ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತೆ ಸೌಮ್ಯ ಕೊಲೆ: ಐವರು ದೋಷಿ

Published 18 ಅಕ್ಟೋಬರ್ 2023, 14:04 IST
Last Updated 18 ಅಕ್ಟೋಬರ್ 2023, 14:04 IST
ಅಕ್ಷರ ಗಾತ್ರ

ನವದೆಹಲಿ: ಹದಿನೈದು ವರ್ಷಗಳ ಹಿಂದೆ ನಡೆದ ಟಿ.ವಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಐವರು ಆರೋಪಿಗಳನ್ನು  ನವದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು, ತಪ್ಪಿತಸ್ಥರೆಂದು ಘೋಷಿಸಿ ತೀರ್ಪು ನೀಡಿದೆ.

ರವಿಕಪೂರ್‌, ಅಮಿತ್‌ ಶುಕ್ಲಾ, ಬಲ್ಜೀತ್‌ ಮಲಿಕ್, ಅಜಿತ್‌ಕುಮಾರ್‌ ಹಾಗೂ ಅಜಯ್‌ ಸೇಥಿ ಅವರ ಮೇಲಿನ ಆರೋಪ ಸಾಬೀತಾಗಿದೆ. ಎಲ್ಲರೂ ದೋಷಿಗಳಾಗಿದ್ದಾರೆ ಎಂದು ಹೆಚ್ಚುವರಿ ನ್ಯಾಯಾಧೀಶ ರವೀಂದ್ರಕುಮಾರ್‌ ಪಾಂಡೆ ಬುಧವಾರ ನ್ಯಾಯಾಲಯದಲ್ಲಿ ಪ್ರಕಟಿಸಿದರು.

ಯಾವುದೇ, ಸಂಶಯಕ್ಕೆ ಆಸ್ಪದ ಇಲ್ಲದಂತೆ ಸಾಕ್ಷ್ಯಗಳನ್ನು ಸಾಬೀತುಪಡಿಸುವಲ್ಲಿ  ಪ್ರಾಸಿಕ್ಯೂಷನ್ ಸಫಲವಾಗಿದೆ ಎಂದ ಅವರು, ಅಕ್ಟೋಬರ್ 26ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿದರು.

ಈ ಐವರ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಹಾಗೂ ಕ್ರಿಮಿನಲ್‌ ಪಿತೂರಿ ಎಸಗಿದ ಆರೋಪವಿದೆ. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಕೃತ್ಯಕ್ಕೆ ಸಹಕರಿಸಿದ ಸೇಥಿ ವಿರುದ್ಧ ಐಪಿಸಿ ಸೆಕ್ಷನ್ 411 (ಕಳವಾದ ಆಸ್ತಿಯನ್ನು ಅಪ್ರಮಾಣಿಕವಾಗಿ ಸ್ವೀಕರಿಸುವುದು) ಅಡಿ ಆರೋಪ ಋಜುವಾತಾಗಿದೆ.

ಸೌಮ್ಯ ಅವರು 2008ರ ಸೆಪ್ಟೆಂಬರ್‌ 30ರಂದು ಮುಂಜಾನೆ 3.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ತನ್ನ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ದರೋಡೆ ಮಾಡುವ ಉದ್ದೇಶದಿಂದ ವಸಂತ ವಿಹಾರ್‌ ಬಳಿ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಅವರ ತಲೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದರು. ಈ ಕೃತ್ಯ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು.

ಪೊಲೀಸರು ಐವರನ್ನೂ ಬಂಧಿಸಿದ್ದರು. 2009ರ ಮಾರ್ಚ್‌ನಿಂದ ಜೈಲಿನಲ್ಲಿದ್ದಾರೆ.

ಆಯುಧ ನೀಡಿದ ಸುಳಿವು:

ಸೌಮ್ಯ ಕೊಲೆ ನಡೆದ ಒಂದು ತಿಂಗಳ ಬಳಿಕ ಫರಿದಾಬಾದ್‌ನಲ್ಲಿ ಐಟಿ ಉದ್ಯೋಗಿ ಜಿಗೀಶಾ ಘೋಷ್ ಎಂಬುವರ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಆಯುಧವು ಸೌಮ್ಯ ಕೊಲೆ ಪ್ರಕರಣ ಭೇದಿಸಲು ಮಹತ್ವದ ಸುಳಿವು ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘೋಷ್‌ ಅವರ ಕೊಲೆಯಲ್ಲಿ ಭಾಗಿಯಾದ ಕಪೂರ್‌, ಶುಕ್ಲಾ ಹಾಗೂ ಮಲಿಕ್ ಅವರನ್ನು ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದಾಗ ಸೌಮ್ಯ ಅವರನ್ನು ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದರು. ಬಳಿಕ ಉಳಿದ ಇಬ್ಬರನ್ನು ಬಂಧಿಸಲಾಗಿತ್ತು.

ವಿಚಾರಣೆಯ ವಿಳಂಬ ಪ್ರಶ್ನಿಸಿ ಮಲಿಕ್, 2019ರಲ್ಲಿ ದೆಹಲಿ ಹೈಕೋರ್ಟ್‌ನ ಮೆಟ್ಟಿಲೇರಿದ್ದ. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಆರೋಪಪಟ್ಟಿ ಸಲ್ಲಿಕೆಯಾಗಿ ಒಂಬತ್ತುವರೆ ವರ್ಷಗಳು ಕಳೆದರೂ ತೀರ್ಪು ಪ್ರಕಟಿಸಲು ವಿಳಂಬ ಧೋರಣೆ ಏಕೆ? ಎಂದು ವಿಚಾರಣಾ ನ್ಯಾಯಾಲಯವನ್ನು ಪ್ರಶ್ನಿಸಿತ್ತು.

ಸೂಕ್ತ ಸಾಕ್ಷ್ಯಾಧಾರ ಹಾಜರುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಳಂಬ ಮಾಡುತ್ತಿದೆ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕದಲ್ಲೂ ವಿಳಂಬವಾಗಿದೆ ಎಂದು ನ್ಯಾಯಾಲಯವು, ಹೈಕೋರ್ಟ್‌ಗೆ ತಿಳಿಸಿತ್ತು. 

ಘೋಷ್‌ ಕೊಲೆ ಪ್ರಕರಣದಲ್ಲಿ 2016ರ ಆಗಸ್ಟ್‌ನಲ್ಲಿ ವಿಚಾರಣಾ ನ್ಯಾಯಾಲಯವು, ಕಪೂರ್‌ ಹಾಗೂ ಶುಕ್ಲಾಗೆ ಮರಣದಂಡನೆ ಹಾಗೂ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2018ರ ಜನವರಿಯಲ್ಲಿ ಹೈಕೋರ್ಟ್‌ ಇಬ್ಬರು ಅಪರಾಧಿಗಳಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಿತ್ತು. ಮಲಿಕ್‌ಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT