ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಗೂಡಾಗಿರುವ ಸರ್ಕಾರಿ ಕಾಲೇಜು

ಎಮ್ಮಿಗನೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ಮೂವರೇ ಬೋಧಕರು
Last Updated 18 ಜೂನ್ 2018, 9:39 IST
ಅಕ್ಷರ ಗಾತ್ರ

ಕಂಪ್ಲಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಮ್ಮಿಗನೂರು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹೆಸರಿಗಷ್ಟೇ ಎಂಬಂತಾಗಿದೆ. ಪ್ರಾಧ್ಯಾಪಕರ ಕೊರತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳು ಕಾಲೇಜಿನಲ್ಲಿ ಇಲ್ಲ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಆದರೆ, ಅವರಿಗೆ ಯಾವುದೇ ಸೂಕ್ತ ಸೌಕರ್ಯಗಳಿರದ ಕಾರಣ ಓದಿಗೆ ಹಿನ್ನಡೆ ಆಗುತ್ತಿದೆ.

ಕಾಲೇಜಿನ ಕಲಾ ವಿಭಾಗದ ಪ್ರಥಮ, ದ್ವಿತೀಯ ವರ್ಷದಲ್ಲಿ 133, ವಾಣಿಜ್ಯ ವಿಭಾಗದಲ್ಲಿ 109 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಪ್ರಾಂಶುಪಾಲರು ಸೇರಿದಂತೆ ಒಟ್ಟು ಐದು ಜನ ಬೋಧಕ ಸಿಬ್ಬಂದಿ ಇದ್ದಾರೆ. ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರು ಬಿ.ಇಡಿ. ಕೋರ್ಸ್‌ಗೆ ರಜೆ ಮೇಲೆ ತೆರಳಿದ್ದಾರೆ. ಸದ್ಯ ಕನ್ನಡ ಹಾಗೂ ಇತಿಹಾಸ ವಿಷಯದ ಪ್ರಾಧ್ಯಾಪಕರಷ್ಟೇ ಇದ್ದಾರೆ.

ಹಾಲಿ ಶೈಕ್ಷಣಿಕ ವರ್ಷ ಮೇ 2ರಿಂದ ಆರಂಭಗೊಂಡಿದೆ. ಸುಮಾರು ಒಂದೂವರೆ ತಿಂಗಳಿಂದ ತರಗತಿಗಳು ಪ್ರಾರಂಭವಾಗಿವೆ. ಹೀಗಿದ್ದರೂ ಬಹುತೇಕ ವಿಷಯಗಳ ಪ್ರಾಧ್ಯಾಪಕರು ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಮಸ್ಯೆ ಎದು
ರಾಗುತ್ತಿದೆ. ಕಾಲೇಜಿನಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರೇ ಇದ್ದಾರೆ. ಅವರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಸಮೀಪದ ಸರ್ಕಾರಿ ಪ್ರೌಢಶಾಲೆಗೆ ಹೋಗುವ ಪರಿಸ್ಥಿತಿ ಇದೆ.

‘ಕಾಲೇಜಿನ ಹಿಂಭಾಗದಲ್ಲಿ ಕಾಂಪೌಂಡ್‌ ಇಲ್ಲ. ಇದರಿಂದ ಗ್ರಾಮಸ್ಥರು ತರಗತಿ ಕೊಠಡಿಗಳಿಗೆ ಹೊಂದಿಕೊಂಡು ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಎಲ್ಲೆಂದರಲ್ಲಿ ತಂಬಾಕು ಜಗಿದು ಉಗಿಯುತ್ತಾರೆ. ಎಲ್ಲೆಡೆ ದುರ್ವಾಸನೆ ಬರುತ್ತದೆ. ತರಗತಿಗಳಲ್ಲಿ ಕುಳಿತು ಪಾಠ ಕೇಳಲು
ಹಿಂಸೆಯಾಗುತ್ತದೆ’ ಎಂದು ವಿದ್ಯಾರ್ಥಿಗಳಾದ ಓಬಳೇಶ್‌, ಉದಯ, ಪವನ್‌, ಜನಾರ್ದನ, ರಾಘವೇಂದ್ರ, ತಿಳಿಸಿದರು.

‘ನೀರಿನ ಟ್ಯಾಂಕ್‌ಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಕುಡಿಯುವ ನೀರು, ಶೌಚಾಲಯಕ್ಕೆ ಸಮಸ್ಯೆ ಆಗುತ್ತಿದೆ. ಉಪನ್ಯಾಸಕರ ಕೊರತೆ ಇರುವುದರಿಂದ ಓದಿಗೆ ತೊಂದರೆ ಆಗುತ್ತಿದೆ’ ಎಂದು ಹೇಳಿದರು.

‘ಕಂಪ್ಲಿ ಸರ್ಕಾರಿ ಕಾಲೇಜಿನಿಂದ ಶೀಘ್ರವೇ ಉಪನ್ಯಾಸಕರು ಬರಲಿದ್ದಾರೆ. ಅತಿಥಿ ಉಪನ್ಯಾಸಕರು ಸ್ವವಿವರ ನೀಡಿದ್ದು, ಕಾಲೇಜು ಸಮಿತಿಯೊಂದಿಗೆ ಚರ್ಚಿಸಿ ನೇಮಕ ಮಾಡಿಕೊಳ್ಳಲಾಗುವುದು. ಕಾಲೇಜಿನಲ್ಲಿ ಗುಮಾಸ್ತ ಹುದ್ದೆ ಖಾಲಿ ಇದೆ. ಸದ್ಯ ಆ ಕೆಲಸ ನಾನೇ ನಿರ್ವಹಿಸುತ್ತಿದ್ದೇನೆ. ಇಷ್ಟೆಲ್ಲ ಕೊರತೆಗಳ ನಡುವೆ ಈ ಬಾರಿ ದ್ವಿತೀಯ ವರ್ಷದ ಪಿಯುಸಿ ಫಲಿತಾಂಶ ಶೇ 89ರಷ್ಟು ಬಂದಿದೆ. ಕಾಲೇಜಿಗೆ ₹ 55 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿ ಮತ್ತು ಶೌಚಾಲಯ ಮಂಜೂರಾಗಿವೆ’ ಎಂದು ಪ್ರಾಂಶುಪಾಲರಾದ ಎ.ಎಂ.ಜಯಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು

ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗೆ ₹ 5 ಲಕ್ಷ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ. ಜು. 15ರ ಒಳಗೆ ಕಾಮಗಾರಿ ಆರಂಭಗೊಳ್ಳಲಿದೆ
ರುದ್ರಯ್ಯ, ‌ಜಿ.ಪಂ ಕಾರ್ಯನಿರ್ವಾಹಕ ಎಂಜಿನಿಯರ್‌ 

ಎಚ್‌.ಎಂ.ಪಂಡಿತಾರಾಧ್ಯ ಮೆಟ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT