾಕ್ಸರ್‌ ಅಖಿಲ್‌ ಕುಮಾರ್‌ ತಾವು ಪೋರ್ಚುಗಲ್‌ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. ಈಗಾಗಲೇ ಸ್ಪೇನ್‌ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ಬಗ್ಗೆ ಅವರಿಗೆ ವಿಶೇಷ ಪ್ರೀತಿ.

‘ರೊನಾಲ್ಡೊ ಅವರ ಫ್ರಿ ಕಿಕ್‌, ಹೆಡರ್‌, ಸೈಕಲ್‌ ಕಿಕ್‌ಗಳ ಸೊಗಸು ಕಣ್ತುಂಬಿಕೊಳ್ಳಲು ನಾನು ಕಾತರದಿಂದ ಕಾಯುತ್ತಿದ್ದೇನೆ. ತಾವೊಬ್ಬ ಶ್ರೇಷ್ಠ ಆಟಗಾರ ಎಂದು ಈಗಾಗಲೇ ಅವರು ಸ್ಪೇನ್‌ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆಟದ ಹೊರತಾಗಿ ಅವರು ಕೈಗೊಳ್ಳುವ ಸಾಮಾಜಿಕ ಕಾರ್ಯಗಳು ನಮಗೆಲ್ಲ ಸ್ಫೂರ್ತಿ. ಆದ್ದರಿಂದ ಪೋರ್ಚುಗಲ್‌ ತಂಡ ಈ ಸಲದ ವಿಶ್ವಕಪ್‌ ಎತ್ತಿಹಿಡಿಯಬೇಕು ಎಂಬುದು ನನ್ನ ಆಕಾಂಕ್ಷೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ರೊನಾಲ್ಡೊ ಅವರ ವೇಗ, ಚೆಂಡಿನ ಮೇಲೆ ಅವರು ಹೊಂದುವ ನಿಯಂತ್ರಣ ಎಲ್ಲವೂ ನನಗೆ ಅಚ್ಚು–ಮೆಚ್ಚು. ಯಾವುದೇ ಸಂದರ್ಭದಲ್ಲೂ ಅವರು ಒತ್ತಡಕ್ಕೆ ಒಳಗಾಗದೇ ಆಡುವ ರೀತಿ ನನ್ನಲ್ಲಿ ಅಚ್ಚರಿ ಉಂಟು ಮಾಡುತ್ತದೆ’ ಎಂದು ಗಾಲ್ಫ್‌ ಆಟಗಾರ ರಾಹಿಲ್‌ ಗಂಗಜೀ ತಿಳಿಸಿದ್ದಾರೆ.

‘ನಾನು ಚಿಕ್ಕವನಿದ್ದಾಗ ಬ್ರೆಜಿಲ್‌ನ ರೊನಾಲ್ಡೊ, ರೊನಾಲ್ಡಿನೊ ಹಾಗೂ ರಿವಾಲ್ಡೊ ಅವರ ಆಟ ನೋಡಿದ್ದೇನೆ. ಅವರೆಲ್ಲರ ಅಭಿಮಾನಿ ನಾನು. ಈಗ ಮೆಸ್ಸಿ ಇಷ್ಟ. ಡ್ರಿಬ್ಲಿಂಗ್‌ ಕೌಶಲದಲ್ಲಿ ಅವ ರನ್ನು ಹಿಂದಿಕ್ಕುವ ಮತ್ತೊಬ್ಬ ಆಟಗಾರ ಸದ್ಯ ಯಾವುದೇ ತಂಡದಲ್ಲಿಲ್ಲ’ ಎಂದು ಬ್ಯಾಡ್ಮಿಂಟನ್‌ ಆಟಗಾರ ಎಚ್‌. ಎಸ್‌. ಪ್ರಣಯ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry