ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

DC vs MI: ಡೆಲ್ಲಿ ಪ್ಲೇ ಆಫ್‌ ಆಸೆಗೆ ಜೀವ ತುಂಬಿದ ಜಯ

ಜೇಕ್, ಸ್ಟಬ್ಸ್‌ ಅಬ್ಬರದ ಬ್ಯಾಟಿಂಗ್: ಮುಂಬೈ ತಂಡಕ್ಕೆ ನಿರಾಶೆ
Published 27 ಏಪ್ರಿಲ್ 2024, 16:13 IST
Last Updated 27 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ನವದೆಹಲಿ: ಜೇಕ್ ಫ್ರೆಸರ್ ಮೆಕ್‌ಗರ್ಕ್ ಬೀಸಾಟ ಮತ್ತು ಬೌಲರ್‌ಗಳ ಪರಿಣಾಮಕಾರಿ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇ ಆಫ್‌ ಪ್ರವೇಶದ ಆಸೆ ಜೀವಂತವಾಗಿ ಉಳಿಯಿತು. 

ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಡೆಲ್ಲಿ ತಂಡವು 10 ರನ್‌ಗಳಿಂದ  ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು. 

ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಆಸ್ಟ್ರೇಲಿಯಾದ ಯುವ ಬ್ಯಾಟರ್ ಮೆಕ್‌ಗರ್ಕ್  (84; 27ಎಸೆತ) ಅವರ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 257 ರನ್ ಮೊತ್ತ ಗಳಿಸಿತು. ಟ್ರಿಸ್ಟನ್  ಸ್ಟಬ್ಸ್‌  (ಅಜೇಯ 48; 25ಎ) ಹಾಗೂ ಶಾಯ್ ಹೋಪ್ (41; 17ಎ), ರಿಷಭ್ ಪಂತ್ (29; 19ಎ) ಅವರೂ ಮಹತ್ವದ ಕಾಣಿಕೆ ನೀಡಿದರು. 

22 ವರ್ಷದ ಮೆಕ್‌ಗರ್ಕ್ 11 ಬೌಂಡರಿ, 6 ಸಿಕ್ಸರ್ ಸಿಡಿಸಿದರು. 311ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್‌ ಗಳಿಸಿದರು. ಅಭಿಷೇಕ್ ಪೊರೆಲ್ ಜೊತೆಗೆ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 114 ರನ್‌ ಸೇರಿಸಿದರು. ಅವರು ಪಿಯೂಷ್ ಚಾವ್ಲಾ ಬೌಲಿಂಗ್‌ನಲ್ಲಿ ಔಟಾದರು. 

ನಂತರ ರಿಷಭ್ ಮತ್ತು ಹೋಪ್ ಮೊತ್ತ ಬೆಳೆಸಿದರು. ರಿಷರ್ ಹೆಲಿಕಾಫ್ಟರ್‌ ಶಾಟ್ ಆಡಿ ಚೆಂಡನ್ನು ಬೌಂಡರಿಗೆರೆಯಾಚೆ ಕಳಿಸಿದರು.

ಆದರೆ ತಂಡದ ಮೊತ್ತವು ದ್ವಿಶತಕ ದಾಟಲು ಸ್ಟಬ್ಸ್‌ ಆಟ ಪ್ರಮುಖವಾಯಿತು. ಅವರು ಲೂಕ್ ವುಡ್ ಹಾಕಿದ 18ನೇ ಓವರ್‌ನಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದು ಒಟ್ಟು 26 ರನ್‌ಗಳನ್ನು ಸೂರೆ ಮಾಡಿದರು. 

ತಿಲಕ್–ಹಾರ್ದಿಕ್ ಆಟ: ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 247 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. 

ಸೂರ್ಯಕುಮಾರ್ ಯಾದವ್ (26; 13ಎ), ತಿಲಕ್ ವರ್ಮಾ (63; 32ಎ, 4X4, 6X4), ಹಾರ್ದಿಕ್ ಪಾಂಡ್ಯ (46; 24ಎ, 4X4, 6X3) ಹಾಗೂ ಟಿಮ್ ಡೇವಿಡ್ (37; 17ಎ, 4X2, 6X3) ಅವರ ಹೋರಾಟಕ್ಕೆ ಜಯ ಒಲಿಯಲಿಲ್ಲ. 

ಡೆಲ್ಲಿ ತಂಡದ ವೇಗಿ ಖಲೀಲ್ ಅಹಮದ್ (45ಕ್ಕೆ2), ಮುಕೇಶ್ ಕುಮಾರ್ (59ಕ್ಕೆ3) ಹಾಗೂ ರಸಿಕ್ ದಾರ್ ಸಲಾಮ್ (34ಕ್ಕೆ3) ಅವರು ಎದುರಾಳಿ ತಂಡದ ಬ್ಯಾಟರ್‌ಗಳನ್ನು ನಿಯಂತ್ರಿಸಿದರು. ಮುಂಬೈ ತಂಡವು ಪವರ್‌ಪ್ಲೇ ಅವಧಿಯಲ್ಲಿಯೇ 65 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಯಶಸ್ವಿಯಾದರು. 

ವೇಗಿ ಖಲೀಲ್ ಅಹಮದ್ ರೋಹಿತ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಡೆಲ್ಲಿಗೆ ಮೊದಲ ಯಶಸ್ಸು ಕೊಡಿಸಿದರು. ತದನಂತರ ಮುಕೇಶ್ ಅವರು ಇಶಾನ್ ವಿಕೆಟ್ ಗಳಿಸಿದರು. ಸೂರ್ಯ ಕುಮಾರ್ ವಿಕೆಟ್ ಕೂಡ ಖಲೀಲ್ ಪಾಲಾಯಿತು. 

ಇದರಿಂದಾಗಿ ಅವಶ್ಯಕ ರನ್‌ ರೇಟ್‌ ಏರುತ್ತಲೇ ಹೋಯಿತು. ಆದರೂ ಮಧ್ಯದಲ್ಲಿ ಹಾರ್ದಿಕ್ ಹೋರಾಟ ಮಾಡಿ ತಂಡದಲ್ಲಿ ಭರವಸೆ ಮೂಡಿಸಿದರು. ಕುಲದೀಪ್ ಯಾದವ್ ಬೌಲಿಂಗ್ ಮಾಡಿದ 9ನೇ ಓವರ್‌ನಲ್ಲಿ ಹಾರ್ದಿಕ್ 19 ರನ್‌ ಗಳಿಸಿದರು. 

ಅವರೊಂದಿಗೆ ಸೇರಿದ ತಿಲಕ್ ವರ್ಮಾ ಕೂಡ ಅಬ್ಬರಿಸಿದರು. ಇಬ್ಬರ ಜೊತೆಯಾಟದಲ್ಲಿ 71 ರನ್‌ ಗಳು ಸೇರಿದವು. ವರ್ಮಾ ಅವರು ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್‌ ಹೊಡೆದರು. 

ಈ ಗೆಲುವಿನೊಂದಿಗೆ ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಒಟ್ಟು 10 ಪಾಯಿಂಟ್ಸ್‌ಗಳೊಂದಿಗೆ  ಐದನೇ ಸ್ಥಾನಕ್ಕೇರಿತು. 

ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ ಮತ್ತು ಖಲೀಲ್ ಅಹಮದ್ ಸಂಭ್ರಮ   –ಪಿಟಿಐ ಚಿತ್ರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ ಮತ್ತು ಖಲೀಲ್ ಅಹಮದ್ ಸಂಭ್ರಮ   –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT