‘ಮಿಸ್ಟರ್ ಚೀಟರ್ ರಾಮಾಚಾರಿ’ ಚಿತ್ರ 22ಕ್ಕೆ ತೆರೆಗೆ

7
ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳು ನಿರ್ಮಿಸಿರುವ ಸಿನಿಮಾ

‘ಮಿಸ್ಟರ್ ಚೀಟರ್ ರಾಮಾಚಾರಿ’ ಚಿತ್ರ 22ಕ್ಕೆ ತೆರೆಗೆ

Published:
Updated:
‘ಮಿಸ್ಟರ್ ಚೀಟರ್ ರಾಮಾಚಾರಿ’ ಚಿತ್ರ 22ಕ್ಕೆ ತೆರೆಗೆ

ಹುಬ್ಬಳ್ಳಿ: ‘ತಾಯಿ ಸೆಂಟಿಮೆಂಟ್ ಜತೆಗೆ, ಸಮಕಾಲೀನ ಸಮಸ್ಯೆಗಳ ಸುತ್ತ ಗಿರಕಿ ಹೊಡೆಯುವ ಸಾಮಾಜಿಕ ಕಳಕಳಿ ಹೊಂದಿರುವ ಥ್ರಿಲ್ಲರ್ ಸಿನಿಮಾ ನಮ್ಮದು’ ಎಂದು ‘ಮಿಸ್ಟರ್ ಚೀಟರ್ ರಾಮಾಚಾರಿ’ ಚಲನಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಾಮಾಚಾರಿ ಹೇಳಿದರು.

ಜೂನ್ 22ರಂದು ತೆರೆಗೆ ಬರಲು ಸಿದ್ಧವಾಗಿರುವ ತಮ್ಮ ಚೊಚ್ಚಿಲ ಚಿತ್ರದ ಬಗ್ಗೆ ಚಿತ್ರತಂಡದೊಂದಿಗೆ, ಹುಬ್ಬಳ್ಳಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ಹಂಚಿಕೊಂಡರು.

‘ಉತ್ತರ ಕರ್ನಾಟಕ ಭಾಗದವರೇ ಸೇರಿ ನಿರ್ಮಿಸಿರುವ ಚಿತ್ರ ಇದಾಗಿದೆ. ನಟನಾ ಮತ್ತು ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿರುವವರು ಕೂಡ ಇಲ್ಲಿಯವರೇ. ಪ್ರಧಾನ ನಾಯಕಿ ಇಲ್ಲದ ಚಿತ್ರ ಇದಾಗಿದೆ. ರಾಯಚೂರು, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದು ತಿಳಿಸಿದರು.

‘ಎ’ ಪ್ರಮಾಣಪತ್ರ:

‘ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ಕೆಲ ದೃಶ್ಯಗಳಿವೆ. ಈ ದೃಶ್ಯಗಳ ಧ್ವನಿ (ಮ್ಯುಟ್) ಇಲ್ಲವಾಗಿಸಿದರೆ ‘ಯೂ’ ಪ್ರಮಾಣ ಪತ್ರ ನೀಡುವುದಾಗಿ ಪ್ರಮಾಣೀಕರಣ ಮಂಡಳಿ ಹೇಳಿತ್ತು. ಆ ದೃಶ್ಯಗಳಿಗೆ ದನಿಯೇ ಜೀವಾಳವಾಗಿದ್ದರಿಂದ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ, ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿದೆ. ಆದರೂ, ಸಂಸಾರ ಸಮೇತ ವೀಕ್ಷಿಸಬಹುದಾದ ಚಿತ್ರ ಇದು ಎಂದು ಗ್ಯಾರಂಟಿ ನೀಡಬಲ್ಲೆ’ ಎಂದು ಹೇಳಿದರು.

ಖಳ ನಟ ರಾಮ್ ಮಾತನಾಡಿ, ‘ನಾಯಕನ ಪಾತ್ರಕ್ಕೆ ಸರಿಸಮನಾದ ಪಾತ್ರ ನನ್ನದಾಗಿದೆ. ಇದುವರೆಗೆ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನನಗೆ ಈ ಚಿತ್ರ ಹೆಸರು ತಂದುಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದರು. ‌

‘ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ’ ಎಂದು ನಟಿ ಮೇಘನಾ ಕುಲಕರ್ಣಿ ಹೇಳಿದರು.

‘ಚಿತ್ರದಲ್ಲಿ ಮೂರು ಹಾಡುಗಳಿದ್ದು, ಈ ಪೈಕಿ ‘ಅಮ್ಮಾ...’ ಎಂಬ ಹಾಡು ಟಾಪ್ 10ರಲ್ಲಿ ಏಳನೇ ಸ್ಥಾನದಲ್ಲಿದೆ. ಯೂಟ್ಯೂಬ್‌ನಲ್ಲಿಯೂ ಮೆಚ್ಚುಗೆಯ ಸುರಿಮಳೆ ಬಂದಿದೆ’ ಎಂದು ಸಂಗೀತ ನಿರ್ದೇಶಕ ಪ್ರದ್ಯೋತನ್ ಹೇಳಿದರು.

ನಿರ್ಮಾಪಕ ಪ್ರವೀಣಾ ರವೀಂದ್ರ ಕುಲಕರ್ಣಿ, ‘ನಿರ್ದೇಶಕ ರಾಮಾಚಾರಿ ಅವರ ಕಿರುಚಿತ್ರ ನೋಡಿದಾಗ, ಅವರ ಮೇಲೆ ಭರವಸೆ ಮೂಡಿತು. ಜತೆಗೆ, ಕಥೆಯೂ ಇಷ್ಟವಾಗಿದ್ದರಿಂದ ನಮ್ಮೂರ ಹುಡುಗನ ಸಿನಿಮಾಗೆ ಬಂಡವಾಳ ಹಾಕಲು ಮನಸು ಮಾಡಿದೆ’ ಎಂದರು.

‘ರಾಜ್ಯದಾದ್ಯಂತ ಅಂದಾಜು 100 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಪೈಕಿ, ಉತ್ತರ ಕರ್ನಾಟಕ ಭಾಗದ ಚಿತ್ರಮಂದಿರಗಳು ಹೆಚ್ಚಾಗಿರಲಿವೆ’ ಎಂದರು ವಿತರಕ ವೆಂಕನಗೌಡ.

ಸಹಾಯಕ ನಿರ್ದೇಶಕ ಶ್ರೀಕಾರ್ ಹಾಗೂ ಸಹ ನಿರ್ಮಾಪಕ ರವೀಂದ್ರ ಕುಲಕರ್ಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry