ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಸಮಸ್ಯೆ: ನಿರ್ಲಕ್ಷ್ಯ ಸಲ್ಲ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ನಾಡಗೌಡ ಸೂಚನೆ
Last Updated 19 ಜೂನ್ 2018, 9:56 IST
ಅಕ್ಷರ ಗಾತ್ರ

ಸಿಂಧನೂರು: ’ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದ್ದು, ಅದಕ್ಕೆ ತಕ್ಷಣ ಸ್ಪಂದಿಸದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮುಖ್ಯವಾಗಿ ಕುಡಿಯುವ ನೀರಿನ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು’ ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟ ರಾವ್ ನಾಡಗೌಡ ಎಚ್ಚರಿಕೆ ನೀಡಿದರು.

ಇಲ್ಲಿಯ ಸರ್ಕಿಟ್ ಹೌಸ್‍ನಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯುತ್ ಕೊರತೆ ಕಾರಣಕ್ಕಾಗಿಯೇ ನೀರಿನ ಸಮಸ್ಯೆ ಇರುವ ಸ್ಥಳಗಳ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳನ್ನು ಕೇಳಿದರು. ಆಗ ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಭೈರೇಶ್ವರಕ್ಯಾಂಪಿಗೆ ನೀರಿನ ಮೇಲ್ತೋಟ್ಟಿ, ಪೈಪ್‍ಲೈನ್ ಇದೆ, ಆದರೆ ಟಿ.ಸಿ ಇಲ್ಲದ ಕಾರಣಕ್ಕಾಗಿ ನೀರಿನ ಸಮಸ್ಯೆ ಉದ್ಬವಿಸಿದೆ ಎಂದು ಅಭಿವೃದ್ದಿ ಅಧಿಕಾರಿ ವನುಜಾ ಹೇಳಿದರು.

ರೌಡಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಟಿ.ಸಿ ಇಲ್ಲದಿದ್ದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಅಲ್ಲಿಯ ಪಿಡಿಒ ತಿಳಿಸಿದರು. ಗೋನವಾರ ಪಂಚಾಯಿತಿಯ ಹುಲಗುಂಚಿ, ಆಯನೂರು ಮತ್ತು ಚಿಂತಮಾನದೊಡ್ಡಿ, ಎಲೆಕೂಡ್ಲಿಗಿ ಪಂಚಾಯಿತಿ ವ್ಯಾಪ್ತಿಯ ಎಸ್.ಎನ್.ಕ್ಯಾಂಪಿನಿಂದ ಬಸಾಪೂರ ಗ್ರಾಮದವರೆಗೆ ವಿದ್ಯುತ್ ಕಂಬಗಳ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ವಿದ್ಯುತ್ ಗುತ್ತಿಗೆದಾರರು ಯಾರೇ ಆಗಿರಲಿ ತಕ್ಷಣ ಕೆಲಸ ಮುಗಿಸುವ ಮೂಲಕ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.

ಶ್ರೀಪುರಂ ಜಂಕ್ಷನ್‍ನಲ್ಲಿ ಒಂದೆರಡು ದಿನಗಳಲ್ಲಿ ಕೆರೆ ಪೂರ್ಣ ಬರಿದಾಗುವ ಸಾಧ್ಯತೆ ಇದೆ. ಇದರಿಂದ ಏನು ಮಾಡಬೇಕೆಂದು ತಿಳಿಯದಾಗಿದೆ ಎಂದು ಹೊಸಳ್ಳಿ ಇ.ಜೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹೇಳುತ್ತಿದ್ದಂತೆ, ಜಾಗೃತರಾದ ಸಚಿವರು ಅಭಿವೃದ್ಧಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ಶುದ್ದ ಕುಡಿಯುವ ನೀರು ಪೂರೈಸಬೇಕು. ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ಉಮಾಕಾಂತ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಎಂ.ಬಸಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜ ಬಿ.ಪಾಟೀಲ್, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಟಿ.ಯೋಗಿತಾಬಾಯಿ, ಅಶೋಕ, ಸಮಾಜ ಕಲ್ಯಾಣಾಧಿಕಾರಿ ಜಯಮ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT