ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಂದ್ರ ಮೋದಿ ಸಂ‍ಪುಟಕ್ಕೆ ಆರು ಮಾಜಿ ಸಿಎಂಗಳು 

Published 9 ಜೂನ್ 2024, 18:50 IST
Last Updated 9 ಜೂನ್ 2024, 18:50 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಸಂಪುಟದಲ್ಲಿ ಆರು ಮಾಜಿ ಮುಖ್ಯಮಂತ್ರಿಗಳು ಸ್ಥಾನ ಪಡೆದಿದ್ದಾರೆ. 

ಕರ್ನಾಟಕದ ಎಚ್‌.ಡಿ.ಕುಮಾರಸ್ವಾಮಿ, ಉತ್ತರ ಪ್ರದೇಶದ ರಾಜನಾಥ ಸಿಂಗ್‌, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್‌, ಹರಿಯಾಣದ ಮನೋಹರ್‌ ಲಾಲ್‌ ಖಟ್ಟರ್‌, ಬಿಹಾರದ ಜಿತನ್‌ ರಾಮ್‌ ಮಾಂಝಿ ಹಾಗೂ ಅಸ್ಸಾಂನ ಸರ್ಬಾನಂದ ಸೊನೊವಾಲ್‌ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕುಮಾರಸ್ವಾಮಿ ಹಾಗೂ ಮಾಂಝಿ ಹೊರತುಪಡಿಸಿ ಉಳಿದವರು ಬಿಜೆಪಿಯವರು. ನರೇಂದ್ರ ಮೋದಿ ಅವರು ಈ ಹಿಂದೆ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. 

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್‌, ಮಹಾರಾಷ್ಟ್ರದ ನಾರಾಯಣ ರಾಣೆ, ತ್ರಿಪುರದ ಬಿಪ್ಲವ್‌ ಕುಮಾರ್ ದೇವ್‌ ಹಾಗೂ ಉತ್ತರಾಖಂಡದ ತ್ರಿವೇಂದ್ರ ಸಿಂಗ್‌ ರಾವತ್‌ ಅವರಿಗೆ ಸಂಪುಟಕ್ಕೆ ಸೇರ್ಪಡೆಯಾಗುವ ಭಾಗ್ಯ ಸಿಕ್ಕಿಲ್ಲ. ಬಿಪ್ಲವ್ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಉಳಿದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಿಜೇತರಾಗಿದ್ದರು. ರಾಣೆ ಅವರು ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. 

ಜೆಡಿಯು, ಟಿಡಿಪಿಗೆ ತಲಾ ಎರಡು ಖಾತೆ 

ಮೈತ್ರಿಕೂಟದ ಪ್ರಮುಖ ಮಿತ್ರ ಪಕ್ಷಗಳಾದ ಜೆಡಿಯು ಹಾ್ಗೂ ಟಿಡಿಪಿಗೆ ತಲಾ ಎರಡು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಮಿತ್ರ ಪಕ್ಷಗಳಿಗೆ ಒಟ್ಟು 11 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. 

ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 16 ಕ್ಷೇತ್ರಗಳಲ್ಲಿ ಹಾಗೂ ಜೆಡಿಯು 12 ಕ್ಷೇತ್ರಗಳಲ್ಲಿ ಗೆದ್ದಿದ್ದವು. ನಾಲ್ಕು ಸಚಿವ ಸ್ಥಾನ ಹಾಗೂ ಲೋಕಸಭಾಧ್ಯಕ್ಷ ಸ್ಥಾನ ನೀಡಬೇಕು ಎಂದು ಟಿಡಿಪಿ ನಾಯಕರು ಪಟ್ಟು ಹಿಡಿದಿದ್ದರು. ಲೋಕಸಭಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಕಡಿಮೆ. ಲೋಕಸಭೆಯ ಉಪಸಭಾಧ್ಯಕ್ಷ ಸ್ಥಾನ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಉತ್ಸುಕರಾಗಿದ್ದಾರೆ. ಇನ್ನೊಂದೆಡೆ, ಏಳು ಸ್ಥಾನಗಳನ್ನು ಗೆದ್ದಿರುವ ಶಿವಸೇನಾಕ್ಕೆ ಸದ್ಯ ಒಂದು ಸಚಿವ ಸ್ಥಾನ ನೀಡಲಾಗಿದೆ. ಮಿತ್ರ ಪಕ್ಷಗಳಾದ ಜೆಡಿಎಸ್‌, ಎಲ್‌ಜೆಪಿ, ಅಪ್ನಾದಳ್‌, ಎಚ್‌ಎಎಂ, ಆರ್‌ಎಲ್‌ಡಿ, ಆರ್‌ಪಿಐ ಹಾಗೂ ಎಜೆಎಸ್‌ಯು ಪಕ್ಷಕ್ಕೆ ತಲಾ ಒಂದು ಖಾತೆ ನೀಡಲಾಗಿದೆ. ಎನ್‌ಸಿಪಿ ಹಾಗೂ ಜನಸೇನಾ ಪಕ್ಷಗಳಿಗೆ ಯಾವುದೇ ಸಚಿವ ಸ್ಥಾನ ಸಿಕ್ಕಿಲ್ಲ. ಜತೆಗೆ, ಮೂರರಿಂದ ಐದು ಖಾತೆಗಳನ್ನು ಕೇಳಿದ್ದ ಜೆಡಿಯು, ಟಿಡಿಪಿ ಹಾಗೂ ಶಿವಸೇನಾ ಪಕ್ಷಗಳ ಒತ್ತಡಗಳಿಗೆ ಬಿಜೆಪಿ ವರಿಷ್ಠರು ಮಣಿದಿಲ್ಲ.  

ಖರ್ಗೆ ಭಾಗಿ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದರು. ಆದರೆ, ‘ಇಂಡಿಯಾ’ ಮೈತ್ರಿಕೂಟದ ಇತರ ಪಕ್ಷಗಳ ನಾಯಕರು ಗೈರುಹಾಜರಾದರು. 

ಪ್ರತಿಪಕ್ಷದ ನಾಯಕರಾಗಿ ಖರ್ಗೆ ಅವರು ಸಮಾರಂಭದಲ್ಲಿ ಪಾಲ್ಗೊಂಡರು. ಆದರೆ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಆರ್‌ಜೆಡಿ, ಡಿಎಂಕೆ, ಶಿವಸೇನೆ (ಯುಬಿಟಿ), ಎಎಪಿ, ಸಿಪಿಎಂ, ಸಿಪಿಐ, ಸಿಪಿಐ (ಎಂಎಲ್), ಜೆಎಂಎಂ ಮತ್ತು ಆರ್‌ಎಸ್‌ಪಿ ಸೇರಿದಂತೆ ಇತರ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸಿದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಈ ನಡೆ ಮಿತ್ರ ಪಕ್ಷಗಳಿಗೆ ಸಮಾಧಾನ ತಂದಿಲ್ಲ. 

ಬಿಟ್ಟೂ, ಕುರಿಯನ್‌ ಅಚ್ಚರಿ ಸೇರ್ಪಡೆ

ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಲುಧಿಯಾನ ಕ್ಷೇತ್ರದಲ್ಲಿ ಸೋತಿರುವ ರವನೀತ್ ಸಿಂಗ್ ಬಿಟ್ಟೂ ಅವರಿಗೆ ಅದೃಷ್ಟ ಖುಲಾಯಿಸಿದೆ. ಅವರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕೇರಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಾರ್ಜ್‌ ಕುರಿಯನ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಗಿದೆ. ಅವರು ಉಭಯ ಸದನಗಳ ಸದಸ್ಯರಲ್ಲ. ಇವರಿಬ್ಬರದ್ದೂ ಅಚ್ಚರಿಯ ಆಯ್ಕೆ. 

ಬಿಟ್ಟೂ ಅವರು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಅವರ ಮೊಮ್ಮಗ. 2014ರಿಂದ ಲುಧಿಯಾನ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದ ಅವರು ಲೋಕಸಭಾ ಚುನಾವಣೆಗೆ ಮುನ್ನ ಕಮಲ ಪಾಳಯಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಚುನಾವಣೆಯಲ್ಲಿ ಸೋತಿದ್ದರು. 2019ರಲ್ಲಿ ಪಂಜಾಬ್‌ನಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದಿತ್ತು. ಈ ಸಲ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಪಕ್ಷವು ಯಾವುದೇ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ, ಆದರೆ, ಪಕ್ಷದ ಮತ ಗಳಿಕೆ ಪ್ರಮಾಣ ಹೆಚ್ಚಾಗಿದೆ. ಪಂಜಾಬ್‌ನಲ್ಲಿ ಹೊಸ ತಲೆಮಾರಿನ ನಾಯಕರನ್ನು ಬೆಳೆಸುವ ಉದ್ದೇಶದಿಂದ ಬಿಟ್ಟೂ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ. 

ಕ್ಯಾಥಲಿಕ್ ಸಮುದಾಯದ ಕುರಿಯನ್ ಅವರು 40 ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದೆ. ಜತೆಗೆ, ಪಕ್ಷದ ಮತ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಸುರೇಶ್‌ ಗೋಪಿ ಗೆಲುವಿನಲ್ಲಿ ಕ್ರೈಸ್ತ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ, ಕ್ರೈಸ್ತ ಮತ ಬ್ಯಾಂಕ್ ಅನ್ನು ಇನ್ನಷ್ಟು ಗಟ್ಟಿಗೊಳಿಸಲು ಕುರಿಯನ್ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಕೇರಳ ವಿಧಾನಸಭೆಗೆ 2026ರಲ್ಲಿ ಚುನಾವಣೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT