ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಣುಶಿಕ್ಷೆ ಜಾರಿಗೆ ಪರ್ಯಾಯ ಕ್ರಮ: ಪರಿಶೀಲನೆಗೆ ತಜ್ಞರ ಸಮಿತಿ- ಕೇಂದ್ರಕ್ಕೆ ಪತ್ರ

Published 25 ಜುಲೈ 2023, 11:27 IST
Last Updated 25 ಜುಲೈ 2023, 11:27 IST
ಅಕ್ಷರ ಗಾತ್ರ

ನವದೆಹಲಿ: ಮರಣದಂಡನೆ ಶಿಕ್ಷೆಯ ಅಪರಾಧಿಗಳನ್ನು ನೇಣಿಗೆ ಏರಿಸಲು ಸದ್ಯ ಬಳಕೆಯಲ್ಲಿರುವ ಕ್ರಮವನ್ನು ಪರಿಶೀಲಿಸಿ ಸಲಹೆ ನೀಡಲು ತಜ್ಞರ ಸಮಿತಿ ರಚನೆಗೆ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಪಿ.ಪಾರ್ದಿವಾಲ, ಮನೋಜ್‌ ಮಿಶ್ರಾ ಅವರಿದ್ದ ಪೀಠಕ್ಕೆ ಹಿರಿಯ ವಕೀಲ ಸೋನಿಯಾ ಮಾಥೂರ್‌ ಅವರು ಮಂಗಳವಾರ ಈ ಮಾಹಿತಿ ನೀಡಿದರು. 

ತಜ್ಞರ ಸಮಿತಿಯು ನೀಡುವ ಸಲಹೆಗಳನ್ನು ಆಧರಿಸಿದ ವರದಿಯನ್ನು ಪೀಠಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅತ್ಯುನ್ನತ ನ್ಯಾಯಾಂಗ ಅಧಿಕಾರಿ ಪ್ರವಾಸದಲ್ಲಿರುವ ಕಾರಣ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದೂ ಮನವಿ ಮಾಡಿದರು.

ತಜ್ಞರ ಸಮಿತಿಯನ್ನು ರಚಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಅಟಾರ್ನಿ ಜನರಲ್ ಅವರು ಮಾಹಿತಿ ನೀಡಿದ್ದಾರೆ. ಈ ಕಾರಣದಿಂದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ನ್ಯಾಯಪೀಠ ತಿಳಿಸಿತು.

ನೇಣಿಗೇರಿಸುವ ಶಿಕ್ಷೆಯನ್ನು ಸೂಕ್ತ ರೀತಿ, ಕಡಿಮೆ ನೋವಾಗುವಂತೆ ಜಾರಿಗೊಳಿಸಲು ಅಗತ್ಯ ಸಲಹೆ ನೀಡಲು ಸಮಿತಿ ರಚಿಸುವ ಚಿಂತನೆ ಇದೆ. ಅದಕ್ಕಾಗಿ,ಈಗ ಬಳಸುತ್ತಿರುವ ಶಿಕ್ಷೆ ಜಾರಿ ಕ್ರಮಗಳ ಕುರಿತು ವಿವರ ನೀಡಬೇಕು ಎಂದು ಮಾ.21ರಂದು ತಿಳಿಸಿತ್ತು.

ವಕೀಲ ರಿಷಿ ಮಲ್ಹೋತ್ರಾ ಅವರು ನೇಣಿಗೇರಿಸುವ ಸಂಬಂಧ ಈಗ ಚಾಲ್ತಿಯಲ್ಲಿರುವ ಕ್ರಮ ರದ್ದುಪಡಿಸಿ, ಕಡಿಮೆ ನೋವು ಆಗುವಂತೆ ಮಾರಕ ಇಂಜೆಕ್ಷನ್ ನೀಡುವುದು, ಗುಂಡು ಹಾರಿಸುವುದು ಸೇರಿದಂತೆ ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸಬೇಕು ಎಂದು 2017ರಲ್ಲಿ ಅರ್ಜಿ ಸಲ್ಲಿಸಿದ್ದರು. ನೇಣಿಗೇರಿಸುವ ಶಿಕ್ಷೆ ಕ್ರಮವನ್ನು ಅಮೆರಿಕದ 36 ರಾಜ್ಯಗಳು ಈಗಾಗಲೇ ರದ್ದುಪಡಿಸಿವೆ ಎಂದು ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT