ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ ಪಕ್ಷಗಳು ದೂರವಾಗಿದ್ದು ‘ಇಂಡಿಯಾ’ ಮೇಲೆ ಪರಿಣಾಮವಾಗದು: ಸಚಿನ್

Published 11 ಫೆಬ್ರುವರಿ 2024, 12:26 IST
Last Updated 11 ಫೆಬ್ರುವರಿ 2024, 12:26 IST
ಅಕ್ಷರ ಗಾತ್ರ

ನವದೆಹಲಿ/ರಾಯಗಢ: ‘ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಬಲಿಷ್ಠವಾಗಿಯೇ ಇದೆ. ಕೆಲ ಅಂಗಪಕ್ಷಗಳು ದೂರ ಹೋಗಿರುವುದು ಮೈತ್ರಿಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಭಾನುವಾರ ಹೇಳಿದ್ದಾರೆ.

‘ವಿಪಕ್ಷಗಳ ಸಾಮೂಹಿಕ ಶಕ್ತಿಯು ಬಿಜೆಪಿಯ ಚಿಂತೆ ಹೆಚ್ಚಿಸಿದೆ. ಈ ಕಾರಣಕ್ಕಾಗಿಯೇ ಅದು ‘ಇಂಡಿಯಾ’ದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಜೆಡಿಯು ನಾಯಕ ನಿತೀಶ್‌ ಕುಮಾರ್ ಮತ್ತೆ ಎನ್‌ಡಿಎ ತೆಕ್ಕೆಗೆ ಹೋಗಿರುವುದು ‘ಇಂಡಿಯಾ’ದ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಉದ್ಭವಿಸುವಂತೆ ಮಾಡಿದೆಯೇ ಎಂಬುದಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ‘ಇಂಡಿಯಾ‘ದೊಂದಿಗೇ ಇದ್ದಾರೆ. ಸ್ಥಾನಗಳ ಹಂಚಿಕೆ ವಿಚಾರವಾಗಿ ಅವರೊಂದಿಗಿನ ಮಾತುಕತೆ ಫಲಪ್ರದವಾಗಲಿದೆ ಎಂಬ ವಿಶ್ವಾಸ ಇದೆ’ ಎಂದೂ ಹೇಳಿದ್ದಾರೆ.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ 370 ಸ್ಥಾನ ಗೆಲ್ಲಲಿದೆ ಹಾಗೂ ಎನ್‌ಡಿಎ 400ರ ಗಡಿ ದಾಟಲಿದೆ ಎಂಬುದಾಗಿ ಬಿಜೆಪಿ ಹೇಳುತ್ತಿದೆ. ಇದು ವಾಸ್ತವವನ್ನು ಅರಿಯದೇ ಆಡುವ ಮಾತು’ ಎಂದಿದ್ದಾರೆ.

‘ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಭಾರತ ಜೋಡೊ ನ್ಯಾಯ ಯಾತ್ರೆಯು, ಸ್ಥಾನಗಳ ಹಂಚಿಕೆ ಕುರಿತಾಗಿ ಮಿತ್ರ ಪಕ್ಷಗಳೊಂದಿಗೆ ನಡೆಸಬೇಕಾದ ಮಾತುಕತೆ ಮೇಲೆ ಪರಿಣಾಮ ಬೀರಿದೆ ಎಂಬ ಮಾತಿನಲ್ಲಿ ಹುರುಳಿಲ್ಲ. ಯಾತ್ರೆ ಜೊತೆಜೊತೆಗೆ, ಮಿತ್ರ ಪಕ್ಷಗಳೊಂದಿಗೆ ಈ ವಿಷಯವಾಗಿ ಮಾತುಕತೆಯೂ ನಡೆಯುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT