ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಯ CCTV ದೃಶ್ಯದಿಂದ ಧ್ವನಿ ಅಳಿಸಿ ಯಾರನ್ನು ರಕ್ಷಿಸುತ್ತಿದೆ ED..?: ಎಎಪಿ

Published 6 ಫೆಬ್ರುವರಿ 2024, 13:44 IST
Last Updated 6 ಫೆಬ್ರುವರಿ 2024, 13:44 IST
ಅಕ್ಷರ ಗಾತ್ರ

ನವದೆಹಲಿ: ‘ಅಬಕಾರಿ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನ ಪಕ್ಷದವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು, ತನಿಖೆ ಸಂದರ್ಭದ ಸಿಸಿಟಿವಿ ದೃಶ್ಯಾವಳಿಯ ಧ್ವನಿಯನ್ನು ಅಳಿಸಿದ್ದಾರೆ’ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಆರೋಪಿಸಿದೆ.

ಎಎಪಿ ಮಾಡಿದ ಅರೋಪವನ್ನು ಜಾರಿ ನಿರ್ದೇಶನಾಲಯ ನಿರಾಕರಿಸಿದೆ.

ಎಎಪಿ ನಾಯಕಿ ಹಾಗೂ ದೆಹಲಿ ಸಚಿವೆ ಅತಿಶಿ ಅವರು ಸುದ್ದಿಗೋಷ್ಠಿಯಲ್ಲಿ ತನಿಖಾ ಸಂಸ್ಥೆ ವಿರುದ್ಧ ಆರೋಪ ಮಾಡಿದರು.

‘2020ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಂತೆ ತನಿಖಾ ಸಂಸ್ಥೆಗಳು ತಾನು ನಡೆಸುವ ವಿಚಾರಣೆಯ ಧ್ವನಿ ಮತ್ತು ದೃಶ್ಯ ದಾಖಲಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಜಾರಿ ನಿರ್ದೇಶನಾಲಯ ಧ್ವನಿ ಅಳಿಸಿ ಹಾಕಿದೆ’ ಎಂದಿದ್ದಾರೆ.

ಅತಿಶಿ ಮಾಡಿರುವ ಆರೋಪವನ್ನು ತಳ್ಳಿಹಾಕಿರುವ ED, ‘ಆರೋಪಿಯ ಹೇಳಿಕೆ ಆಧರಿಸಿ ಧ್ವನಿಯನ್ನು ಅಳಿಸಲಾಗಿದೆ. ಆದರೆ ಸಂಸ್ಥೆ ವಿರುದ್ಧ ಇಂಥ ಆರೋಪ ಮಾಡಿರುವ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.

‘ಸಿಸಿಟಿವಿ ಸಾಧನದಲ್ಲಿ ದೃಶ್ಯ ಸೆರೆ ಹಿಡಿಯುವ ವ್ಯವಸ್ಥೆ ಇದೆಯೇ ಹೊರತು, ಧ್ವನಿ ದಾಖಲಿಸುವ ವ್ಯವಸ್ಥೆ ಇಲ್ಲ. ತನಿಖೆ ಸಂದರ್ಭದಲ್ಲಿ ‘ವಿಡಿಯೊ ಮಾತ್ರ’ ಮೋಡ್‌ನಲ್ಲೇ ದಾಖಲಿಸಲಾಗಿತ್ತು. ಧ್ವನಿ ಗ್ರಹಣ ವ್ಯವಸ್ಥೆಯನ್ನು ED ಕಳೆದ ಅಕ್ಟೋಬರ್‌ನಿಂದ ಅಳವಡಿಸಿಕೊಂಡಿದೆ’ ಎಂದು ಸಂಸ್ಥೆಯ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

‘ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸುತ್ತಿದ್ದರೂ, ಅಬಕಾರಿ ನೀತಿಯಲ್ಲಿ ನಡೆದಿದೆ ಎಂದು ಆರೋಪಿಸಿರುವ ಯಾವುದೇ ಅಂಶವನ್ನು ಪತ್ತೆ ಮಾಡಲು EDಗೆ ಸಾಧ್ಯವಾಗಿಲ್ಲ. ಈ ಹಗರಣದ ಹೆಸರಿನಲ್ಲಿ ಎಎಪಿ ಪಕ್ಷವನ್ನು ತನಿಖಾ ಸಂಸ್ಥೆ ನಿರಂತರವಾಗಿ ಬೆದರಿಸುತ್ತಲೇ ಬಂದಿದೆ’ ಎಂದು ಅತಿಶಿ ಆರೋಪಿಸಿದ್ದಾರೆ.

‘ಮೂಲಗಳ ಪ್ರಕಾರ ED ನಡೆಸಿದ ತನಿಖೆಯ ಎಲ್ಲಾ ದೃಶ್ಯಗಳ ಧ್ವನಿಯನ್ನೂ ಅಳಿಸಿಹಾಕಲಾಗಿದೆ. ಇದರಿಂದ ಇದೊಂದು ಹಗರಣದ ತನಿಖೆಯಲ್ಲ, ಬದಲಿಗೆ ತನಿಖೆಯೇ ದೊಡ್ಡ ಹಗರಣ ಎಂಬುದು ಸಾಬೀತಾಗಿದೆ. ವಿಚಾರಣೆಯ ದೃಶ್ಯಾವಳಿಯಿಂದ ಧ್ವನಿ ಅಳಿಸುವ ಮೂಲಕ ED ಯಾರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT