ಸೌಕರ್ಯ ವಂಚಿತ ನವನಗರದ ಸೆಕ್ಟರ್‌ 45

7
ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ನಿವಾಸಿಗಳ ಆಕ್ರೋಶ; ಹಂದಿ, ನಾಯಿಗಳ ಕಾಟಕ್ಕೆ ಬೇಸತ್ತ ಜನ

ಸೌಕರ್ಯ ವಂಚಿತ ನವನಗರದ ಸೆಕ್ಟರ್‌ 45

Published:
Updated:
ಸೌಕರ್ಯ ವಂಚಿತ ನವನಗರದ ಸೆಕ್ಟರ್‌ 45

ಬಾಗಲಕೋಟೆ: ಇಲ್ಲಿನ ನವನಗರದ ಸೆಕ್ಟರ್ ನಂ.45ರ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಶುದ್ಧ ಕುಡಿಯುವ ನೀರು, ಸಮರ್ಪಕ ರಸ್ತೆ ಹಾಗೂ ಗಟಾರಗಳಿಲ್ಲ. ರಸ್ತೆಗಳಲ್ಲಿಯೇ ಹರಿಯುವ ಚರಂಡಿಯ ನೀರು, ಹಂದಿ ಮತ್ತು ನಾಯಿಗಳ ಓಡಾಟದಿಂದ ಇಡೀ ಪ್ರದೇಶ ಮಲಿನಗೊಂಡಿದೆ. ಇದರಿಂದ ಅಲ್ಲಿನ ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದು, ಸಂಬಂಧಪಟ್ಟವರು ಇತ್ತ ಗಮನ ಹರಿಸುತ್ತಿಲ್ಲ ಎಂದು ದೂರುತ್ತಾರೆ.

2013–14ನೇ ಸಾಲಿನ ಬರಪರಿಹಾರ ಅನುದಾನದಡಿ ₹ 2.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ಸ್ಥಗಿತಗೊಂಡಿದೆ. ವರ್ಷಗಳು ಗತಿಸಿದರೂ ಅದರಿಂದ ಹನಿ ನೀರು ಕೂಡ ಉಪಯೋಗಿಸಿಕೊಂಡಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳಾದ ಸೋಮಪ್ಪ ನೀಲನಾಯಕ ಹಾಗೂ ಮಹಾದೇವಪ್ಪ ಹೊದ್ಲೂರ ಬೇಸರ ವ್ಯಕ್ತಪಡಿಸಿದರು.

ಕುಡಿಯುವ ನೀರಿಗೆ ಸಾಕಷ್ಟು ತೊಂದರೆಯಾಗಿದೆ. ಮೂರು–ನಾಲ್ಕು ದಿನಗಳಿಗೊಮ್ಮೆ ಹೊಳೆ ನೀರು ಬಿಡುತ್ತಾರೆ. ಅದು ಪ್ರತಿದಿನ ಬಿಡುವಂತಾಗಬೇಕು. ಕೆಲ ಸಂದರ್ಭಗಳಲ್ಲಿ ಬೋರ್‌ವೆಲ್‌ ನೀರನ್ನೇ ಬಳಸಿಕೊಂಡಿದ್ದೇವೆ. ಅವು ಫ್ಲೋರೈಡ್‌ಯುಕ್ತವಾಗಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಕೆಲವರು ವಾಂತಿ–ಭೇದಿಯಿಂದ ಆಸ್ಪತ್ರೆಗೆ ದಾಖಲಾದ ನಿದರ್ಶನಗಳು ಇವೆ ಎಂದು ಅವರು ಹೇಳಿದರು.

ಇಲ್ಲಿನ ಬಹುತೇಕ ಎಲ್ಲ ರಸ್ತೆಗಳು ಕಿತ್ತುಹೋಗಿವೆ. ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಮೇಲಿನಿಂದ ಹರಿದು ಬರುವ ಚರಂಡಿ ನೀರು ಇಲ್ಲಿನ ಮನೆಗಳ ಮುಂದೆ ಕೆರೆಯಾಗಿ ನಿಲ್ಲುತ್ತದೆ. ಮಳೆಗಾಲ ಆರಂಭವಾಗಿರುವುದರಿಂದ ಮಳೆ ನೀರು ಚರಂಡಿ ನೀರಿನೊಂದಿಗೆ ಸೇರಿ ಮನೆಗಳಿಗೆ ನುಗ್ಗುತ್ತದೆ. ಇದರಿಂದ ಸಾಕಷ್ಟು ಹಾನಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.

ಈ ಬಗ್ಗೆ ನಗರಸಭೆ ಅಧಿಕಾರಿ ಹಾಗೂ ವಾರ್ಡ್ ಸದಸ್ಯರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ನಮ್ಮ ಏರಿಯಾದಲ್ಲಿ ಸ್ವಚ್ಛತೆ ಮಾಡಿಸಿಲ್ಲ, ನಿತ್ಯ ಕುಡಿಯುವ ನೀರು ಕೊಡಲ್ಲ, ಅನೇಕ ಸಲ ಮನವಿ ಮಾಡಿದ್ದೇವೆ. ಆದರೆ ಪ್ರಯೋಜನವಾಗಿಲ್ಲ

ವಿರೂಪಾಕ್ಷಿ ನೀಲನಾಯಕ, ನಿವಾಸಿ 

ಮಹಾಂತೇಶ್ ಮಸಾಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry