ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಲೀಟರ್ ಹಾಲಿಗೆ ಒಂದು ಬಕೆಟ್‌ ನೀರು ಮಿಶ್ರಣ ಮಾಡಿ 81 ಮಕ್ಕಳಿಗೆ ವಿತರಣೆ

ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ನೀರು ಮಿಶ್ರಣ: ಶಿಕ್ಷಕ ಅಮಾನತು
Last Updated 30 ನವೆಂಬರ್ 2019, 7:19 IST
ಅಕ್ಷರ ಗಾತ್ರ

ಸೋನ್‌ಭದ್ರಾ : ಒಂದು ಲೀಟರ್‌ ಹಾಲಿಗೆ ಒಂದು ಬಕೆಟ್‌ ನೀರು ಮಿಶ್ರಣ ಮತ್ತು ಬಿಸಿಯೂಟದ ಭಾಗವಾಗಿ ಒಟ್ಟು 81 ಮಕ್ಕಳಿಗೆ ವಿತರಣೆ. ಇದು, ಉತ್ತರ ಪ್ರದೇಶದ ಚೋಪನ್‌ ಬ್ಲಾಕ್‌ನ ಸಲೈಬನ್ವಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಪರಿಸ್ಥಿತಿ.

ಬುಧವಾರ ನಡೆದಿರುವ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಜತೆಗೆ, ಕೊಟಾ ಗ್ರಾಮ ಪಂಚಾಯಿತಿಯ ‘ಶಿಕ್ಷಣ ಮಿತ್ರ’ ಸಮಿತಿಯ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ.

ಶಾಲೆಯ ಅಡುಗೆ ಕೆಲಸಗಾರ ಒಂದು ಲೀಟರ್‌ ಹಾಲಿಗೆ ನೀರು ಮಿಶ್ರಣ ಮಾಡಿ ಮಕ್ಕಳಿಗೆ ವಿತರಿಸಿದ ದೃಶ್ಯ ವಿಡಿಯೊದಲ್ಲಿ ಇತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎಸ್.ರಾಜಲಿಂಗನ್ ಶುಕ್ರವಾರ ಶಾಲೆಗೆ ಭೇಟಿ ನೀಡಿದ್ದರು. ಕರ್ತವ್ಯ ಲೋಪಕ್ಕಾಗಿ ಶಿಕ್ಷಕನನ್ನು ಅಮಾನತುಗೊಳಿಸುವಂತೆ ಮತ್ತು ಶಿಕ್ಷಣ ಸಮಿತಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದ್ದರು.

‘ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’
ಎಂದು ಶಿಕ್ಷಣ ಇಲಾಖೆ ಅಧಿಕಾರಿ ಗೋರಖ್‌ನಾಥ್‌ ಪಟೇಲ್‌ ತಿಳಿಸಿದರು. ಇನ್ನೊಬ್ಬ ಅಧಿಕಾರಿ ಮುಕೇಶ್‌ ರಾಯ್‌, ‘ಅಗತ್ಯವಿದ್ದಷ್ಟು ಹಾಲು ಲಭ್ಯವಿದ್ದರೂ ಅಡುಗೆ ಕೆಲಸಗಾರ 1 ಲೀಟರ್‌ ಮಾತ್ರ ಬಳಸುತ್ತಿದ್ದರು’ ಎಂದು ಹೇಳಿದರು.

ಇನ್ನೊಂದು ವಿಡಿಯೊದಲ್ಲಿ ಅಡುಗೆ ಸಹಾಯಕಿಯೊಬ್ಬರು ತಾನು ಬಕೆಟ್‌ ನೀರಿನ ಜೊತೆಗೆ ಹಾಲು ಮಿಶ್ರಣ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಿಸಿಯೂಟ ವಿತರಣೆಯಲ್ಲಿ ಈ ರೀತಿಯ ಲೋಪ ಇತ್ತೀಚಿನ ದಿನಗಳಲ್ಲಿ ಎರಡನೇ ಬಾರಿಗೆ ವರದಿಯಾಗುತ್ತಿದೆ.

ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಮಿರ್ಜಾಪುರ ಜಿಲ್ಲೆಯ ಸಿಯೂರ್‌ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಮಹಿಳೆಯರು ಮಕ್ಕಳಿಗೆ ಬಿಸಿಯೂಟದಲ್ಲಿ ರೊಟ್ಟಿ ಮತ್ತು ಉಪ್ಪು ಮಾತ್ರ ವಿತರಿಸುತ್ತಿದ್ದ ವಿಡಿಯೊ ವೈರಲ್‌ ಆಗಿತ್ತು. ಆ ಪ್ರಕರಣವೂ ವ್ಯಾಪಕ ಟೀಕೆಗೆ ಒಳಗಾಗಿದ್ದು, ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿತ್ತು.

ವಿರೋಧ ಪಕ್ಷಗಳ ತರಾಟೆ

ಶಾಲೆಯಲ್ಲಿನ ಬಿಸಿಯೂಟ ಅವ್ಯವಸ್ಥೆ ಬಗ್ಗೆ ಆಡಳಿತರೂಢ ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿವೆ. ಬಿಸಿಯೂಟ ಯೋಜನೆಯಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕುವಲ್ಲಿ ಸರ್ಕಾರ ಪೂರ್ಣ ವಿಫಲವಾಗಿದೆ’ ಎಂದು ಟೀಕಿಸಿವೆ.

‘ಬಿಜೆಪಿ ಸರ್ಕಾರ ಕೇವಲ ಪ್ರಚಾರಕ್ಕೆ ಒತ್ತು ನೀಡುತ್ತಿದೆ. ವಾಸ್ತವವಾಗಿ ಸೌಲಭ್ಯಗಳು ತಲುಪುತ್ತಿಲ್ಲ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಟ್ವೀಟ್ ಮಾಡಿದ್ದರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್‌ ಕುಮಾರ್ ಲಲ್ಲು, ‘ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT