ಲಾರಿ ಚಾಲಕರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

7
ಅಗತ್ಯ ವಸ್ತು ಸಾಗಣೆಗೆ ಅಡಚಣೆ ಇಲ್ಲ

ಲಾರಿ ಚಾಲಕರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

Published:
Updated:
ಲಾರಿ ಚಾಲಕರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

ಹುಬ್ಬಳ್ಳಿ: ಡೀಸೆಲ್ ಬೆಲೆ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘ ದೇಶದಾದ್ಯಂತ ಕರೆ ನೀಡಿದ್ದ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಲಾರಿ ಮಾಲೀಕರು ವಾಹನಗಳ ಸಂಚಾರ ನಿಲ್ಲಿಸಿ ಮುಷ್ಕರದಲ್ಲಿ ಪಾಲ್ಗೊಂಡರು. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದ ಲಾರಿಗಳನ್ನು ಸಂಘದ ಸದಸ್ಯರು ತಡೆದು ನಿಲ್ಲಿಸಿದರು. ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನಗಳಿಗೆ ವಿನಾಯಿತಿ ನೀಡಿದರು. ಸರಕು ಹೊತ್ತು ಹೊರಟ್ಟಿದ್ದ ಹೊರ ರಾಜ್ಯದ ಲಾರಿಗಳ ಮೇಲೆ ಸ್ಟಿಕ್ಕರ್ ಅಂಟಿಸಿ, ಸರಕನ್ನು ಇಳಿಸಿದ ನಂತರ ಮತ್ತೆ ತುಂಬುವಂತಿಲ್ಲ ಎಂದು ಎಚ್ಚರಿಕೆ ನೀಡಿ ಕಳುಹಿಸಿದರು.

ಡೀಸೆಲ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಲಾರಿ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಇಂಧನ ಬೆಲೆ ಏರಿಕೆಯಾದ ಹಾಗೆ ಲಾರಿ ಬಾಡಿಗೆಯನ್ನು ಕೂಡಲೇ ಏರಿಕೆ ಮಾಡಲಾಗದು. ಆದ್ದರಿಂದ, ಡೀಸೆಲ್ ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಮೂರನೇ ವ್ಯಕ್ತಿಯ ವಿಮೆಯ ಮೊತ್ತವನ್ನು ಏರಿಕೆ ಮಾಡಿರುವುದು ಸಹ ದೊಡ್ಡ ಹೊರೆಯಾಗಿದೆ. 2002ರಿಂದಲೂ ಅದು ನಿರಂತರವಾಗಿ ಏರುತ್ತಲೇ ಇದೆ ಎಂದು ಪ್ರತಿಭಟನಾಕಾರರು ದೂರಿದರು.

ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ, ಅಗತ್ಯ ವಸ್ತುಗಳ ಸಾಗಣೆ ವಾಹನಗಳನ್ನು ಸಹ ತಡೆಯುವುದು ಅನಿವಾರ್ಯವಾಗಲಿದೆ ಎಂದು ಸಂಘದ ಅಧ್ಯಕ್ಷ ಗೈಬುಸಾಬ್ ಹೊನ್ಯಾಳ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry