ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ: BJP ಸೇರುವುದಾಗಿ ಹೇಳಿದ HC ನ್ಯಾಯಮೂರ್ತಿ

Published 5 ಮಾರ್ಚ್ 2024, 10:16 IST
Last Updated 5 ಮಾರ್ಚ್ 2024, 13:55 IST
ಅಕ್ಷರ ಗಾತ್ರ

ಕೋಲ್ಕತ್ತಾ: ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಗುರುವಾರ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

ಹೈಕೋರ್ಟ್‌ನ ಹೊರಭಾಗದಲ್ಲಿ ಸ್ಥಾಪಿಸಲಾಗಿರುವ ಸ್ವಾತಂತ್ರ್ಯ ಹೋರಾಟಗಾರ ಮಾಸ್ಟರ್‌ ಡಾ ಸೂರ್ಯ ಸೇನ್‌ ಅವರ ಪ್ರತಿಮೆ ಬಳಿ ಸುದ್ದಿಗಾರರಿಗೆ ಮಂಗಳವಾರ ಈ ಮಾಹಿತಿ ನೀಡಿದ ಅವರು, ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಉದ್ದೇಶದಿಂದ ರಾಷ್ಟ್ರೀಯ ಪಕ್ಷ ಬಿಜೆಪಿ ಸೇರುತ್ತಿರುವುದಾಗಿ ಹೇಳಿದ್ದಾರೆ.

ನ್ಯಾ. ಗಂಗೋಪಾಧ್ಯಾಯ ಅವರು 2024ರಲ್ಲಿ ಸೇವಾನಿವೃತ್ತಿ ಹೊಂದುವವರಿದ್ದರು. ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ಅವರಿಗೆ ಮಂಗಳವಾರ ಕಳುಹಿಸಿದ್ದಾರೆ. ಇದರ ಪ್ರತಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಕೊಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿದ್ದಾರೆ.

ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ಪ್ರಾಯೋಜಕತ್ವದ ಹಾಗೂ ಅನುದಾನಿತ ಶಾಲೆಗಳ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗೆ ಅಭಿಜಿತ್ ನಿರ್ದೇಶಿಸಿದ್ದರು.

ತ್ವರಿತ ಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿವುದರಲ್ಲಿ ನ್ಯಾ. ಅಭಿಜಿತ್ ಖ್ಯಾತಿ ಪಡೆದಿದ್ದರು. ಕೆಲವೊಂದು ಪ್ರಕರಣಗಳನ್ನು ಕೆಲ ಗಂಟೆಗಳಲ್ಲೇ ಇತ್ಯರ್ಥಪಡಿಸಿದ ಉದಾಹರಣೆಗಳೂ ಇವೆ. ಶಾಲಾ ಶಿಕ್ಷಣದಲ್ಲಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಹಲವು ತೀರ್ಪುಗಳನ್ನು ನೀಡಿದ್ದಾರೆ. ಇವರ ಕೆಲವೊಂದು ತೀರ್ಪುಗಳ ಕುರಿತು ಆಡಳಿತ ಪಕ್ಷದ ಮುಖಂಡರ ಅಸಮ್ಮತಿ ವ್ಯಕ್ತಪಡಿಸಿದ್ದೂ ಇದೆ.

ಪಶ್ಚಿಮ ಬಂಗಾಳದಲ್ಲಿ ಎಂಬಿಬಿಎಸ್ ಸೀಟುಗಳ ಹಂಚಿಕೆಯಲ್ಲಿ ಮೀಸಲು ಅಭ್ಯರ್ಥಿಗಳಿಂದ ಪಡೆಯಬೇಕಾದ ಪ್ರಮಾಣಪತ್ರಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ್ದ ಅಭಿಜಿತ್ ಇದ್ದ ಏಕ ಸದಸ್ಯ ಪೀಠಕ್ಕೂ ಹಾಗೂ ವಿಭಾಗೀಯ ಪೀಠದ ನಡುವೆ ಭಿನ್ನಾಭಿಪ್ರಾಯಗಳೂ ಇದ್ದ ಉದಾಹರಣೆಗಳಿವೆ.

‘ನ್ಯಾಯಾಧೀಶರ ಹುದ್ದೆಯಲ್ಲಿ ಬುಧವಾರ ನನ್ನ ಕೊನೆಯ ದಿನ. ಇನ್ನು ಮುಂದೆ ಯಾವ ತೀರ್ಪನ್ನೂ ನೀಡುವುದಿಲ್ಲ. ನನಗೆ ವಹಿಸಿದ್ದ ಪ್ರಕರಣಗಳಿಂದ ನಾನು ಬಿಡುಗಡೆ ಪಡೆಯುತ್ತಿದ್ದೇನೆ’ ಎಂದು ಅವರು ಘೋಷಿಸಿದರು. 

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ನೀಡಲಿಲ್ಲ. ‘ನಾನು ಸ್ಪರ್ಧಿಸಬೇಕೇ ಎಂಬುದನ್ನು ಬಿಜೆಪಿ ವರಿಷ್ಠರು ತೀರ್ಮಾನಿಸಬೇಕು. ಅವರ ನಿರ್ಧಾರವನ್ನು ನಾನು ಒಪ್ಪುತ್ತೇನೆ’ ಎಂದರು.

‘ಟಿಎಂಸಿ ಪಕ್ಷದ ಅನ್ಯಾಯ ಹಾಗೂ ಭ್ರಷ್ಟಾಚಾರ ವಿರುದ್ಧ ನಾನು ಹೋರಾಟ ನಡೆಸುತ್ತೇನೆ. ಟಿಎಂಸಿ ನಾಯಕರು ಕೆಲವು ದಿನಗಳಿಂದ ನನ್ನ ವಿರುದ್ಧ ಮಾನಹಾನಿಕರವಾದ ಭಾಷೆಯನ್ನು ಬಳಸುತ್ತಿದ್ದಾರೆ. ತೀರ್ಪು ಇಷ್ಟವಾಗಲಿಲ್ಲ ಎಂಬ ಕಾರಣಕ್ಕೇ ನ್ಯಾಯಮೂರ್ತಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಲಾಗದು. ಇಂಥ ಪ್ರಚೋದನಕಾರಿ ವರ್ತನೆಗಳೇ ರಾಜಕೀಯ ಪ್ರವೇಶಿಸುವ ನನ್ನ ತೀರ್ಮಾನಕ್ಕೆ ಕಾರಣವಾಗಿದೆ’ ಎಂದು ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡರು.

‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ದಿನಗಣನೆ ಆರಂಭವಾಗಿದೆ. ಸಿಪಿಎಂ ನೇತೃತ್ವದ ಎಡರಂಗವು 2009ರ ಲೋಕಸಭೆ ಚುನಾವಣೆಯ ನಂತರ ಅಧಃಪತನವಾಯಿತು. ಟಿಎಂಸಿ ಕೂಡಾ ಅಂತಹದೇ ಸ್ಥಿತಿ ಎದುರಿಸಲಿದೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿರುದ್ಧವೂ ಭ್ರಷ್ಟಾಚಾರದ ಆರೋಪವಿರುವ ಕುರಿತ ಪ್ರಶ್ನೆಗೆ, ‘ಅವರು ಮತ್ತು ಕೆಲ ಟಿಎಂಸಿ ನಾಯಕರ ವಿರುದ್ಧ ಪ್ರಕರಣವನ್ನು ರೂಪಿಸಲಾಗಿತ್ತು’ ಎಂದು ಹೇಳಿದರು.

ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಅಭಿಜಿತ್ ಗಂಗೋಪಾಧ್ಯಾಯ ಅವರ 2018ರ ಮೇ 2ರಂದು ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2020ರ ಜುಲೈ 30ರಂದು ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ರಾಜಕೀಯ ಪ್ರವೇಶ ಕುರಿತು ಟಿಎಂಸಿ ಮುಖಂಡ ಕುನಾಲ್ ಘೋಷ್ ಅವರು ಎಕ್ಸ್‌ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ‘ನೀವು ಯಾವುದಾದರೂ ಪಕ್ಷ ಸೇರಿ. ಆದರೆ ಈ ಹಿಂದೆ ನೀಡಿದ ಆದೇಶಗಳು ಮತ್ತು ನಿರ್ದೇಶನಗಳ ಕುರಿತ ಪ್ರಶ್ನೆಗಳು ಶಾಶ್ವತವಾಗಿ ಉಳಿಯಲಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT