ರೇಸ್‌ ಕೋರ್ಸ್‌ನಲ್ಲಿ ಯೋಗ ತಾಲೀಮು

7
21ರಂದು ಯೋಗ ದಿನಾಚರಣೆ–ಮತ್ತೊಮ್ಮೆ ದಾಖಲೆಗೆ ಪ್ರಯತ್ನ

ರೇಸ್‌ ಕೋರ್ಸ್‌ನಲ್ಲಿ ಯೋಗ ತಾಲೀಮು

Published:
Updated:

ಮೈಸೂರು: ಜೂನ್‌ 21ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ಅರಮನೆಗಳ ನಗರಿಯಲ್ಲಿ ತಾಲೀಮು ಮತ್ತಷ್ಟು ಬಿರುಸುಗೊಂಡಿದೆ.

ಜಿಲ್ಲಾಡಳಿತವು ನಗರದ ರೇಸ್‍ ಕೋರ್ಸ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಯೋಗ ತಾಲೀಮಿನಲ್ಲಿ ಸುಮಾರು 10 ಸಾವಿರ ಯೋಗ ಉತ್ಸಾಹಿಗಳು ಭಾಗವಹಿಸಿದ್ದರು.‌

ಯೋಗ ತರಬೇತಿ ಕೇಂದ್ರಗಳ ಯೋಗಪಟುಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ವಿವಿಧ ಇಲಾಖೆಗಳ ನೌಕರರು ಪಾಲ್ಗೊಂಡಿದ್ದರು.

7ರಿಂದ 7.45ರವರೆಗೆ ನಡೆದ ತಾಲೀಮಿನಲ್ಲಿ ಸುಮಾರು 19 ಆಸನಗಳನ್ನು ಪ್ರದರ್ಶಿಸಲಾಯಿತು. ಯೋಗ ಗುರುಗಳು ಧ್ವನಿವರ್ಧಕಗಳ ಮೂಲಕ ಮಾರ್ಗದರ್ಶನ ನೀಡಿದರು.

‘ಈ ಬಾರಿಯೂ ಮೈಸೂರು ಗಿನ್ನಿಸ್ ದಾಖಲೆ ಮಾಡಲಿದೆ. ಯೋಗ ದಿನಾಚರಣೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಭರವಸೆ ನೀಡಿದರು.

ಸಾ.ರಾ.ಮಹೇಶ್‌, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ ಅವರು ಯೋಗಾಭ್ಯಾಸ ನಡೆಸಿದರು. ವಿವಿಧ ಆಸನಗಳನ್ನು ಪ್ರದರ್ಶಿಸಿದರು.

21ರಂದು ಸುಮಾರು 70 ಸಾವಿರ ಜನರಿಂದ ಯೋಗಾಸನ ಪ್ರದರ್ಶಿಸಿ ಗಿನ್ನಿಸ್‌ ದಾಖಲೆ ಬರೆಯುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಇದಕ್ಕಾಗಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಮೂರು ಬಾರಿ ತಾಲೀಮು ನಡೆದಿದೆ. ಆನ್‌ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಗಿನ್ನಿಸ್‌ ದಾಖಲೆ ಪ್ರತಿನಿಧಿಗಳ ಜೊತೆ ಜಿಲ್ಲಾಡಳಿತ ಮಾತುಕತೆ ನಡೆಸಿಲ್ಲ ಎನ್ನಲಾಗಿದೆ. ಹೀಗಾಗಿ, ಈ ಬಾರಿ ದಾಖಲೆ ಸಾಧ್ಯವಿಲ್ಲ ಎಂಬುದು ತಿಳಿದುಬಂದಿದೆ.

ಕಳೆದ ವರ್ಷ ಅರಮನೆ ಮುಂಭಾಗ ಯೋಗ ಸರಪಳಿ ಪ್ರದರ್ಶನ ನೀಡಲಾಗಿತ್ತು. ಸುಮಾರು 8,381 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಲ್ಲದೆ, ರೇಸ್‌ಕೋರ್ಸ್‌ನಲ್ಲಿ ಒಂದೇ ಕಡೆ ಅತ್ಯಧಿಕ ಯೋಗಪಟುಗಳನ್ನು ಸೇರಿಸಿ ಯೋಗ ಪ್ರದರ್ಶನ ನೀಡಿದ್ದು, ಗಿನ್ನಿಸ್‌ ದಾಖಲೆಗೆ ‍ಪಾತ್ರವಾಗಿತ್ತು. ಅಂದಿನ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 55,506 ಮಂದಿ ಪಾಲ್ಗೊಂಡಿದ್ದರು. 170 ತರಬೇತುದಾರರು ಮಾರ್ಗದರ್ಶನ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry