ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

71 ಅಮಾಯಕರ ಹತ್ಯೆ

ಅಸ್ಸಾಂ: ಆದಿವಾಸಿಗಳ ಮೇಲೆ ಬೋಡೊ ಉಗ್ರರ ದಾಳಿ
Last Updated 24 ಡಿಸೆಂಬರ್ 2014, 19:44 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ಅಸ್ಸಾಂನಲ್ಲಿ ಬುಡಕಟ್ಟು ಜನರ ನೆಲೆಗಳ ಮೇಲೆ ಬೋಡೊ ಉಗ್ರರು ಮಂಗಳ­ವಾರ ರಾತ್ರಿ ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 72ಕ್ಕೆ ಏರಿದೆ.

ಶಾಂತಿ ಮಾತುಕತೆಗೆ ವಿರೋಧ ವ್ಯಕ್ತಪಡಿಸಿರುವ ಬೋಡೊಲ್ಯಾಂಡ್‌ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ (ಎನ್‌ಡಿಎಫ್‌ಬಿ) ಸಾಂಗ್‌ಬಿಜಿತ್‌ ಬಣಕ್ಕೆ ಸೇರಿದ ಭಾರಿ ಶಸ್ತ್ರಸಜ್ಜಿತ ಉಗ್ರರು ಸೋನಿತ್‌ಪುರ ಮತ್ತು ಕೋಕರಾ­ಝಾರ್‌ ಜಿಲ್ಲೆಗಳಲ್ಲಿನ ಆದಿವಾಸಿಗಳ ನಾಲ್ಕು ಕುಗ್ರಾಮಗಳ ಮೇಲೆ ದಾಳಿ ನಡೆಸಿ ಸ್ಥಳೀಯರನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ ಸೋನಿತ್‌ಪುರ ಮತ್ತು ಕೋಕರಾಝಾರ್‌ನಲ್ಲಿ ಹೆಚ್ಚು ಸಾವು – ನೋವುಗಳು ಸಂಭವಿಸಿವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಐಜಿಪಿ ಎಸ್‌.ಎನ್‌. ಸಿಂಗ್‌ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರಾಜನಾಥ್‌ ಭೇಟಿ: ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಬುಧವಾರ ಸಂಜೆ ಇಲ್ಲಿಗೆ ಬಂದಿದ್ದಾರೆ.  ಸಂತ್ರಸ್ತ ಪ್ರದೇಶಗಳಿಗೆ ಗುರು­ವಾರ ಭೇಟಿ ನೀಡಲಿರುವ ರಾಜನಾಥ್‌, ತಕ್ಷಣವೇ ಸಿ.ಎಂ ತರುಣ್‌ ಗೊಗೋಯ್‌, ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಮತ್ತು ಭದ್ರತಾ ಪಡೆಗಳ ಮುಖ್ಯಸ್ಥ­ರೊಂದಿಗೆ   ಮಾತುಕತೆ ನಡೆಸಿದರು.

ಅರೆಸೇನಾ ತುಕಡಿ: ರಾಜ್ಯದಲ್ಲಿ ಹಿಂಸಾಚಾರವು ಇನ್ನಷ್ಟು ಉಲ್ಬಣಿ­­ಸದಂತೆ ತಡೆಯಲು ಕೇಂದ್ರ ಸರ್ಕಾರ 5 ಸಾವಿರ ಅರೆಸೇನಾ ಸಿಬ್ಬಂದಿಯ ತುಕಡಿಗಳನ್ನು ರವಾನಿಸಿದೆ.

ಮುಖ್ಯಕಾರ್ಯದರ್ಶಿ ನಿರ್ಲಕ್ಷ್ಯ: ರಾಜ್ಯದಲ್ಲಿ ಜನಾಂಗೀಯ ಹಿಂಸೆ ನಡೆಯುತ್ತಿದ್ದರೂ, ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿತೇಶ್‌ ಖೋಸ್ಲಾ

ಅವರು ಇಲ್ಲಿಂದ 200 ಕಿ.ಮೀ. ದೂರದ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ತಮ್ಮ ಕುಟುಂಬ ಸದಸ್ಯ­ರೊಂದಿಗೆ ಆನೆ ಸವಾರಿಯ ಸಡಗರದಲ್ಲಿರುವ ಸಂಗತಿ ಸ್ಥಳೀಯ ದೃಶ್ಯ ಮಾಧ್ಯಮಗಳು ಬಿತ್ತರಿಸಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಗೊಗೋಯ್‌ ಅವರು ಹತ್ಯೆ ಘಟನೆ ಗೊತ್ತಾಗುತ್ತಿದ್ದಂತೆಯೇ ಮುಖ್ಯ ಕಾರ್ಯದರ್ಶಿ­ಯವರು ಪ್ರವಾಸ ಮೊಟಕುಗೊಳಿಸಿ ವಾಪಸ್‌ ಬರಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಡಕಟ್ಟು ಜನರ ಪ್ರತೀಕಾರ: ಉಗ್ರರ ದಾಳಿಯಿಂದ ಆಕ್ರೋಶ­ಗೊಂಡು ಬುಧವಾರ ಪ್ರತಿಭಟನೆ ನಡೆಸಿದ ಬುಡಕಟ್ಟು ಜನರು ಪ್ರತೀಕಾರ­ವಾಗಿ ಸೋನಿತ್‌ಪುರದಲ್ಲಿನ ಫುಲೊಗುರಿ ಪ್ರದೇಶ­ದಲ್ಲಿ ಬೋಡೊ ಸಮುದಾಯಕ್ಕೆ ಸೇರಿದ ಐದು ಮನೆಗಳಿಗೆ ಹಾಗೂ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ.

ಚಹಾ ತೋಟದ ಸಾವಿರಾರು ಕಾರ್ಮಿಕರು ಬಿಲ್ಲು ಮತ್ತು ಬಾಣ­ಗಳನ್ನು ಹಿಡಿದು ಪ್ರತಿಭಟನಾ ರ್‍ಯಾಲಿ­ಗಳನ್ನು ನಡೆಸಿದರು. ಸೋನಿತ್‌­ಪುರದ ಧೆಕೈಜುಲಿ ಎಂಬಲ್ಲಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿದರು. ಈ ಹಳ್ಳಿಗಳಿಗೆ ಸಮರ್ಪಕ ರಸ್ತೆ ಸಂಪರ್ಕ­ವಿಲ್ಲದಿರುವುದರಿಂದ ಪರಿಶೀಲನಾ ಕಾರ್ಯಕ್ಕೆ ಅಡ್ಡಿ­ಯುಂಟಾಗಿದೆ.

ದಾಳಿ ಕುರಿತು ಅಸ್ಸಾಂ ಮುಖ್ಯಮಂತ್ರಿ ತರುಣ್‌ ಗೊಗೋಯ್ ತೀವ್ರ ಆತಂಕ ವ್ಯಕ್ತಪಡಿಸಿದ್ದು, ‘ಪರಿಸ್ಥಿತಿ ಕೈ   ಮೀರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳ­ಲಾಗಿದೆ. ಬೋಡೊ ಉಗ್ರರು ಅತ್ಯಂತ ಹೇಯ ಮತ್ತು ಕ್ರೂರ ದಾಳಿ ನಡೆಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲು ದೊಡ್ಡ­ಮಟ್ಟ­ದಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ’ ಎಂದು ಗೊಗೋಯ್‌ ಹೇಳಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಕಟ್ಟೆಚ್ಚರ
ಇಟಾನಗರ: ಅಸ್ಸಾಂನಲ್ಲಿ ಹಿಂಸಾಚಾರ ತೀವ್ರ­ಗೊಂಡಿ­ರು­ವುದರಿಂದ ನೆರೆಯ ಅರು­ಣಾಚಲ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸ­ಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT