ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಧಾರ್ಮಿಕ ಭಾವನೆ ಕೆರಳಿಸುವ ಪಠ್ಯವನ್ನು ಕೇರಳ ಸರ್ಕಾರ ರೂಪಿಸಿಲ್ಲ

Published 19 ಏಪ್ರಿಲ್ 2024, 18:45 IST
Last Updated 19 ಏಪ್ರಿಲ್ 2024, 18:45 IST
ಅಕ್ಷರ ಗಾತ್ರ

‘ಮುಸ್ಲಿಂ ಅಸ್ಲಾಂ: ಶುಚಿಯಾಗಿರುವವನು, ಆತನ ಅಂಗಡಿಯಿಂದ ಸಿಹಿತಿಂಡಿಗಳನ್ನು ಖರೀದಿಸಬೇಕು

ಹಿಂದೂ ಅಪ್ಪನ್‌: ಶುಚಿಯಾಗಿಲ್ಲದವನು, ಆತನ ಅಂಗಡಿಯಿಂದ ಯಾರೂ ಸಿಹಿತಿಂಡಿ ಖರೀದಿಸುವಂತಿಲ್ಲ

ಮುಸ್ಲಿಂ ಆದಿಲ್‌: ಶುಚಿಯಾಗಿರುವವನು ಮತ್ತು ಆತನಿಗೆ ಒಳ್ಳೆಯ ಗುಣಗಳಿವೆ

ಹಿಂದೂ ಅಭಿಮನ್ಯು: ಶುಚಿಯಾಗಿಲ್ಲದವನು, ಸ್ನಾನವನ್ನೇ ಮಾಡದವನು, ಕೆಟ್ಟ ವಾಸನೆ ಸೂಸುವವನು

ಕೇರಳದಲ್ಲಿ ಮಕ್ಕಳಿಗೆ ಇಂಥದ್ದನ್ನು ಹೇಳಿಕೊಡಲಾಗುತ್ತಿದೆ. ಕಮ್ಮಿಗಳು (ಕಮ್ಯುನಿಷ್ಟರು) ಸಣ್ಣ ಮಕ್ಕಳನ್ನು ಹೀಗೆ ದಾರಿತಪ್ಪಿಸುತ್ತಿದ್ದಾರೆ...’

‘ಸಿನ್ಹಾ (ಮೋದಿಯ ಪರಿವಾರ)’ ಎನ್ನುವ ‘ಎಕ್ಸ್‌’ ಖಾತೆಯು ಈ ಪೋಸ್ಟ್‌ ಅನ್ನು ಇದೇ 6ರಂದು ಮಾಡಿದೆ. ಪಠ್ಯ ಪುಸ್ತಕವೊಂದರ ಪಠ್ಯದ ಚಿತ್ರಗಳನ್ನು ಪೋಸ್ಟ್‌ನೊಂದಿಗೆ ಅಂಟಿಸಲಾಗಿದೆ. ಇದನ್ನು ಸುಮಾರು 23 ಲಕ್ಷ ಜನರು ನೋಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇದೇ ಪಠ್ಯದ ಚಿತ್ರಗಳನ್ನು ಬಳಸಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಕೇರಳ ಸರ್ಕಾರವನ್ನು ದೂರಲಾಗಿದೆ. ‘ಕೇರಳ ರಾಜ್ಯದಲ್ಲಿ ಬಹುದೊಡ್ಡದಾದ ಪ್ರಚಾರ ತಂತ್ರವೊಂದು ನಡೆಯುತ್ತಿದೆ. ಕೇರಳ ಸರ್ಕಾರವು ನಡೆಸುವ ಶಾಲೆಗಳಲ್ಲಿ ಇಂಥ ಪಠ್ಯಗಳನ್ನು ಮಕ್ಕಳು ಓದುತ್ತಿದ್ದಾರೆ. ನಾಚಿಕೆಯಾಗಬೇಕು’ ಎಂದು ‘ಹಿಂದೂಪರಿವಾರ್‌’ ಎನ್ನುವ ಇನ್‌ಸ್ಟಾಗ್ರಾಂ ಖಾತೆ ಬರೆದುಕೊಂಡಿದೆ.

ಆದರೆ, ಇದೊಂದು ಸುಳ್ಳು ಸುದ್ದಿ. ಕೇರಳದ ಶಾಲಾ ಮಂಡಳಿಯು ಇಂಥದ್ದೊಂದು ಪಠ್ಯದ ಮುದ್ರಣ ಮಾಡಿಯೇ ಇಲ್ಲ.

–––––––––

ಪಿಟಿಐ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದೆ. ತನ್ನ ಹುಡುಕಾಟದ ಹಾದಿಯನ್ನು ವಿಸ್ತೃತವಾಗಿ ವಿವರಿಸಿದೆ.

‘ಇಂಥ ಪೋಸ್ಟ್‌ಗಳ ಜಾಡು ಹಿಡಿದು ಹೋಗಲಾಯಿತು. ಸಾಮಾಜಿಕ ಜಾಲತಾಣಗಳನ್ನು ತಡಕಾಡುವಾಗ ಕೇರಳದ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ಅವರ ಪೋಸ್ಟ್‌ ದೊರೆಯಿತು.

‘ಮಿಸ್ಟರ್‌ ಸಿನ್ಹಾ’ ಎಂಬ ‘ಎಕ್ಸ್‌’ ಖಾತೆದಾರರು ಕೇರಳ ಸರ್ಕಾರವನ್ನು ಗುರಿಯಾಗಿರಿಸಿಕೊಂಡು ಸುಳ್ಳು ಪ್ರಚಾರವೊಂದನ್ನು ಮಾಡುತ್ತಿದ್ದಾರೆ ಎಂದು ಕೇರಳದ ಪೋಲಿಸ್‌ ಮಹಾನಿರ್ದೇಶಕರಿಗೆ ದೂರನ್ನು ನೀಡಲಾಗಿದೆ. ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಈತನ ಮೇಲೆ ಕಾನೂನ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ’ ಎಂದು ಶಿವನ್‌ಕುಟ್ಟಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು 1.96 ಲಕ್ಷ ಜನರು ನೋಡಿದ್ದಾರೆ.

‘ಇನ್ನೂ ಹೆಚ್ಚಿನ ಹುಡುಕಾಟ ನಡೆಸಿದಾಗ, ಕೇರಳ ರಾಜ್ಯ ಮಂಡಳಿಯ ‘ಸಮಗ್ರ’ ಎನ್ನುವ ವೆಬ್‌ಸೈಟ್‌ ದೊರೆಯಿತು. ಇಲ್ಲಿ ಕೇರಳ ಸರ್ಕಾರವು ಮುದ್ರಿಸುವ ಎಲ್ಲ ಪಠ್ಯದ ಪ್ರತಿಗಳು ದೊರೆಯುತ್ತವೆ.

‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಿರುವ ಪಠ್ಯವನ್ನು ಹುಡುಕಲಾಯಿತು. ಆದರೆ, ಇಂಥ ಚಿತ್ರವಿರುವ, ಪಠ್ಯವೂ ದೊರೆಯಲಿಲ್ಲ. ಆದರೆ, ಸಚಿವ ಶಿವನ್‌ಕುಟ್ಟಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯೊಂದು ಬಂದಿತ್ತು. ‘ಈ ಪಠ್ಯಗಳು ಪೀಸ್‌ ಇಂಟರ್‌ನ್ಯಾಷನಲ್‌ ಶಾಲೆಯದ್ದು, ಕೇರಳ ಸರ್ಕಾರ ಮುದ್ರಿಸಿದ ಪಠ್ಯಗಳಲ್ಲ’ ಎನ್ನುವ ಪ್ರತಿಕ್ರಿಯೆ ಅದಾಗಿತ್ತು.

‘ಇದನ್ನೇ ಆಧಾರವಾಗಿಸಿಕೊಂಡು, ಹೆಚ್ಚಿನ ಹುಡುಕಾಟ ನಡೆಸಿದಾಗ, 2018ರ ಜನವರಿ 8ರಂದು ‘ಬ್ಯುಜಿನೆಸ್‌ ಸ್ಟಾಂಡರ್ಸ್‌’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಸಿಕ್ಕಿತು. ‘ಆಕ್ಷೇಪಾರ್ಹ ಪಠ್ಯವನ್ನು ಪಾಠ ಮಾಡುತ್ತಿರುವುದಕ್ಕಾಗಿ ಕೊಚ್ಚಿಯ ಪೀಸ್‌ ಇಂಟರ್‌ನ್ಯಾಷನಲ್‌ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎನ್ನುವುದು ಆ ವರದಿಯಾಗಿತ್ತು. ಎರ್ನಾಕುಲಂ ಜಿಲ್ಲಾ ಶಿಕ್ಷಣ ಅಧಿಕಾರಿಯ ದೂರಿನ ಮೇಲೆ ಪ್ರಕರಣ ದಾಖಲಾಗಿತ್ತು. ಸಿಬಿಎಸ್‌ಇಯಿಂದಲೂ ಈ ಶಾಲೆ ಮಾನ್ಯತೆ ಪಡೆದಿರಲಿಲ್ಲ ಎಂದೂ ಈ ವರದಿಯಲ್ಲಿ ಹೇಳಲಾಗಿತ್ತು. 2016ರ ಡಿಸೆಂಬರ್‌ 3ರಂದು ‘ದಿ ನ್ಯೂಸ್‌ ಮಿನಿಟ್‌’ ಪ್ರಕಟಿಸಿದ್ದ ವರದಿಯೂ ದೊರೆಯಿತು. ‘ಆಕ್ಷೇಪಾರ್ಹ ಶಾಲಾ ಪಠ್ಯವನ್ನು ಮುದ್ರಿಸಿದ್ದಕ್ಕಾಗಿ ಮೂವರು ಪ್ರಕಾಶಕರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ’ ಎಂದು ಆ ವರದಿಯಲ್ಲಿತ್ತು.

‘ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಠ್ಯದ ಚಿತ್ರಗಳು ಕೇರಳ ಸರ್ಕಾರ ರೂಪಿಸಿದ ಪಠ್ಯಗಳಲ್ಲ, ಬದಲಿಗೆ ಖಾಸಗಿ ಶಾಲೆಯಾದ ಪೀಸ್‌ ಇಂಟರ್‌ನ್ಯಾಷನಲ್‌ ಶಾಲೆಯದ್ದು. ಈ ಪಠ್ಯಗಳಿಗೂ ಕೇರಳ ಶಿಕ್ಷಣ ಇಲಾಖೆಗೂ ಸಂಬಂಧವಿಲ್ಲ’ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

fact check
fact check

pti ಫ್ಯಾಕ್ಟ್ ಚೆಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT