ಗಮನ ಸೆಳೆದ ಗೊಂಬೆ ಕಲ್ಯಾಣ

7
ಪಾರ್ವತಿ– ಪರಮೇಶ್ವರರ ಅದ್ಧೂರಿ ವಿವಾಹ; ಹೊಟ್ಟೆ ತುಂಬಾ ಸಿಹಿಯೂಟ

ಗಮನ ಸೆಳೆದ ಗೊಂಬೆ ಕಲ್ಯಾಣ

Published:
Updated:
ಗಮನ ಸೆಳೆದ ಗೊಂಬೆ ಕಲ್ಯಾಣ

ಹುಬ್ಬಳ್ಳಿ: ಮಂಗಳವಾದ್ಯ, ಮಂತ್ರಘೋಷ ಮೊಳಗುವ ವೇಳೆ ವರ ತಾಳಿ ಕಟ್ಟುತ್ತಿದ್ದಂತೆ ಬಂಧು– ಬಾಂಧವರು ಅಕ್ಷತೆ ಹಾಕಿ ಹರಸಿದರು. ಎರಡೂ ಕಡೆಯವರ ಮನದಲ್ಲಿ ಸಂತೋಷ, ಪಾರ್ವತಿ– ಪರಮೇಶ್ವರರ ವಿವಾಹ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡ ಸಮಾಧಾನ.

ಯಾರು ಈ ಪಾರ್ವತಿ– ಪರಮೇಶ್ವರ, ಅಷ್ಟಕ್ಕೂ ಅವರು ಮದುವೆಯಾದರೆ ಅದರಲ್ಲೇನಿದೆ ವಿಶೇಷ ಅಂತೀರಾ? ಖಂಡಿತವಾಗಿಯೂ ಇದು ಗಂಡು– ಹೆಣ್ಣಿನ ಮದುವೆಯಲ್ಲ, ಅದನ್ನೂ ಮೀರಿಸುವಂತೆ ನಡೆದ ಗೊಂಬೆಗಳ ಮದುವೆ.

ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಬಾನಿ ಓಣಿ ಬಂಧುಗಳು ನೆರವೇರಿಸಿದ ಗೊಂಬೆಗಳ ಮದುವೆ. ಓಣಿ  ಜನರ ಒಳಿತಿಗಾಗಿ ಮಾಡಿದ ಈ ವಿವಾಹ ಸಮಾರಂಭಕ್ಕೆ ನೂರಾರು ಮಂದಿ ಸಾಕ್ಷಿಯಾದರು. ಮನಸಾರೆ ಹಾರೈಸಿ, ಹೊಟ್ಟೆ ತುಂಬಾ ಸಿಹಿಯೂಟ ಉಂಡು ಸಂತಸಪಟ್ಟರು.

ಮದುವೆಯಷ್ಟೇ ಅಲ್ಲ, ಅದರ ಹಿನ್ನೆಲೆಯೂ ಕುತೂಹಲಕಾರಿಯಾಗಿದೆ. ಓಣಿಯ ಹಿರಿಯರಾದ ಯಲ್ಲಮ್ಮ ಗುರಪ್ಪ ಶಿರಕೋಳ ಈ ಮದುವೆಗೆ ಪ್ರೇರಣೆ . 87 ವರ್ಷ ವಯಸ್ಸಿನ ಅವರು ತಮ್ಮ 7ನೇ ವಯಸ್ಸಿನಲ್ಲಿ ಗೊಂಬೆಗಳ ಮದುವೆ ನೋಡಿದ್ದರು, ಆ ಸಂಭ್ರಮವನ್ನು ಮನಸಾರೆ ಅನುಭವಿಸಿದ್ದರು. ಮಳೆಯಾಗಲಿ, ಸುಭಿಕ್ಷೆ ಇರಲಿ ಎಂದು ಆಗ ಮದುವೆ ಮಾಡಲಾಗಿತ್ತು.

ಕೆಲ ದಿನಗಳ ಹಿಂದೆ ಅದೇಕೋ ಆ ಸಂಭ್ರಮವನ್ನು ಅವರು ನೆನಪಿಸಿಕೊಂಡರು. ತಾವು ಅನುಭವಿಸಿದ್ದ ಸಂತೋಷ ಓಣಿಯ ಜನರಿಗೂ ಸಿಗಬೇಕು. ಈ ಪೀಳಿಗೆಯವರಿಗೆ ಅಂತಹ ಒಂದು ಆಚರಣೆಯ ಬಗ್ಗೆಯೂ ಮಾಹಿತಿ ಸಿಗಬೇಕು ಹಾಗೂ ಜನರೆಲ್ಲ ನೆಮ್ಮದಿಯಿಂದ ಬದುಕಬೇಕು ಎಂದುಕೊಂಡು ಗೊಂಬೆಗಳ ಮದುವೆಗೆ ಮುಂದಾದರು.

ಹಿರಿಯ ಜೀವದ ಕಾಳಜಿ, ಆಸೆಗೆ ಎಲ್ಲರೂ ಸೈ ಎಂದರು. ನೈಜ ವಿವಾಹ ಸಮಾರಂಭವನ್ನೂ ಮೀರಿಸುವ ಗೊಂಬೆಗಳ ಕಲ್ಯಾಣಕ್ಕೆ ಎರಡು ತಿಂಗಳಿನಿಂದ ಸಿದ್ಧತೆ ಆರಂಭವಾಗಿತ್ತು. ಎಲ್ಲವೂ ಅಂದುಕೊಂಡಂತೆಯೇ ನಡೆಯಿತು.

ಮದುವೆಯ ಹಿಂದಿನ ದಿನ ವಧು– ವರರ ಅದ್ಧೂರಿ ಮೆರವಣಿಗೆ ಸಹ ನಡೆಯಿತು. ಬಂಧು– ಬಾಂಧವರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬ್ಯಾಂಡ್– ಬಾಜಾ ಮೆರವಣಿಗೆಯ ಜೋಶ್‌ ಹೆಚ್ಚಿಸಿತ್ತು. ಅರಿಸಿನ ಶಾಸ್ತ್ರ ಸಹ ಮಾಡಲಾಯಿತು. ಮರು ದಿನ ಬೆಳಿಗ್ಗೆ ಸಹ ವಿವಿಧ ಶಾಸ್ತ್ರಗಳು ನಡೆದವು. ಮಧ್ಯಾಹ್ನ 12.25ರ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆಯಿತು.

ಆ ನಂತರ ವಧು– ವರರ ರಿಸೆಪ್ಷನ್ ವಿಡಿಯೊ, ಫೋಟೊ ಎಲ್ಲವೂ ಇತ್ತು. ವಿವಾಹ ಸಮಾರಂಭದಲ್ಲಿ ಪಾಲ್ಗೊಂಡವರಿಗೆ ಶಿರಾ, ಅನ್ನ– ಸಾಂಬಾರ್, ಪಲ್ಯ, ಹಪ್ಪಳ, ಸಂಡಿಗೆಯ ಭರ್ಜರಿ ಊಟ ಸಹ ಹಾಕಿದರು.

ಸಂಪ್ರದಾಯದಂತೆ ವಧುವಿಗೆ ಅಡುಗೆ ಮನೆಯ ಸಲಕರಣೆ, ಪಾತ್ರೆಗಳನ್ನು ನೀಡಲಾಯಿತು. ವರನಿಗೆ ಕಾರು, ಬುಲೆಟ್ ಬೈಕ್, ಹೊಚ್ಚ ಹೊಸ ಸ್ಮಾರ್ಟ್ ಫೋನ್ ನೀಡಿದರು. ಹುಡುನಿಗೆ ವಾಚ್‌, ಉಂಗುರ ಹಾಗೂ ಹುಡುಗಿಗೆ ಚಿನ್ನದ ತಾಳಿ, ಕಾಲುಂಗರ ತೊಡಗಿಸಲಾಯಿತು.

ಅತ್ತೆ– ಮಾವನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ

ಓಣಿಯ ಜನರೇ ಎರಡು ಗುಂಪುಗಳಾಗಿ ಇಬ್ಭಾಗವಾಗಿದ್ದರು. ಒಂದು ಗುಂಪು ಹುಡುಗಿಯ ಸಂಬಂಧಿಕರಾದರೆ, ಇನ್ನೊಂದು ಗುಂಪು ಹುಡುಗನ ಸಂಬಂಧಿಕರ ಪಾತ್ರವನ್ನು ನಿರ್ವಹಿಸಿತು. ವಿವಿಧ ಶಾಸ್ತ್ರವನ್ನು ಅವರು ನೆರವೇರಿಸಿದರು.

ಇದೇ ವೇಳೆ ಹುಡುಗನ ಕಡೆಯವರು ವಧುವನ್ನು ಉದ್ದೇಶಿಸಿ ‘ಏ ತಂಗೀ.. ಮಾತು ಕೇಳದಿದ್ದರೆ ಮನೆಗೆ ವಾಪಸ್ ಕಳುಹಿಸುತ್ತೇವೆ’ ಎಂದು ಕಿಚಾ ಯಿಸಿದರು. ಇದಕ್ಕೆ ತಾಳ್ಮೆಯಿಂದಲೇ ಉತ್ತರ ನೀಡಿದ ವಧುವಿನ ಕಡೆಯುವರು, ‘ಅತ್ತೆ– ಮಾವ ಹಾಗೂ ಮನೆಯ ಎಲ್ಲರನ್ನೂ ನಮ್ಮ ಹುಡುಗಿ ತುಂಬಾ ಪ್ರೀತಿ ಯಿಂದ ನೋಡಿಕೊಳ್ಳುತ್ತಾಳೆ’ ಎಂದಾಗ ಎಲ್ಲರ ಮುಖದಲ್ಲಿ ನಗು ಮೂಡಿತು.

ಚಿಕ್ಕವಳಿದ್ದಾಗ ‍ಪಟ್ಟೆಗಾರರು ಮಾಡಿದ ಗೊಂಬೆ ಮದುವೆ ನೋಡಿದ್ದೆ. ನಮ್ಮ ಓಣಿಯ ಜನರೂ ಅದನ್ನು ನೋಡಬೇಕು ಎಂಬ ಕಾರಣಕ್ಕೆ ಈ ವಿವಾಹ ನೆರವೇರಿಸಲಾಯಿತು

ಯಲ್ಲಮ್ಮ ಗುರಪ್ಪ, ಶಿರಕೋಳ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry