ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಕರಿ ಆಹ್ವಾನ: ಠಾಕ್ರೆ ಹೇಳಿಕೆಗೆ ಫಡಣವೀಸ್‌ ತಿರುಗೇಟು

Published 8 ಮಾರ್ಚ್ 2024, 15:08 IST
Last Updated 8 ಮಾರ್ಚ್ 2024, 15:08 IST
ಅಕ್ಷರ ಗಾತ್ರ

ಮುಂಬೈ: ಬಿಜೆಪಿಯ ಹಿರಿಯ ನಾಯಕ ನಿತಿನ್‌ ಗಡ್ಕರಿ ಅವರು ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಮಹಾ ವಿಕಾಸ್‌ ಅಘಾಡಿ(ಎಂವಿಎ)ಯಿಂದ ಸ್ಪರ್ಧಿಸುವಂತೆ ಶಿವಸೇನಾ (ಉದ್ಧವ್‌ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ, ನಾಗ್ಪುರದಿಂದ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ, ಕೇಂದ್ರ ರಸ್ತೆ ಸಾರಿಗೆ ಸಚಿವ ಗಡ್ಕರಿ ಅವರ ಹೆಸರು ಇಲ್ಲ. 

ಗುರುವಾರ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಠಾಕ್ರೆ, ‘ದೆಹಲಿ ಎದುರು ತಲೆತಗ್ಗಿಸಬೇಡಿ. ಅವರ ಅಹಂಕಾರಕ್ಕೆ ಪೆಟ್ಟು ಕೊಡಿ. ಮಹಾ ವಿಕಾಸ ಅಘಾಡಿಗೆ ಬನ್ನಿ. ನಿಮ್ಮನ್ನು ಚುನಾಯಿಸುವುದು ನಮ್ಮ ಜವಾಬ್ದಾರಿ’ ಎಂದು ಕರೆ ನೀಡಿದ್ದರು.

‘ಗಡ್ಕರಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಿಸಬೇಕೆಂಬ ಬಾಳಾ ಸಾಹೇಬ್‌ ಠಾಕ್ರೆ ಅವರ  ಕನಸನ್ನು ದಾಖಲೆಯ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ. ಅವರು ಬಿಜೆಪಿಯ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತ. ಆದರೂ ಮೊದಲ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಮೋದಿ ಮತ್ತು ಅಮಿತ್‌ ಶಾಗಿಂತ ಅವರು ಹಿರಿಯರು. ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವ ಶಾ ಹೆಸರು ಮೊದಲ ಪಟ್ಟಿಯಲ್ಲಿದೆ’ ಎಂದು ಇತ್ತೀಚೆಗೆ ವಾಗ್ದಾಳಿಯನ್ನೂ ನಡೆಸಿದ್ದರು.

ಠಾಕ್ರೆ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಫಡಣವೀಸ್‌, ‘ಅವರ ಪಕ್ಷವು ಗೊಂದಲದಲ್ಲಿದೆ. ಪಕ್ಷದ ಅಧ್ಯಕ್ಷರು, ಗಲ್ಲಿಯಲ್ಲಿ ನಿಂತ ವ್ಯಕ್ತಿಯನ್ನು ಅಮೆರಿಕ ಅಧ್ಯಕ್ಷನನ್ನಾಗಿ ಮಾಡುತ್ತೇನೆ ಎಂದು ಕರೆದಂತೆ ಗಡ್ಕರಿ ಅವರನ್ನು ಕರೆಯುತ್ತಿದ್ದಾರೆ. ಆದರೆ ಗಡ್ಕರಿ ದೊಡ್ಡ ನಾಯಕ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT