ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ ಹೆಸರಲ್ಲಿ ಕಾಂಗ್ರೆಸ್‌ ದೇಶ ಒಡೆಯುತ್ತಿದೆ’ ಎಂದು ಖರ್ಗೆ, ರಾಹುಲ್ ಹೇಳಿಲ್ಲ'

Published 10 ಮಾರ್ಚ್ 2024, 23:53 IST
Last Updated 10 ಮಾರ್ಚ್ 2024, 23:53 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕ ರಾಹುಲ್‌ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಕಾಂಗ್ರೆಸ್‌ ಪಕ್ಷವು ದೇಶವನ್ನು ಜಾತಿ ಆಧಾರದಲ್ಲಿ ಸದಾಕಾಲ ಒಡೆಯುತ್ತಾ ಬಂದಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿರುವ ಸಾರ್ವಜನಿಕರು, ‘ಖರ್ಗೆ ಸಾಹೇಬರೆ ಹೇಳುತ್ತಿದ್ದಾರೆ. ಜಾತಿ ಆಧಾರದಲ್ಲಿ ದೇಶವನ್ನು ಕಾಂಗ್ರೆಸ್‌ ಒಡೆಯುತ್ತಿದೆ ಅಂತ. ಅದಕ್ಕಾಗಿಯೇ ಮೋದಿಯನ್ನು ಆರಿಸಬೇಕು’ ಎಂದು ಬರೆದುಕೊಂಡಿದ್ದಾರೆ. ‘ಒಂದು ಕಡೆ ಬಿಜೆಪಿಯು ಎಲ್ಲರನ್ನೂ ಒಗ್ಗೂಡಿಸಲು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಒಂದು ಧರ್ಮದಿಂದ ಮತ್ತೊಂದು ಧರ್ಮವನ್ನು, ಒಂದು ಜಾತಿಯಿಂದ ಮತ್ತೊಂದು ಜಾತಿಯನ್ನು ಕಾಂಗ್ರೆಸ್‌ ಒಡೆಯುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗುತ್ತಿದೆ. ‘ರಾಹುಲ್‌ ಗಾಂಧಿ ಅವರು ನಮ್ಮ ತಾರಾ ಪ್ರಚಾರಕರು. ಬಿಜೆಪಿಯನ್ನು ಗೆಲ್ಲಿಸುವುದಕ್ಕೆ ಈ ಹೇಳಿಕೆಯೊಂದೇ ಸಾಕು. ಈ ಬಾರಿ 400 ಸ್ಥಾನಗಳನ್ನು ದಾಟುತ್ತದೆ’ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇವು ತಿರುಚಿದ ಮಾಹಿತಿಗಳು.

ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ಭಾಷಣಗಳನ್ನು ತಪ್ಪು ಅರ್ಥ ಬರುವಂತೆ ತಿರುಚಲಾಗಿದೆ. ಎರಡೂ ಭಾಷಣಗಳ ಪೂರ್ಣ ಪಾಠಗಳು ಕಾಂಗ್ರೆಸ್‌ನ ಯೂಟ್ಯೂಬ್‌ ಖಾತೆಗಳಲ್ಲಿವೆ. ಖರ್ಗೆ ಅವರು ಬಿಹಾರದ ಔರಂಗಾಬಾದ್‌ನಲ್ಲಿ ಮಾತನಾಡಿದ್ದನ್ನು ತಿರುಚಲಾಗಿದೆ. ‘ಜಾತಿ ಗಣತಿ ನಡೆಸಿ ಎಂದು ಬೇಡಿಕೆ ಇಡುವುದರಲ್ಲಿ ತಪ್ಪೇನಿದೆ? ಮೋದಿ ಅವರು ಹೇಳುತ್ತಾರೆ, ‘ಕಾಂಗ್ರೆಸ್‌ ಪಕ್ಷವು ದೇಶವನ್ನು ಜಾತಿ ಹೆಸರಿನಲ್ಲಿ ಒಡೆಯುತ್ತಿದೆ ಎಂದು. ಆದರೆ, ನಾವು ಏನು ಮಾಡಿದ್ದೇವೆ? ಜನರಿಗೆ ನ್ಯಾಯ ಒದಗಿಸಲು ಯತ್ನಿಸುತ್ತಿದ್ದೇವೆ’ ಎಂದಿದ್ದಾರೆ. ಮೋದಿ ಅವರು ಹೀಗೆ ಹೇಳುತ್ತಾರೆ ಎಂದು ಖರ್ಗೆ ಅವರು ಹೇಳಿದ್ದನ್ನು, ಖರ್ಗೆ ಅವರೇ ಹೇಳಿದ್ದಾರೆ ಎಂದು ತಿರುಚಲಾಗಿದೆ. ‘...ಒಂದು ಕಡೆ, ಧರ್ಮ–ಜಾತಿ ಹೆಸರಿನಲ್ಲಿ ಬಿಜೆಪಿ ಜನರನ್ನು ಒಡೆಯುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್‌ ಪಕ್ಷವು ಎಲ್ಲರನ್ನು ಒಗ್ಗೂಡಿಸಲು ಯತ್ನಿಸುತ್ತಿದೆ’ ಎಂದು ರಾಹುಲ್‌ ಗಾಂಧಿ ಮಧ್ಯ ಪ್ರದೇಶದಲ್ಲಿ ಭಾಷಣ ಮಾಡಿದ್ದಾರೆ. ರಾಹುಲ್‌ ಅವರು ಹೇಳಿದ್ದರ ಸಂಪೂರ್ಣ ವಿರುದ್ಧವಾದ ಅರ್ಥ ಬರುವಂತೆ ವಿಡಿಯೊವನ್ನು ತಿರುಚಲಾಗಿದೆ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT