ಪರಿಷ್ಕೃತ ವೇತನ: ಮುಷ್ಕರ ಬೆದರಿಕೆ

7
ಪುರಸಭೆ ಗುತ್ತಿಗೆ ಕಾರ್ಮಿಕರ ಒಕ್ಕೂಟದ ರಾಜ್ಯ ಅಧ್ಯಕ್ಷರ ಹೇಳಿಕೆ

ಪರಿಷ್ಕೃತ ವೇತನ: ಮುಷ್ಕರ ಬೆದರಿಕೆ

Published:
Updated:
ಪರಿಷ್ಕೃತ ವೇತನ: ಮುಷ್ಕರ ಬೆದರಿಕೆ

ಮಾಗಡಿ: ಪುರಸಭೆ ಗುತ್ತಿಗೆ ಕಾರ್ಮಿಕರ ವೇತನ ಪರಿಷ್ಕರಿಸಿ ಒಂದು ತಿಂಗಳ ಒಳಗೆ ಪರಿಷ್ಕೃತ ವೇತನ ಜಾರಿಗೊಳಿಸದಿದ್ದರೆ ಜುಲೈ 20 ರಂದು ಅನಿರ್ದಿಷ್ಟ ಮುಷ್ಕರ ಆರಂಭಿಸಿ ಕುಡಿಯುವ ನೀರು ಸರಬರಾಜು ನಿಲ್ಲಿಸಲಾಗುವುದು ಎಂದು ಗುತ್ತಿಗೆ ಕಾರ್ಮಿಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ.ನಾಗರಾಜು ತಿಳಿಸಿದರು.

ಪುರಸಭೆ ಆವರಣದಲ್ಲಿ ಸೋಮವಾರ ಸಂಜೆ ನಡೆದ ಗುತ್ತಿಗೆ ಕಾರ್ಮಿಕರ ಒಕ್ಕೂಟದ ಸಭೆಯಲ್ಲಿ ಮಾತನಾಡಿದರು. ‘ಹೊರಗುತ್ತಿಗೆ ಎಂಬುದು ಆಧುನಿಕ ಜೀತ ಪದ್ದತಿಯ ಮುಂದುವರಿದ ಭಾಗವಾಗಿದೆ. ಪುರಸಭೆಯಲ್ಲಿ 60 ಜನ ಗುತ್ತಿಗೆ ಕಾರ್ಮಿಕರು ಸ್ವಚ್ಛತೆ ಮತ್ತು ನೀರು ಸರಬರಾಜು ಕೆಲಸ ನಿರ್ವಹಿಸುತ್ತಿದ್ದಾರೆ. 2016ರ ಆಗಸ್ಟ್‌ ತಿಂಗಳಲ್ಲಿ ಗುತ್ತಿಗೆ ಕಾರ್ಮಿಕರ ವೇತನ ಪರಿಷ್ಕರಣೆ ಆಗಿದೆ. ಮಾಗಡಿ ಪುರಸಭೆ ಹೊರತು ಪಡಿಸಿ ಬೇರೆ ಎಲ್ಲ ಕಡೆ ಪರಿಷ್ಕೃತ ವೇತನ ₹ 9 ಸಾವಿರ ನೀಡುತ್ತಿದ್ದಾರೆ’ ಎಂದರು.

‘ವೇತನ ಪರಿಷ್ಕರಣೆ ಆದೇಶವನ್ನು ಮಾಗಡಿ ಪುರಸಭೆಯಲ್ಲಿ ಜಾರಿಗೊಳಿಸದೆ, 2 ವರ್ಷದ ಹಿಂಬಾಕಿಯನ್ನು ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಮುಖ್ಯಾಧಿಕಾರಿಗಳು ಸರ್ಕಾರಿ ಆದೇಶವನ್ನು ಗಾಳಿಗೆ ತೂರಿದ್ದಾರೆ’ ಎಂದರು.

‘ನಿಯಮ ಬಾಹಿರವಾಗಿ 8 ವರ್ಷಗಳಿಂದ, ಗುತ್ತಿಗೆ ಟೆಂಡರ್‌ ಕರೆಯದೆ, ಪೌರಸೇವಾ ಇಲಾಖೆಯ ಕಾಯ್ದೆಯ ವಿರುದ್ಧವಾಗಿ ಒಬ್ಬನೇ ವ್ಯಕ್ತಿಗೆ ಗುತ್ತಿಗೆ ನೀಡುತ್ತಿದ್ದಾರೆ. ಪ್ರತಿತಿಂಗಳು ಹೊರಗುತ್ತಿಗೆ ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ’ ಎಂದರು.

‘ಸಿವಿಲ್‌ ಕಾಮಗಾರಿಗಳಿಗೆ ಹಣ ನೀಡುವ ಮುನ್ನ ಹೊರಗುತ್ತಿಗೆದಾರ ಕಾರ್ಮಿಕರಿಗೆ ವೇತನ ನೀಡಬೇಕು. ಪ್ರತಿ ತಿಂಗಳು ಸಂಬಳ ನೀಡಲು ವಿಶೇಷ ನಿಧಿ ಸ್ಥಾಪಿಸಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸಲು ನೂತನ ಶಾಸಕ ಎ.ಮಂಜುನಾಥ ಅಧಿಕಾರಿಗಳ ಮತ್ತು ಒಕ್ಕೂಟದ ಪದಾಧಿಕಾರಿಗಳ ಸಭೆ ಕರೆದು ಕಾರ್ಮಿಕರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು’ ಎಂದು ಮನವಿ ಮಾಡಿದರು.

ಪುರಸಭೆ ಗುತ್ತಿಗೆ ಕಾರ್ಮಿಕರ ಸಂಘಧ ಅಧ್ಯಕ್ಷ ಮಂಜುನಾಥ ಮಾತನಾಡಿ, ‘ಚಳಿ, ಗಾಳಿ ಮಳೆ, ಬಿಸಿಲಿನ ಬೇಗೆ ಎನ್ನದೆ ಪಟ್ಟಣದಲ್ಲಿ ಸ್ವಚ್ಛತೆ ಮಾಡುತ್ತಿದ್ದೇವೆ. 5 ತಿಂಗಳಿಂದಲೂ ಸಂಬಳ ನೀಡಿಲ್ಲ. ನಮ್ಮ ಸಂಸಾರದ ಗತಿ ಏನು. ಶಾಲೆಗಳಿಗೆ ಮಕ್ಕಳನ್ನು ದಾಖಲೆ ಮಾಡಿಸಬೇಡವೇ. ಹೊಟ್ಟೆಗೆ ಏನು ತಿನ್ನಬೇಕು. ಬೇರೆಲ್ಲಾ ಕಾಮಗಾರಿಗಳಿಗೆ ಹಣ ಇದೆ. ನಮಗೆ ಕೊಡುವ ಕನಿಷ್ಠ ಕೂಲಿಗೆ ಹಣ ಇಲ್ಲ ಎಂದರೆ ಹೇಗೆ’ ಎಂದರು.

ನೀರು ಸರಬರಾಜು ನೌಕರ ವೆಂಕಟೇಶ್‌, ಒಕ್ಕೂಟದ ಮಾರ್ಗದರ್ಶಿ ಅಭಿಗೌಡ ಮಾತನಾಡಿದರು. ಹೊರಗುತ್ತಿಗೆ ಕಾರ್ಮಿಕರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry