ನವದೆಹಲಿ: ಕೇಂದ್ರೀಯ ಹಾಗೂ ರಾಜ್ಯ ಪೊಲೀಸ್ ಪಡೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 1,037 ಸಿಬ್ಬಂದಿಗೆ ಕೇಂದ್ರ ಸರ್ಕಾರವು ಸ್ವಾತಂತ್ರ್ಯೋತ್ಸವದ ಮುನ್ನಾದಿನ (ಬುಧವಾರ) ಪೊಲೀಸ್ ಪದಕಗಳನ್ನು ಘೋಷಿಸಿದೆ.
ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ಪ್ರಕಾರ, ರಾಷ್ಟ್ರಪತಿ ಶೌರ್ಯ ಪದಕ (ಪಿಎಂಜಿ) ಸೇರಿದಂತೆ ಶೌರ್ಯ ಪದಕಕ್ಕೆ 214 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ.
ತೆಲಂಗಾಣದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಛದುವು ಯದಯ್ಯ ಅವರಿಗೆ ಏಕೈಕ ರಾಷ್ಟ್ರಪತಿ ಶೌರ್ಯ ಪದಕ ಘೋಷಣೆಯಾಗಿದೆ. ಅವರು 2022ರ ಜುಲೈ 25ರಂದು ಇಬ್ಬರು ಕುಖ್ಯಾತ ಸರಗಳ್ಳರು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರನ್ನು ಬಂಧಿಸಿದ್ದರು.
ದುಷ್ಕರ್ಮಿಗಳು ಸಾಕಷ್ಟು ಬಾರಿ ಚಾಕುವಿನಿಂದ ಇರಿದರೂ, ಅವರು ತಪ್ಪಿಸಿಕೊಳ್ಳದಂತೆ ಹಿಡಿದಿದ್ದ ಯದಯ್ಯ, ಗಂಭೀರ ಗಾಯಗಳೊಂದಿಗೆ ಸುಮಾರು 17 ದಿನ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಗೃಹ ಸಚಿವಾಲಯ ತಿಳಿಸಿದೆ.
ಗರಿಷ್ಠ 52 ಶೌರ್ಯ ಪದಕಗಳು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗೆ ಲಭಿಸಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ 31, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ತಲಾ 17, ಛತ್ತೀಸಗಢ ಪೊಲೀಸರಿಗೆ 15, ಮಧ್ಯಪ್ರದೇಶ ಪೊಲೀಸರಿಗೆ 12 ಪದಕಗಳು ದೊರೆತಿವೆ.
ವಿಶಿಷ್ಟ ಸೇವೆ ಸಲ್ಲಿಸಿದ 94 ಮಂದಿಗೆ ರಾಷ್ಟ್ರಪತಿಯವರ ಸೇವಾ ಪದಕ ಘೋಷಿಸಲಾಗಿದೆ. ಶ್ಲಾಘನೀಯ ಸೇವೆಗಾಗಿ 729 ಮಂದಿಗೆ ಪದಕ ಪ್ರಕಟಿಸಲಾಗಿದೆ.