ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂಗಡ್ಡೆಯಿಂದ ಚಿನ್ನ, ಪ್ರತಿ ಖಾತೆಗೂ ₹15 ಲಕ್ಷ ;ರಾಹುಲ್,ಮೋದಿ ಹೀಗೆ ಹೇಳಿದ್ದರೇ?

Last Updated 23 ಮೇ 2019, 6:00 IST
ಅಕ್ಷರ ಗಾತ್ರ

ಬೆಂಗಳೂರು: ನಾನು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ₹15 ಲಕ್ಷ ಜಮಾ ಮಾಡುತ್ತೇನೆ ಎಂದಿದ್ದರು ನರೇಂದ್ರ ಮೋದಿ. ಮೋದಿ ಅಧಿಕಾರಕ್ಕೇರಿ 5 ವರ್ಷ ಆಯ್ತು. ಬ್ಯಾಂಕ್ ಖಾತೆಗೆ ಇನ್ನೂ ದುಡ್ಡು ಬಂದಿಲ್ಲ ಎಂಬ ಮಾತು 2019ರ ಚುನಾವಣೆ ಸಂದರ್ಭದಲ್ಲಿ ಭಾರೀ ಸುದ್ದಿಯಾಗಿತ್ತು.

ಮೋದಿ ನಮ್ಮ ಖಾತೆಗೆ ₹15 ಲಕ್ಷ ದುಡ್ಡು ಹಾಕಲೇ ಇಲ್ಲ. ಮೋದಿಯ ಭರವಸೆ ಏನಾಯಿತು? ಎಂದು ಚುನಾವಣಾ ಸಂದರ್ಭದಲ್ಲಿ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಗಳಲ್ಲಿಯೂ ವಿಪಕ್ಷದ ಪ್ರತಿನಿಧಿಗಳು, ಸಾಮಾನ್ಯ ಜನರು ಬಿಜೆಪಿ ಪ್ರತಿನಿಧಿಗಳನ್ನು ಪ್ರಶ್ನಿಸಿದ್ದರು. ಅಷ್ಟೇ ಯಾಕೆ ಕಾಂಗ್ರೆಸ್ ಪಕ್ಷ ನ್ಯಾಯ್ (ದೇಶದ ಐದು ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ ₹ 72000 ಧನಸಹಾಯ ನೀಡುವ ಯೋಜನೆ) ಬಗ್ಗೆ ಭರವಸೆ ನೀಡಿದಾಗಲೂ ಮೋದಿಯವರ ₹15 ಲಕ್ಷದ ಮತ್ತೆ ಸದ್ದು ಮಾಡಿತ್ತು. ಹಾಗಾದರೆ ಹೀಗೊಂದು ಭರವಸೆಯನ್ನುಮೋದಿ ನೀಡಿದ್ದರಾ? ಈ ಬಗ್ಗೆ ಬೂಮ್ ಲೈವ್ಫ್ಯಾಕ್ಟ್‌ಚೆಕ್ ಮಾಡಿದೆ.

ಫ್ಯಾಕ್ಟ್‌ಚೆಕ್
ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೂ15 ಲಕ್ಷ ಜಮಾ ಮಾಡುತ್ತೇನೆ ಎಂದು ಮೋದಿ ಹೇಳಿದ್ದರೇ?
ಉತ್ತರ: ಇಲ್ಲ.
₹15 ಲಕ್ಷ ಜಮಾ ಮಾಡುತ್ತೇನೆ ಎಂಬ ಮಾತು ಮೊದಲ ಬಾರಿ ಮೋದಿ ಹೇಳಿದ್ದು ನವೆಂಬರ್ 7,2013ರಲ್ಲಿ. ಛತ್ತೀಸ್‌ಗಡದ ಕನ್ಕೇರ್ ಚುನಾವಣಾ ರ‍್ಯಾಲಿಯಲ್ಲಿ ಮಾಡಿದ ಭಾಷಣದಲ್ಲಿ ಮೋದಿ ಹೀಗೆ ಹೇಳಿದ್ದರು.

ಮೋದಿ ಹೇಳಿದ್ದೇನು?

ದೇಶದಲ್ಲಿರುವ ಭ್ರಷ್ಟರು ವಿದೇಶದಲ್ಲಿ ಹಣ ಸಂಗ್ರಹಿಸಿಟ್ಟಿದ್ದಾರೆ ಎಂದು ಇಡೀ ಜಗತ್ತೇ ಹೇಳುತ್ತಿದೆ.ವಿದೇಶದಲ್ಲಿರುವ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಜಮೆ ಆಗಿದೆ. ಹೀಗೆ ಕದ್ದಿರುವ ಹಣ ನಮ್ಮ ದೇಶಕ್ಕೆ ವಾಪಸ್ ಬರಬೇಕೋ ಇಲ್ಲವೋ ಎಂದು ಕನ್ಕೇರ್‌ನಲ್ಲಿರುವ ನನ್ನ ಸಹೋದರ ಸಹೋದರಿಯರೇ ನೀವೇ ಹೇಳಿ? ಆ ಕಪ್ಪು ಹಣ ವಾಪಸ್ ಬರಬೇಕೋ ಬೇಡವೋ? ಈ ರೀತಿ ಮೋಸಗಾರರಿಂದ ಆ ಹಣವನ್ನು ವಾಪಸ್ ಪಡೆಯಬೇಕಲ್ಲವೇ? ಈ ಹಣದಲ್ಲಿ ಸಾರ್ವಜನಿಕರರಿಗೆ ಹಕ್ಕು ಇದೆಯಲ್ಲವೇ? ಸಾರ್ವಜನಿಕರ ಹಿತಕ್ಕಾಗಿ ಈ ಹಣವನ್ನು ವಿನಿಯೋಗಿಸಬೇಕಲ್ಲವೇ?

ವಿದೇಶದಲ್ಲಿ ಈ ಮೋಸಗಾರರ ಇಟ್ಟಿರುವ ಹಣವನ್ನು ವಾಪಸ್ ತಂದರೆ ದೇಶದಲ್ಲಿರುವ ಪ್ರತಿಯೊಬ್ಬ ಬಡ ಭಾರತೀಯನಿಗೂ ಪುಕ್ಸಟೆ ₹15 ರಿಂದ ₹20 ಲಕ್ಷ ಸಿಕ್ಕಿದಂತಾಗುತ್ತದೆ.ಅಷ್ಟೊಂದು ದುಡ್ಡು ಅಲ್ಲಿದೆ.

ಇಲ್ಲಿ ಮೋದಿಯವರು ವಿದೇಶದಲ್ಲಿ ಅಷ್ಟೊಂದು ಕಪ್ಪು ಹಣ ಇದೆ ಎಂಬುದನ್ನು ವಿವರಿಸುವುದಕ್ಕಾಗಿ ಹೀಗೊಂದು ರೂಪಕವನ್ನು ಬಳಸಿದ್ದರೇ ಹೊರತು ಪ್ರತಿಯೊಬ್ಬರ ಖಾತೆಗೂ ₹15 ಲಕ್ಷ ಜಮೆ ಮಾಡುತ್ತೇನೆ ಎಂದು ಹೇಳಿರಲಿಲ್ಲ.

ಏತನ್ಮಧ್ಯೆ,ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತರುತ್ತೇವೆ ಎಂಬ ಭರವಸೆ ನೀಡಿ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೇರಿತ್ತು. ಅಂದಹಾಗೆ ಪ್ರತಿಯೊಬ್ಬರ ಖಾತೆಗೂ ₹15 ಲಕ್ಷ ಜಮೆ ಮಾಡುತ್ತೇನೆ ಎಂದು ಬಿಜೆಪಿ 2014ರ ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಲಿಲ್ಲ.

ಮೋದಿ ₹15 ಲಕ್ಷ ಜಮಾಮಾಡುವುದಾಗಿ ಹೇಳಿದ್ದರೇ? ಎಂದು ಆರ್‌ಟಿಐ ಮೂಲಕ ಉತ್ತರ ಕೇಳಿದಾಗ 2005ರ ಆರ್‌ಟಿಐಕಾಯ್ದೆ ಪ್ರಕಾರ ಈ ಪ್ರಶ್ನೆಯನ್ನು ಮಾಹಿತಿ ಎಂದು ಪರಿಗಣಿಸುವುದಿಲ್ಲ ಎಂಬ ಉತ್ತರ ಸಿಕ್ಕಿದೆ. ನವೆಂಬರ್ 2016ರಲ್ಲಿ ನೋಟುರದ್ದತಿಯಾಗಿ 18 ದಿನಗಳ ನಂತರ ಆರ್‌ಟಿಐನಲ್ಲಿ ಈ ಪ್ರಶ್ನೆ ಕೇಳಲಾಗಿತ್ತು.

ಅಮಿತ್ ಶಾ ಜುಮ್ಲಾ ಅಂದಿದ್ದರು!
2015ರಲ್ಲಿ ಎಬಿಪಿ ನ್ಯೂಸ್‌ಗೆ ಸಂದರ್ಶನ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ,ಖಾತೆಗೆ ₹15 ಲಕ್ಷ ಜಮಾ ಮಾಡುವ ವಿಷಯದ ಬಗ್ಗೆ ಕೇಳಿದಾಗ ಅದೊಂದು ಜುಮ್ಲಾ ಅಂದಿದ್ದರು. ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಜಮೆ ಮಾಡಲು ಆಗುವುದಿಲ್ಲ.ವಿಪಕ್ಷಗಳಿಗೂ ಇದು ಗೊತ್ತು. ಇಡೀ ದೇಶಕ್ಕೆ ಗೊತ್ತು, ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಬಡವರಿಗಾಗಿ ವಿನಿಯೋಗಿಸುವ ಚಿಂತನೆ ಇತ್ತು. ಆರ್ಥಿಕವಾಗಿ ಹಿಂದುಳಿವರಿಗಾಗಿ ಯೋಜನೆಗಳನ್ನು ರೂಪಿಸಲಾಗುತ್ತದೆ.ಯಾರೊಬ್ಬರಿಗೂ ನಗದು ಸಿಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ.ಭಾಷಣ ಮಾಡುವಾಗ ಅವರು ಒಂದು ರೂಪಕ ಬಳಸಿದರು ಅಷ್ಟೇ.ಕಪ್ಪು ಹಣ ವಾಪಸ್ ಬಂದರೆ ಬಡವರ ಯೋಜನೆಗಳಿಗಾಗಿ ವಿನಿಯೋಗಿಸಲಾಗುವುದು ಎಂದು ಹೇಳಲು ಮೋದಿ ಈ ರೂಪಕ ಬಳಸಿದ್ದರು ಎಂದಿದ್ದರು.

ರಾಹುಲ್ ಗಾಂಧಿ ಹೇಳಿದ್ದು -ಫ್ಯಾಕ್ಟ್‌ಚೆಕ್


'ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ' -ಹೀಗಂದಿದ್ದರಾ ರಾಹುಲ್?
ಗುಜರಾತಿನಲ್ಲಿ 2017ರಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಆಲೂಗಡ್ಡೆ ಮೆಷೀನ್ ಬಗ್ಗೆ ಹೇಳಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಇದಾದ ನಂತರರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಆಲೂ ಫ್ಯಾಕ್ಟರಿ ಐಡಿಯಾದ ವಿಡಿಯೊ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.

20 ನಿಮಿಷ ಅವಧಿಯ ವಿಡಿಯೊ ದೃಶ್ಯ ಇದಾಗಿದ್ದು 2019ರ ಲೋಕಸಭಾಚುನಾವಣೆಯ ಸಂದರ್ಭದಲ್ಲಿಯೂ ಇದು ಮತ್ತೊಮ್ಮೆ ಸುದ್ದಿಯಾಯಿತು.

ವಿಡಿಯೊದಲ್ಲಿ ಏನಿದೆ?
ಯಾವ ರೀತಿಯಮೆಷೀನ್ ಸ್ಥಾಪಿಸುವೆ ಎಂದರೆ ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ ಎಂದು ರಾಹುಲ್ ಹೇಳುತ್ತಿರುವುದು ವಿಡಿಯೊದಲ್ಲಿದೆ. ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದ ದಿ ಕ್ವಿಂಟ್ ವಿಡಿಯೊ ಹಿಂದಿನ ಸತ್ಯಾಸತ್ಯತೆಗಳು ಏನು ಎಂಬುದನ್ನು ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್
ಈ ಕಡೆಯಿಂದಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದು ನಿಜ. ಆದರೆ ವಿಡಿಯೊದಲ್ಲಿ ಕಾಣುತ್ತಿರುವುದು ಅರ್ಧ ಸತ್ಯ.

ರಾಹುಲ್ ಗಾಂಧಿಯ ಭಾಷಣದ ತುಣಕೊಂದನ್ನು ಬಳಸಿ ಈ ರೀತಿ ಟ್ರೋಲ್ ಮಾಡಲಾಗಿದೆ. ಈ ಭಾಷಣದ ಮುಂದುವರಿದ ಭಾಗವನ್ನು ಕೇಳಿಸಿಕೊಂಡರೆ ರಾಹುಲ್ ಏನು ಹೇಳಿದ್ದು ಎಂಬುದು ಗೊತ್ತಾಗುತ್ತದೆ.

ರಾಹುಲ್ ಗುಜರಾತಿನ ರೈತರನ್ನುದ್ದೇಶಿಸಿ ಮಾತನಾಡಿದ ಭಾಷಣ ಇದಾಗಿದೆ. ಇದರಲ್ಲಿ ರಾಹುಲ್ ಹೇಳಿದ್ದೇನೆಂದರೆ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಭರವಸೆ ನೀಡಿದ್ದರು. ಯಾವ ರೀತಿಯ ಮೆಷೀನ್ ಬಳಕೆಗೆ ತರುತ್ತೇನೆ ಅಂದರೆ ಅದರ ಒಂದು ಕಡೆ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆ ಚಿನ್ನ ಬರುತ್ತದೆ. ಎಷ್ಟು ಹಣ ಬರುತ್ತದೆ ಎಂಬುದು ನಿಮಗೇ ಅಂದಾಜು ಇರಲಾರದು. ಇದು ನಾನು ಹೇಳಿದ್ದಲ್ಲ, ನರೇಂದ್ರ ಮೋದಿ ಹೇಳಿದ್ದು ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳುತ್ತಾರೆ.

ಈ ವಿಡಿಯೊದಲ್ಲಿ 18.00 ನಿಮಿಷದ ನಂತರ ರಾಹುಲ್ ಮಾತುಗಳನ್ನು ಗಮನಿಸಿ. ಆದರೆಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಅವರೇ ಆಲೂಗಡ್ಡೆ ಮೆಷೀನ್ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬಂತೆ ಬಿಂಬಿಸಿ, ಟ್ರೋಲ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT