‘ಮಂಜಿನ ನಗರಿ’ಯತ್ತ ಪ್ರವಾಸಿಗರ ಲಗ್ಗೆ

7
ರಾಜಾಸೀಟ್‌ಗೆ ಮಂಜಿನ ಹೊದಿಕೆ, ಜಲಪಾತಗಳಿಗೆ ಜೀವಕಳೆ

‘ಮಂಜಿನ ನಗರಿ’ಯತ್ತ ಪ್ರವಾಸಿಗರ ಲಗ್ಗೆ

Published:
Updated:
‘ಮಂಜಿನ ನಗರಿ’ಯತ್ತ ಪ್ರವಾಸಿಗರ ಲಗ್ಗೆ

ಮಡಿಕೇರಿ: ಮಳೆಗೆ ಹಸಿರಾದ ಕಾನನ, ನದಿ– ತೊರೆಗಳಲ್ಲಿ ಉಕ್ಕುತ್ತಿರುವ ನೀರು, ಜಲಪಾತಗಳಿಗೆ ಜೀವಕಳೆ, ರಾಜಾಸೀಟ್‌ಗೆ ಮಂಜಿನ ಹೊದಿಕೆ...  ಇವೆಲ್ಲವನ್ನೂ ಕಣ್ತುಂಬಿಕೊಳ್ಳಲು ನೀವು ಮಡಿಕೇರಿಗೇ ಬರಬೇಕು.

ಹೌದು, ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಸುರಿಯುತ್ತಿರುವ ಮಳೆಗೆ ಇಡೀ ‘ಮಂಜಿನ ನಗರಿ’ ತುಂಬೆಲ್ಲಾ ಹಸಿರು ಮೇಳೈಸಿದೆ. ನಗರದ ಹತ್ತಿರವಿರುವ ತಾಣಗಳಿಗೆ ಪ್ರವಾಸಿಗರು ಲಗ್ಗೆಯಿಡುತ್ತಿದ್ದು, ವಾರಾಂತ್ಯದಲ್ಲಿ ಜನದಟ್ಟಣೆ ಕಂಡುಬರುತ್ತಿದೆ.

ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದಕ್ಕೂ ಮೊದಲೇ ನಿಮ್ಮನ್ನು ಮಂಜಿನ ನಗರಿಯೇ ಮುದಗೊಳಿಸಲಿದೆ. ಒಮ್ಮೆ ಸುದರ್ಶನ ವೃತ್ತದಿಂದ ಒಳ ಪ್ರವೇಶಿಸಿದರೆ, ಕಡಿದಾದ ಬೆಟ್ಟಗಳ ಮೇಲಿರುವ ಮನೆಗಳನ್ನು ನೋಡುವುದೇ ಒಂದು ಆನಂದ. ತುಂತುರು ಮಳೆ, ಮನೆಗಳಿಗೆ ತಾಕಿದಂತೆ ಕಾಣುವ ಮಂಜು, ಮೋಡಗಳ ಪಿಸುಮಾತು... ಇವೆಲ್ಲವನ್ನೂ ನೋಡಿದ ಬಳಿಕ ನಿಮ್ಮನ್ನು ಆಕರ್ಷಿಸಲು ರಾಜಾಸೀಟ್‌ ಸಜ್ಜಾಗಿ ನಿಂತಿದೆ. ಮಳೆಯ ನಡುವೆ ರಾಜಾಸೀಟ್‌ ವೀಕ್ಷಣೆ ಮಾಡಬೇಕು.

ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಎರಡು ಬಾರಿ ರಾಜಾಸೀಟ್‌ಗೆ ಹೊಂದಿಕೊಂಡಿದ್ದ ಅರಣ್ಯ ಪ್ರದೇಶವು ಬೆಂಕಿಗೆ ಆಹುತಿಯಾಗಿತ್ತು. ಅಮೂಲ್ಯ ಸಸ್ಯಕಾಶಿ ಸುಟ್ಟು ಕರಕಲಾಗಿತ್ತು. ಇದೀಗ ಮೇ ಅಂತ್ಯದಿಂದ ಬೀಳುತ್ತಿರುವ ಹದಮಳೆಗೆ ಎಲ್ಲೆಲ್ಲೂ ಹಸಿರು ಉಕ್ಕುತ್ತಿದೆ. ನಿಜವಾದ ಕೊಡಗಿನ ಸೌಂದರ್ಯ ಆಸ್ವಾದನೆಗೆ ಹೇಳಿ ಮಾಡಿಸಿದ ಜಾಗದಂತೆ ರಾಜಾಸೀಟ್‌ ಕಣ್ಣಿಗೆ ಬೀಳುತ್ತಿದೆ. ಕಳೆದೆರಡು ವಾರಗಳಿಂದ ಈ ತಾಣಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯೂ ಇಮ್ಮಡಿಯಾಗಿದೆ. ‘ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ...’ ಎಂಬ ಪಂಜೆಮಂಗೇಶರಾಯರ ಕವಿವಾಣಿ ಇಲ್ಲಿ ನಿಂತು ನೋಡಿದರೆ ನೆನಪಾಗುತ್ತದೆ. ಈಗಂತೂ ವೀಕ್ಷಣಾ ಗೋಪುರದಲ್ಲಿ ಮಳೆಯ ಹನಿ, ಕೊರೆಯುವ ಚಳಿಗೆ ಮೈಯೊಡ್ಡಿ ನಿಂತು ತಮ್ಮ ನೆನಪುಗಳ ಲಹರಿಯಲ್ಲಿ ತೇಲುವವರು ಹೆಚ್ಚಾಗಿದ್ದಾರೆ. ಜತೆಗೆ, ಕೊಡಗಿನ ಮಳೆಗೆ ಪ್ರೇಮಿಗಳೂ ಮೈಯೊಡ್ಡಿ ವಿಹರಿಸುತ್ತಿದ್ದಾರೆ.

ಓಂಕಾರೇಶ್ವರ ದೇಗುಲದ ಕಲ್ಯಾಣಿ ಮಳೆಗೆ ಭರ್ತಿಯಾಗಿದೆ. ಕಲ್ಯಾಣಿ ಪಕ್ಕದಲ್ಲಿ ನಿಂತರೆ ಮೀನುಗಳು ಪಕ್ಕದಲ್ಲಿಯೇ ಓಡಾಡಿದ ಅನುಭವ ಆಗಲಿದೆ. ಅಲ್ಲಿಂದ ಮಹದೇವಪೇಟೆ ಸಮೀಪದ ಗದ್ದುಗೆಯ ಉದ್ಯಾನ ಹಸಿರಾಗಿ ಸಜ್ಜಾಗಿದೆ. ಅಲ್ಲಿಗೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹೆಜ್ಜೆ ಹಾಕುತ್ತಿದ್ದಾರೆ.

ಅಲ್ಲಿಂದ ನಾಲ್ಕೈದು ಕಿಲೋ ಮೀಟರ್‌ ಮುಂದಕ್ಕೆ ಸಾಗಿದರೆ ಅಬ್ಬಿ ಜಲಪಾತವೂ ಮಳೆಗೆ ಜೀವಕಳೆ ಪಡೆದುಕೊಂಡು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಾಫಿ ತೋಟಗಳ ಮಧ್ಯೆ ಕಲ್ಲುಬಂಡೆಗಳ ಮೇಲೆ ವಯ್ಯಾರ ಬೀರುತ್ತಾ ಹಾಲ್ನೊರೆಯಂತೆ ಅಬ್ಬಿ ಧುಮ್ಮಿಕ್ಕುತ್ತಿದ್ದಾಳೆ.

ತನ್ನೆಲ್ಲಾ ಕಲ್ಮಶವನ್ನು ತೊಳೆದುಕೊಂಡು ಈಗ ಸ್ವಚ್ಛವಾಗಿ ಮೇಲಿಂದ ಜಲಧಾರೆಯಾಗಿ ಬೀಳುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಶನಿವಾರ, ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಬ್ಬಿ ಜಲಪಾತದ ಸೊಬಗು ಅಸ್ವಾದಿಸಿದರು. ಮಾದಲ್‌ಪಟ್ಟಿಯಲ್ಲಿ ನಿಂತರೆ ಸಾಕು ಮೋಡಗಳು ನಮಗೆ ಮುತ್ತಿಕ್ಕಿದಂಥ ಅನುಭವ ಆಗುತ್ತದೆ. ಇಲ್ಲಿಗೂ ಪ್ರವಾಸಿಗರು ಹೆಜ್ಜೆ ಹಾಕುತ್ತಿದ್ದಾರೆ.

ಮಳೆಗಾಲದಲ್ಲಿ ಕೊಡಗಿನ ಹೋಂ ಸ್ಟೇಗಳಿಗೆ ಭಾರಿ ಡಿಮ್ಯಾಂಡ್‌. ಮಳೆಗಾಲದ ಸವಿ ಅನುಭವಿಸಲು ಕೊಡಗು ಜಿಲ್ಲೆಯತ್ತ ಹೆಚ್ಚು ಹೆಚ್ಚು ಪ್ರವಾಸಿಗರು ಬರುತ್ತಾರೆ.

ಇದೇ ಸಂದರ್ಭ ಬಳಸಿಕೊಂಡು ಮಧ್ಯವರ್ತಿಗಳು ಹಾಗೂ ಹೋಂಸ್ಟೇ ಮಾಲೀಕರು ದುಪ್ಪಟ್ಟು ದರ ವಿಧಿಸುತ್ತಿದ್ದಾರೆ.

ಪ್ರತಿ ಮಳೆಗಾಲದಲ್ಲೂ ಮಡಿಕೇರಿಗೆ ಬರುತ್ತೇನೆ. ಇಲ್ಲಿ ಬೀಳುವ ಮಳೆಯಲ್ಲಿ ತೊಯ್ದರೆ ಏನೋ ಆನಂದ

– ಕೆ. ಪ್ರಸಾದ್‌, ಸಾಫ್ಟ್‌ವೇರ್‌ ಎಂಜಿನಿಯರ್‌, ಬೆಂಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry