ನಕಲು ನಡೆದರೆ ಅಮಾನತು

7
ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ ಎಚ್ಚರಿಕೆ

ನಕಲು ನಡೆದರೆ ಅಮಾನತು

Published:
Updated:
ನಕಲು ನಡೆದರೆ ಅಮಾನತು

ಯಾದಗಿರಿ: ಕಳೆದ ಮಾರ್ಚ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಜಿಲ್ಲಾಧಿಕಾರಿ ಜೆ. ಮಂಜುನಾಥ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ನಕಲು ಮಾಡಲು ಸಹಕರಿಸಿದ್ದು ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸ್ಥಾನಿಕ ಜಾಗೃತದಳ (ಸಿಟ್ಟಿಂಗ್ ಸ್ಕ್ವಾಡ್), ವಿಶೇಷ ಜಾಗೃತದಳ ಸಿಬ್ಬಂದಿಯೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದರೆ, ನೇರವಾಗಿ ಅಮಾನತು ಮಾಡಲಾಗುವುದು. ಕಾರಣ ಕೇಳಿ ನೋಟಿಸ್ ನೀಡುವ ಪ್ರಶ್ನೆಯೇ ಇಲ್ಲ’ ಎಂದರು.

‘ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆ ವೇಳೆ ಅಕ್ರಮದಲ್ಲಿ ಭಾಗಿಯಾದ 46 ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ವಿಚಾರಣೆ ನಡೆದಿದ್ದು, 17 ಮಂದಿ ಮುಖ್ಯ ಅಧೀಕ್ಷಕರು ಮತ್ತು ಕೊಠಡಿ ಮೇಲ್ವಿಚಾರಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳಲ್ಲಿನ ಅಜ್ಞಾನವನ್ನು ತೊಡೆದು ಹಾಕಿ, ಶಿಕ್ಷಕರು ಜ್ಞಾನವನ್ನು ತುಂಬಬೇಕು. ಈ ಮೂಲಕ ಶಿಕ್ಷಣದ ಮೂಲ ಉದ್ದೇಶ ಮುಂದುವರಿಸಬೇಕೆ ಹೊರತು, ಮಕ್ಕಳನ್ನು ನಕಲು ಮಾಡಿಸುವ ಮೂಲಕ ಮೂಲ ಉದ್ದೇಶ ಮುರಿಯಬಾರದು’ ಎಂದು ಜಿಲ್ಲಾಧಿಕಾರಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.

‘ಪರೀಕ್ಷಾ ಕೇಂದ್ರದ ಸಿಸಿ ಟಿವಿ ಕ್ಯಾಮೆರಾಗಳು ಬರೀ ಬೆದರು ಬೊಂಬೆಗಳಂತೆ ಆಗಬಾರದು. ಪರೀಕ್ಷೆ ಮುಗಿದ ಬಳಿಕ, ಸಿಸಿ ಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಏನಾದರೂ ಅಕ್ರಮಗಳು ಸೆರೆಯಾಗಿದ್ದರೆ ವರದಿ ನೀಡಬೇಕು ಎಂದು ಸೂಚಿಸಿದ ಅವರು, ಈ ಬಗ್ಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು’ ಎಂದು ತಿಳಿಸಿದರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯು ಜೂನ್ 21 ರಿಂದ ಆರಂಭವಾಗಿ ಜೂನ್ 28ರ ವರೆಗೆ ನಡೆಯಲಿದೆ. 29 ಪರೀಕ್ಷಾ ಕೇಂದ್ರಗಳಲ್ಲಿ 9,371 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಕಿಟಕಿ ಮೂಲಕ ನಕಲು ಚೀಟಿಗಳನ್ನು ಎಸೆಯುತ್ತಿರುವುದು ಕಂಡು ಬರುತ್ತಿದೆ. ಶಾಲೆಗಳಲ್ಲಿ ತಡೆಗೋಡೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದರು. ಸರ್ಕಾರಕ್ಕೆ ಪತ್ರ ಬರೆದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಮಾತನಾಡಿ, ‘ನಕಲು ಮಾಡುವುದು ರುಜುವಾತಾದರೆ ಅಂತಹ ವಿದ್ಯಾರ್ಥಿಯನ್ನು ಸ್ಥಳದಲ್ಲಿಯೇ ಡಿಬಾರ್ ಮಾಡಲಾಗುವುದು. ಅಕ್ರಮಕ್ಕೆ ಸಹಕಾರ ನೀಡಿದಂತಹ ಕೊಠಡಿ ಮೇಲ್ವಿಚಾರಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕಳೆದ ಬಾರಿ ಪರೀಕ್ಷಾ ಕೇಂದ್ರಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರೀಕ್ಷೆಯಲ್ಲಿ ನಡೆಯುವ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದೇನೆ. ಈ ಬಾರಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು. ಕಳೆದ ಬಾರಿಯಂತೆ ಈ ಬಾರಿಯೂ ಏಳು ವಿಶೇಷ ಜಾಗೃತ ದಳ ರಚಿಸಬೇಕು’ ಎಂದು ಅವರು ಡಿಡಿಪಿಐಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ್, ಪ್ರಭಾರ ಉಪ ನಿರ್ದೇಶಕ ಚಂದ್ರಶೇಖರ ಪಾಟೀಲ್, ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕಿ ಮೆಹಬೂಬ ಬಿ, ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಡಿ.ಎಂ. ಹೊಸಮನಿ, ಜಿಲ್ಲಾ ವಿಷಯ ಪರಿವೀಕ್ಷಕ ವೆಂಕೋಬ ಹಾಗೂ ಮೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಶೇಷ ಜಾಗೃತ ದಳದ ಸದಸ್ಯರು ಇದ್ದರು.

ಪರೀಕ್ಷೆ ಕಠಿಣ ಎಂಬುದು ಗೊತ್ತಾದರೆ ಮಕ್ಕಳು ಕಠಿಣ ಪರಿಶ್ರಮ ಪಟ್ಟು ಕಲಿಕೆಯಲ್ಲಿ ಭಾಗವಹಿಸುತ್ತಾರೆ. ಯಶಸ್ಸು ಕೈಗೆಟುವಷ್ಟು ಸುಲಭ, ಸರಳವಾದರೆ ಜ್ಞಾನಾರ್ಜನೆ ಕುಸಿಯುತ್ತದೆ

ಡಾ.ಅವಿನಾಶ್ ಮೆನನ್‌ ರಾಜೇಂದ್ರನ್ ಸಿಇಒ, ಜಿಲ್ಲಾ ಪಂಚಾಯಿತಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry