ಸಾಲ ಮನ್ನಾಗೆ ಆಗ್ರಹಿಸಿ ಪ್ರತಿಭಟನೆ

7
ರೈತರ ಎಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ರೈತಸಂಘದ ಪದಾಧಿಕಾರಿಗಳ ಆಗ್ರಹ

ಸಾಲ ಮನ್ನಾಗೆ ಆಗ್ರಹಿಸಿ ಪ್ರತಿಭಟನೆ

Published:
Updated:
ಸಾಲ ಮನ್ನಾಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಲಕ್ಷ್ಮೀನಾರಾಯಣರೆಡ್ಡಿ, ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆ ಒಳಗಡೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಆದರೆ ಅವರು ಅಧಿಕಾರ ವಹಿಸಿಕೊಂಡು 25 ದಿನಗಳು ಕಳೆದರೂ ರೈತರ ಸಾಲ ಮನ್ನಾ ಮಾಡದೇ ರೈತ ವಿರೋಧಿ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅವರು ಮನಸ್ಸು ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಇತ್ತೀಚೆಗೆ ರೈತ ಮುಖಂಡರೊಂದಿಗೆ ಸಭೆ ನಡೆಸಿದ್ದ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಲು 15 ದಿನಗಳ ಕಾಲಾವಕಾಶ ಪಡೆದಿದ್ದರು. ಈಗ ಆ ಗಡುವು ಮುಗಿದರೂ ಆ ವಿಚಾರವಾಗಿ ಚಕಾರ ಎತ್ತುತ್ತಿಲ್ಲ. ಸಮ್ಮಿಶ್ರ ಸರ್ಕಾರ ಎಂಬ ನೆವ ಹೇಳಿಕೊಂಡು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಧಿಕಾರ ಅನುಭವಿಸುತ್ತ ರೈತರಿಗೆ ವಂಚನೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಬೆಳೆ ಇಡಲು, ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಸೇರಿದಂತೆ ಕೃಷಿ ಉಪಕರಣಗಳನ್ನು ಖರೀದಿಸಲು ರೈತರ ಬಳಿ ಹಣ ಇಲ್ಲದೆ ಅಲೆದಾಡುತ್ತಿದ್ದಾರೆ. ಸ್ತ್ರೀಶಕ್ತಿ ಗುಂಪುಗಳು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಮುಂದಾದರೆ ಬಾಕಿ ಸಾಲವನ್ನು ಕಟ್ಟಿ, ಹೊಸ ಸಾಲವನ್ನು ನೀಡುತ್ತೇವೆ ಎಂದು ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಕೂಡಲೇ ಈ ನಿಯಮವನ್ನು ಸಡಿಲಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ರವಿಪ್ರಕಾಶ್‌ ಮಾತನಾಡಿ, ‘ರೈತರ ₹ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್‌ ಭರವಸೆ ನೀಡಿತ್ತು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿಲ್ಲ ಎಂಬ ಕಾರಣ ನೀಡುತ್ತ ಸಾಲ ಮನ್ನಾ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತ ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ರೈತ ಸಂಘದ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅನಸೂಯಮ್ಮ, ಬಾಗೇಪಲ್ಲಿ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎಸ್‌.ಬಾಜೀಸಾಬ್‌, ಗುಡಿಬಂಡೆ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ವೆಂಕಟರಮಣಪ್ಪ, ಬಿ.ಎಸ್‌.ಅರುಣ್‌ಕುಮಾರ್‌, ಡಿ.ರಘುನಾಥ್‌ರೆಡ್ಡಿ, ಚನ್ನೇಗೌಡ, ಮುತ್ಯಾಲರೆಡ್ಡಿ, ವರದರಾಜು ಪ್ರತಿಭಟನೆಯಲ್ಲಿ ಇದ್ದರು.

ರಾಜ್ಯ ಸರ್ಕಾರ ಶೀಘ್ರವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು

- ಟಿ. ಲಕ್ಷ್ಮೀನಾರಾಯಣರೆಡ್ಡಿ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !