ಸಂರಕ್ಷಿತ ಸ್ಮಾರಕ ಪಟ್ಟಿಗೆ ಮೋಘಾ ರಾಮಲಿಂಗೇಶ್ವರ

7
ಅವಸಾನ ಅಂಚಿಗೆ ತಲುಪಿದ್ದ ದೇವಸ್ಥಾನಕ್ಕೆ ಸಂರಕ್ಷಣೆ ಭಾಗ್ಯ; ರಾಜ್ಯ ಸರ್ಕಾರದಿಂದ ಘೋಷಣೆ

ಸಂರಕ್ಷಿತ ಸ್ಮಾರಕ ಪಟ್ಟಿಗೆ ಮೋಘಾ ರಾಮಲಿಂಗೇಶ್ವರ

Published:
Updated:
ಸಂರಕ್ಷಿತ ಸ್ಮಾರಕ ಪಟ್ಟಿಗೆ ಮೋಘಾ ರಾಮಲಿಂಗೇಶ್ವರ

ಚಿಂಚೋಳಿ: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮೋಘಾ ಗ್ರಾಮದ ದಕ್ಷಿಣ ದಿಕ್ಕಿನಲ್ಲಿ ಕೊಳ್ಳದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ (ಸ್ವಯಂಭು ರಾಮನಾಥ) ದೇವಾಲಯವನ್ನು ಸಂರಕ್ಷಿತ ಸ್ಮಾರಕ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದೆ. ಈ ಮೂಲಕ ತಾಲ್ಲೂಕಿನ ಪ್ರವಾಸಿ ತಾಣವೊಂದಕ್ಕೆ ಮಹತ್ವ ಬಂದಂತಾಗಿದೆ.

ವಿಶಿಷ್ಟ ವಿನ್ಯಾಸ, ಗಟ್ಟಿಮುಟ್ಟಾದ ನಿರ್ಮಾಣ ಕಾರ್ಯ, ಪ್ರಾಚೀನ ಶಾಸನಗಳ ಮೂಲಕ ಈ ದೇವಸ್ಥಾನ ಹೈದರಾಬಾದ್‌ ಕರ್ನಾಟಕ ಭಾಗದಲ್ಲೇ ಗಮನ ಸೆಳೆದಿದೆ. ಭಕ್ತರು ಮಾತ್ರವಲ್ಲ; ಪ್ರವಾಸಿಗರ ಸಂಖ್ಯೆಯೂ ಇಲ್ಲಿ ಹೆಚ್ಚು. ತುಂಬ ದಯನೀಯ ಸ್ಥಿತಿಯಲ್ಲಿದ್ದ ಈ ದೇವಸ್ಥಾನವನ್ನು ರಕ್ಷಿಸುವುದು ತುರ್ತು ಅಗತ್ಯವಾಗಿತ್ತು. ಈಗ ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರಿದ್ದರಿಂದ ಈ ಭಾಗದ ಜನ ನೆಮ್ಮದಿಪಡುವಂತಾಗಿದೆ.

ಚರಿತ್ರೆ: ಪೂರ್ವಾಭಿಮುಖವಾದ ಎತ್ತರದ ಅಧಿಷ್ಠಾನದ ಮೇಲೆ ಬಹು ಕೋನಾಕಾರದ ತಳ ವಿನ್ಯಾಸವುಳ್ಳ ದೇವಾಲಯವು ಗರ್ಭಗುಡಿ, ಅಂತರಾಳ, ನವರಂಗ ಹೊಂದಿದೆ.  ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಬಾಗಿಲವಾಡವು ಪಂಚಶಾಖಾಲಂಕೃತವಾಗಿದೆ. ಬಾಗಿಲ ಬಳಿ ಸುಂದರವಾದ ಚಂದ್ರಶಿಲೆಯಿದೆ. ಅಂತರಾಳದಲ್ಲಿ ಎರಡು ದೇವಕೋಷ್ಠಕಗಳಿದ್ದು ಅವುಗಳಲ್ಲಿ ಗಣಪತಿ ವಿಗ್ರಹ, ನವರಂಗದ ನಾಲ್ಕು ದೇವಕೋಷ್ಠಗಳಲ್ಲಿ ಎರಡರಲ್ಲಿ ಸಪ್ತ ಮಾತೃಕಾ, ಮಹಿಷ ಮರ್ದಿನಿ ಶಿಲ್ಪಗಳಿವೆ.

ನವರಂಗದ ನಡುವಿರುವ ನಾಲ್ಕು ಕಂಬಗಳ ಮೇಲೆ ನಟರಾಜ, ಬ್ರಹ್ಮ, ವಿಷ್ಣು, ಸರಸ್ವತಿ, ಭೈರವಿ, ಗಣಪತಿ, ಉಗ್ರ ನರಸಿಂಹ, ಸೂರ್ಯ, ಭಿಕ್ಷಾಟನಾ ಮೂರ್ತಿ, ನರ್ತಕಿ ಮೊದಲಾದ ಸುಂದರ ಉಬ್ಬು ಕೆತ್ತನೆಗಳು ಆಕರ್ಷಕವಾಗಿವೆ.

ನವರಂಗದ ಅಂಚಿನುದ್ದಕ್ಕೂ ಕಕ್ಷಾಶನವಿದ್ದು ಉತ್ತರ, ದಕ್ಷಿಣ ಮತ್ತು ಪೂರ್ವ ದಿಕ್ಕುಗಳಲ್ಲಿ ಪ್ರವೇಶ ದ್ವಾರಗಳಿವೆ. ಗರ್ಭಗುಡಿಯ ಹೊರ ಭಿತ್ತಿಯಲ್ಲೂ ದೇವಕೋಷ್ಠಕಗಳಿವೆ. ಬ್ರಹ್ಮ, ವಿಷ್ಣು, ಮಹೇಶ್ವರ ಶಿಲ್ಪಗಳು ಇದರಲ್ಲಿವೆ. ಈ ದೇವಾಲಯವನ್ನು ಯಾರ ಕಾಲದಲ್ಲಿ ನಿರ್ಮಿಸಲಾಗಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.

ಕಳಚೂರಿಗಳ ಕಾಲಕ್ಕೆ ಸೇರಿದ್ದ ಶಾಸನವೊಂದು ದೇವಾಲಯದಲ್ಲಿ ಎರಡು ತುಂಡಾಗಿ ಬಿದ್ದಿದೆ. ಇದು 1170ರಲ್ಲಿ ಅನಾದಿ ಅಗ್ರಹಾರ ಮೋಘಾ (ಮೈಘೇಹದ) ಸ್ವಯಂಭು ರಾಮನಾಥ ದೇವಾಲಯ ಹಾಗೂ ರಾಮತೀರ್ಥವನ್ನು ವಾಸಪ್ಪಯ್ಯ ದಂಡನಾಯ್ಕನು ಮಾಡಿಸಿದಾಗ ಮಹಾಮಂಡಲೇಶ್ವರ ವೀರಗೊಂಕರಸ, ರಾಣಿ ಮೈಳಲದೇವಿ ಹಾಗೂ ಕುಮಾರ ಮಲ್ಲದೇವರಸರು ಮೈಘೆಯ ದೇಗುಲಕ್ಕೆ ದಾನಕೊಟ್ಟ ವಿಷಯವನ್ನು ಶಾಸನದಲ್ಲಿ ವಿವರಿಸಲಾಗಿದೆ.

ಇಲ್ಲಿ ಸ್ನಾನಕ್ಕೆ. ಪೂಜೆ(ತೀರ್ಥ)ಗೆ ಮತ್ತು ಪ್ರಸಾದ ತಯಾರಿಸಲು ಪ್ರತ್ಯೇಕ ಮೂರು ಪುಷ್ಕರಣಿ(ಗುಂಡ)ಗಳಿವೆ. ಇವುಗಳ ಸುತ್ತಲಿನ ಗೋಡೆ ಉರುಳುತ್ತಿವೆ.  ಪುಷ್ಕರಣಿಗಳಲ್ಲಿ ಹೂಳು ತುಂಬಿವೆ, ಪುಷ್ಕರಣಿಯ ಸುತ್ತು ಗೋಡೆಯಲ್ಲೂ ದೇವಕೋಷ್ಠಕಗಳಿದ್ದು ಅವುಗಳಲ್ಲಿ ಅನಂತ ಪದ್ಮನಾಭನ ಮೂರ್ತಿಗಳು, ವಿಷ್ಣುವಿನ ಶಿಲ್ಪಗಳಿವೆ.

ದೇವಾಲಯದ ಗೋಪುರವು ಪುರಿ ಜಗನ್ನಾಥ ದೇವಾಲಯದ ಗೋಪುರವನ್ನು ಹೋಲುತ್ತದೆ. ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ನಿಧಿ ಆಸೆಗಾಗಿ ಕಳ್ಳರು ಮೂರು ಬಾರಿ ಕಿತ್ತಿದ್ದಾರೆ.

ದೇವಾಲಯ ಈಗ ಅವಸಾನದತ್ತ ಸಾಗಿದೆ. ಎತ್ತರವಾದ ಗೋಪುರ ಮತ್ತು ಸುಂದರವಾದ ಔತ್ತರೇಯ(ಭೂಮಿಜ)ಶಿಖರವಿದೆ. ಕೊನೆಯಲ್ಲಿ ಶಿವ ಪಾರ್ವತಿ, ವಿಷ್ಣು ಸೇರಿದಂತೆ ವಿವಿಧ ದೇವತೆಗಳ ಕಲ್ಲಿನಲ್ಲಿ ಕೆತ್ತಿದ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ ಗೋಪುರ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಶಿಖರದ ಸುತ್ತ ಪ್ರತಿಷ್ಠಾಪಿಸಿರುವ ದೇವತೆಗಳ ಮೂರ್ತಿಗಳು ಒಂದೊಂದಾಗಿ ಕೆಳಗೆ ಬೀಳುತ್ತಿವೆ ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡ ಭೀಮಶೇನರಾವ್‌ ಕುಲಕರ್ಣಿ.

ದೇವಾಲಯ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಛತ್ತಿನಿಂದ ಕಲ್ಲುಗಳು ಒಂದೊಂದಾಗಿ ಬೀಳುತ್ತಿವೆ. ಬಹುತೇಕ ಗೋಡೆಗಳು ಬಾಯಿ ತೆರೆದಿದ್ದು ಉತ್ತರ ದಿಕ್ಕಿನಲ್ಲಿರುವ ಪ್ರವೇಶ ದ್ವಾರದ ಹತ್ತಿರದ ತೀರ್ಥಗುಂಡಕ್ಕೆ ಹೋಗುವ ದಾರಿಯಲ್ಲಿರುವ ಕಂಬ ವಾಲಿದೆ.

ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಮುಂದಿನ ಪೀಳಿಗೆಗೆ ನಮ್ಮ ಚರಿತ್ರೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಡಲು ಸರ್ಕಾರ ಮುಂದಾಗಬೇಕು

- ಭೀಮಶೇನರಾವ್‌ ಕುಲಕರ್ಣಿ, ಮುಖ್ಯಸ್ಥರು, ದೇವಾಲಯ ಸದ್ಭಕ್ತ ಮಂಡಳಿ

ಜಗನ್ನಾಥ ಡಿ. ಶೇರಿಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry