ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿಯಿಂದಲೂ ಲಾಭ ಗಳಿಸಬಹುದು’

12 ದಿನಗಳ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕಿ ರೂಪಾಲಿ ನಾಯ್ಕ
Last Updated 19 ಜೂನ್ 2018, 13:33 IST
ಅಕ್ಷರ ಗಾತ್ರ

ಕಾರವಾರ: ಶ್ರದ್ಧೆಯಿಂದ ಮಾಡಿದರೆ ಕೃಷಿ ಕೂಡ ಲಾಭದಾಯಕ ವೃತ್ತಿಯಾಗಿದೆ. ಉದ್ಯೋಗ ಅರಸಿ ಯುವಕರು ನಗರ ಪ್ರದೇಶಗಳಿಗೆ ಹೋಗಿ ಕಡಿಮೆ ಸಂಬಳದ ಕೆಲಸಕ್ಕೆ ಸೇರುವ ಬದಲು ತಮ್ಮದೇ ಕೃಷಿ ಭೂಮಿಯಲ್ಲಿ ಬೇಸಾಯ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಶಾಸಕಿ ರೂಪಾಲಿ ನಾಯ್ಕ ಸಲಹೆ ನೀಡಿದರು.

ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ 12 ದಿನಗಳ ಕೃಷಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಗಳು ಕೃಷಿ ಉತ್ತೇಜನಕ್ಕಾಗಿ ಹಲವಾರು ಸಬ್ಸಿಡಿ ಯೋಜನೆಗಳನ್ನು ಜಾರಿ ಮಾಡಿವೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಯಾಂತ್ರೀಕೃತ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇವುಗಳನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಲು ಎಲ್ಲ ರೀತಿಯ ಅವಕಾಶಗಳಿವೆ ಎಂದು ಅವರು ಹೇಳಿದರು.

ಕೃಷಿಯಲ್ಲಿ ಯುವಕರನ್ನು ಪ್ರೋತ್ಸಾಹಿಸಲು ಈಗಾಗಲೇ ಕಾರವಾರ– ಅಂಕೋಲ ವಿಧಾನಸಭಾ ಕ್ಷೇತ್ರದಲ್ಲಿ ಯುವಕರ ಗುಂಪುಗಳನ್ನು ರಚಿಸಲಾಗಿದೆ. ಈ ವರ್ಷದಿಂದಲೇ ಕೃಷಿ ಚಟುವಟಿಕೆ ಆರಂಭಿಸಲು ಯುವಕರಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಹೇಳಿದರು.

ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ಎಸ್. ನಾಯ್ಕ ಮಾತನಾಡಿ, ರೈತರು ಯಾಂತ್ರೀಕೃತ ಕೃಷಿಗೆ ಹೆಚ್ಚಿನ ಅಸಕ್ತಿ ತೋರಬೇಕು. ಇದರಿಂದಾಗಿ ತಮಗಾಗುವ ನಷ್ಟವನ್ನು ತಗ್ಗಿಸಬಹುದು. ಅಲ್ಲದೆ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆದು ಲಾಭ ಮಾಡಿಕೊಳ್ಳಬಹುದು ಎಂದು ಹೇಳಿದರು.

ಸಮಾರಂಭದಲ್ಲಿ ಕೃಷಿ ಮಾಹಿತಿ ಪುಸ್ತಕ ಬಿಡುಗಡೆ ಮಾಡಲಾಯಿತು. 2018–19ನೇ ಸಾಲಿನ ಫಲಾನುಭವಿಗಳಿಗೆ ಪವರ್ ಟಿಲ್ಲರ್‌ಗಳನ್ನು ವಿತರಿಸಲಾಯಿತು.

ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ಉಪ ಕೃಷಿ ನಿರ್ದೇಶಕ ಶಿವಪ್ರಸಾದ ಗಾಂವಕರ್, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ಕುಲಕರ್ಣಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಅಕ್ಷಯಕುಮಾರ್ ಉಪಾಧ್ಯಾಯ, ರೇಷ್ಮೆ ಅಧಿಕಾರಿ ಬಿ.ಎನ್.ಗೌಡ, ಶಿಶು ಅಭಿವೃದ್ಧಿ ಅಧಿಕಾರಿ ಪಿ.ಎಚ್.ನಾಯ್ಕ್, ಕೃಷಿ ತಾಂತ್ರಿಕ ಅಧಿಕಾರಿ ಜಿ.ಎನ್.ಗುಡಿಗಾರ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT