7
ಅಂತರರಾಷ್ಟ್ರೀಯ ಮಾಜಿ ಆಟಗಾರ ಮೈಸೂರಿನ ನೋಯೆಲ್‌ ವಿಲ್ಸನ್‌ ಫುಟ್‌ಬಾಲ್‌ ಪ್ರೀತಿ

ಫುಟ್‌ಬಾಲ್‌ಗಳಿಂದ ಮನೆ ಅಲಂಕಾರ

Published:
Updated:
ಫುಟ್‌ಬಾಲ್‌ಗಳಿಂದ ಮನೆ ಅಲಂಕಾರ

ಮೈಸೂರು: ರಷ್ಯಾದಲ್ಲಿ ನಡೆಯುತ್ತಿರುವ ಫುಟ್‌ಬಾಲ್‌ ವಿಶ್ವಕಪ್‌ ದಿನೇದಿನೇ ಕ್ರೀಡಾಪ್ರೇಮಿಗಳ ಕುತೂಹಲ ಹೆಚ್ಚಿಸುತ್ತಿದ್ದರೆ, ಇತ್ತ ಮೈಸೂರಿನಲ್ಲಿ ಫುಟ್‌ಬಾಲ್‌ ಆಕೃತಿಗಳಿಂದ ಅಲಂಕರಿಸಿರುವ ಮನೆಯೊಂದು ಕ್ರೀಡಾಪ್ರೇಮಿಗಳ ಗಮನ ಸೆಳೆಯುತ್ತಿದೆ.

ಅಂತರರಾಷ್ಟ್ರೀಯ ಮಾಜಿ ಆಟಗಾರ ನೋಯೆಲ್‌ ವಿಲ್ಸನ್ ಅವರು ಎನ್‌.ಆರ್‌.ಮೊಹಲ್ಲಾದಲ್ಲಿರುವ ತಮ್ಮ ಮನೆಯನ್ನು ಫುಟ್‌ಬಾಲ್‌ ಆಕಾರದ 105 ಕಲಾಕೃತಿ ಬಳಸಿ ಶೃಂಗರಿಸಿದ್ದಾರೆ.‌ ಮನೆಯೊಳಗೆ ಫುಟ್‌ಬಾಲ್‌ ವಸ್ತು ಸಂಗ್ರಹಾಲಯವನ್ನೇ ನಿರ್ಮಿಸಿದ್ದಾರೆ.‌

‘ಫುಟ್‌ಬಾಲ್‌ ಮನೆ’ ಎಂದೇ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಫುಟ್‌ಬಾಲ್‌ ಒದೆಯಲು ನೋಯೆಲ್‌ ಸಿದ್ಧವಾಗಿ ನಿಂತಿರುವ ಚಿತ್ರವು ನಿವಾಸದ ಮುಖ್ಯ ಬಾಗಿಲಿನ ಮೇಲೆ ಕಲಾಕೃತಿಯಾಗಿ ಅರಳಿದೆ. ಎರಡು ಅಂತಸ್ತುಗಳ ಈ ಮನೆಯ ಗೇಟ್‌, ಗೋಡೆ, ಕಿಟಕಿ, ಮಹಡಿ ಮೆಟ್ಟಿಲು, ಗಡಿಯಾರ, ನೀರಿನ ಟ್ಯಾಂಕ್‌, ಬಾಲ್ಕನಿ ಗ್ರಿಲ್‌ ಮೇಲೆ ಫುಟ್‌ಬಾಲ್‌ ರೀತಿ ವಿನ್ಯಾಸ ಮಾಡಲಾಗಿದೆ. ಗೇಟಿನ ಮೇಲೆ 6 ಅಡಿ ಸುತ್ತಳತೆಯ ಫುಟ್‌ಬಾಲ್‌ ಆಕೃತಿಯನ್ನು ಅಳವಡಿಸಲಾಗಿದೆ.

ಮನೆಯೊಳಗೆ ವಿಶ್ವ ಶ್ರೇಷ್ಠ ಫುಟ್‌ಬಾಲ್‌ ಆಟಗಾರರ ಪೋಸ್ಟರ್‌ಗಳು, ಛಾಯಾಚಿತ್ರಗಳು, ಟ್ರೋಫಿಗಳು, ನೋಯೆಲ್‌ ಅವರ ಸಾಧನೆ ಬಿಂಬಿಸುವ ಚಿತ್ರಗಳು, ಪಡೆದ ಪ್ರಶಸ್ತಿಗಳ ದೊಡ್ಡ ಸಂಗ್ರಹವೇ ಇದೆ. ಇದು ಫುಟ್‌ಬಾಲ್‌ ಮೇಲಿನ ಅಭಿಮಾನ ಹಾಗೂ ಪ್ರೀತಿಯನ್ನು ಬಿಚ್ಚಿಡುತ್ತದೆ.

‘ಚಿಕ್ಕಂದಿನಿಂದಲೂ ನನಗೆ ಫುಟ್‌ಬಾಲ್‌ ಎಂದರೆ ಪಂಚಪ್ರಾಣ. ಆ ಪ್ರೀತಿಯೇ ನನ್ನನ್ನು ಅಂತರರಾಷ್ಟ್ರೀಯ ಆಟಗಾರನಾಗಿ ರೂಪಿಸಿತು. ಅಷ್ಟೇ ಅಲ್ಲ; ಜೀವನವನ್ನೇ ಬದಲಾಯಿಸಿತು. ಪೋಷಕರು ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡಿದರು. ಇದು ಇಂಥ ಮನೆ ನಿರ್ಮಾಣಕ್ಕೆ ಪ್ರೇರಣೆ ನೀಡಿತು’ ಎನ್ನುತ್ತಾರೆ ನೋಯೆಲ್‌ ವಿಲ್ಸನ್‌.

37 ವರ್ಷ ವಯಸ್ಸಿನ ನೋಯೆಲ್‌ ಅವರು ಟಾಟಾ ಫುಟ್‌ಬಾಲ್‌ ಅಕಾಡೆಮಿ, ಕೊಚ್ಚಿನ್‌ ಫುಟ್‌ಬಾಲ್‌ ಕ್ಲಬ್‌, ಚರ್ಚಿಲ್‌ ಬ್ರದರ್ಸ್‌, ಮೋಹನ್‌ ಬಾಗನ್‌, ಮಹಮ್ಮಡನ್‌ ಸ್ಪೋರ್ಟಿಂಗ್‌, ಮುಂಬೈ ಫುಟ್‌ಬಾಲ್‌ ಕ್ಲಬ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ.

300ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಈ ಮಿಡ್‌ಫೀಲ್ಡರ್‌ 40ಕ್ಕೂ ಅಧಿಕ ಗೋಲು ದಾಖಲಿಸಿದ್ದಾರೆ. 1998ರಲ್ಲಿ ಬ್ರಿಸ್ಟಲ್‌ ಫ್ರೀಡಂ ಕಪ್‌ ಹಾಗೂ 2002ರ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅವರೀಗ ಎಎಫ್‌ಸಿ ವೃತ್ತಿಪರ ಕೋಚ್‌ ಆಗಿದ್ದು, ರೂಟ್ಸ್‌ ಫುಟ್‌ಬಾಲ್‌ ಅಕಾಡೆಮಿಯಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.

*

ಫುಟ್‌ಬಾಲ್‌ ಕ್ರೀಡೆ ಮೇಲೆ ನಮ್ಮ ಕುಟುಂಬ ವಿಶೇಷ ಅಭಿಮಾನ ಹೊಂದಿದೆ. ಕುಟುಂಬದ ಕೆಲವರು ವಿವಿಧ ಹಂತದಲ್ಲಿ ಫುಟ್‌ಬಾಲ್‌ ಆಡಿದ್ದಾರೆ.

-ನೋಯೆಲ್‌ ವಿಲ್ಸನ್‌, ಫುಟ್‌ಬಾಲ್‌ ಆಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry